ಕರ್ನಾಟಕದಲ್ಲಿ ಪ್ರಧಾನಿ ಮೋದಿ ಸರಣಿ ರ‍್ಯಾಲಿಗೆ ಬಿಜೆಪಿ ಸಿದ್ಧತೆ

Social Share

ಬೆಂಗಳೂರು,ಜ.13- ಹುಬ್ಬಳ್ಳಿಯಲ್ಲಿ ನಡೆದ ರಾಷ್ಟ್ರೀಯ ಯುವಜನೋತ್ಸವದ ಉದ್ಘಾಟನೆ ಬೆನ್ನಲ್ಲೇ ಮುಂದಿನ ಒಂದೂವರೆ ತಿಂಗಳ ಅವಧಿಯಲ್ಲಿ 5ರಿಂದ 6 ಬಾರಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಈ ವೇಳೆ ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ಅವರು ಚಾಲನೆ ನೀಡಲಿದ್ದಾರೆ.

ಚುನಾವಣಾ ವರ್ಷವಾದ ಕಾರಣ ಎಲೆಕ್ಷನ್ ಕಾವು ಏರತೊಡಗಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಭೇಟಿ ಸಹಜವಾಗಿ ರಾಜಕೀಯ ಮಹತ್ವ ಪಡೆದುಕೊಂಡಿದೆ. ಇತ್ತೀಚೆಗಷ್ಟೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿದ್ದರು. ಈ ವೇಳೆ ಮಹತ್ವಾಕಾಂಕ್ಷಿಯ ಉಪನಗರ ರೈಲು ಯೋಜನೆ ಕಾಮಗಾರಿಗೆ ಶಿಲಾನ್ಯಾಸ ಮಾಡಿದ್ದರು. ಕೆಲ ತಿಂಗಳ ಹಿಂದೆ ಯೋಗ ದಿನಾಚರಣೆ ಪ್ರಯುಕ್ತ ಮೈಸೂರಿಗೂ ಬಂದಿದ್ದರು.

ಇದರ ನಡುವೆ ಮಂಗಳೂರಿನಲ್ಲೊಂದು ಸಮಾವೇಶ ನಡೆದಿತ್ತು. ಹೀಗೆ ಪ್ರಧಾನಿಯವರು ಯಾವಾಗ ಭೇಟಿ ನೀಡಿದರೂ ಅಭಿವೃದ್ಧಿಯ ಅಜೆಂಡಾ ಹಿಡಿದುಕೊಂಡಿರುತ್ತಾರೆ. ಅದರ ಮುಂದುವರಿದ ಭಾಗವಾಗಿ ಜನವರಿ, ಫೆಬ್ರವರಿಯಲ್ಲಿ ಮತ್ತಷ್ಟು ಯೋಜನೆಗಳಿಗೆ ಪ್ರಧಾನಿ ಹಸಿರು ನಿಶಾನೆ ತೋರಲಿದ್ದಾರೆ.

ರಾಜ್ಯದಲ್ಲಿ 3 ದಿನ ವಾಸ್ತವ್ಯ ಹೂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಚುನಾವಣಾ ಸಿದ್ಧತೆಗೆ ಬೇಕಾದ ಮಾರ್ಗದರ್ಶಿ ಸೂತ್ರವನ್ನು ರಾಜ್ಯ ಬಿಜೆಪಿ ಮುಂದಿಟ್ಟಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೂ ಸಭೆ ನಡೆಸಿ ಹೋಗಿದ್ದಾರೆ. ಅಭಿವೃದ್ಧಿ ಮಂತ್ರ ಪಠಿಸುವ ಪ್ರಧಾನಿ ನರೇಂದ್ರಮೋದಿ ಆಗಮನ ಬಿಜೆಪಿಯ ಉತ್ಸಾಹ ಮತ್ತಷ್ಟು ಹೆಚ್ಚಸಲಿದೆ ಎಂದು ನಿರೀಕ್ಷಿಸಲಾಗಿದೆ.

ರ‍್ಯಾಪಿಡ್ ರಸ್ತೆ ನಿರ್ಮಾಣಕ್ಕೆ ಬ್ರೇಕ್ ಹಾಕಿದ ಸಿಎಂ ಬೊಮ್ಮಾಯಿ

ಜನವರಿ 19ರಂದು ಕಲಬುರ್ಗಿಯಲ್ಲಿ ಪ್ರಧಾನಿ ನೇತೃತ್ವದಲ್ಲಿ ದೊಡ್ಡ ಸಮಾವೇಶ ನಡೆಯಲಿದೆ. ಲಂಬಾಣಿ ಸಮಾಜದ ಫಲಾನುಭವಿಗಳಿಗೆ ಪ್ರಧಾನಿ ಅವರು ಹಕ್ಕು ಪತ್ರ ವಿತರಿಸಲಿದ್ದಾರೆ. ಫೆಪ್ರವರಿ 12ರಂದು ಶಿವಮೊಗ್ಗದಲ್ಲಿ ನೂತನ ವಿಮಾನ ನಿಲ್ದಾಣವನ್ನು ಪ್ರಧಾನಿ ಅವರು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿಸಾರ್ವಜನಿಕ ಸಭೆ ನಡೆಸಲು ಉದ್ದೇಶಿಸಲಾಗಿದೆ.

ಫೆಬ್ರವರಿ 13ರಂದು ಬೆಂಗಳೂರಿನಲ್ಲಿ ಏರೋ ಇಂಡಿಯ-2023 ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ. ಫೆಬ್ರವರಿ ಅಂತ್ಯದಲ್ಲಿ ಧಾರವಾಡ ಐಐಟಿ ಉದ್ಘಾಟನೆಗೂ ಪ್ರಧಾನಿ ಆಗಮಿಸುವ ನಿರೀಕ್ಷೆಯಿದೆ. ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ಕಾರಿಡಾರ್ ಉದ್ಘಾಟನೆಗೂ ಪ್ರಧಾನಿ ಬರುತ್ತಿದ್ದು ದಿನಾಂಕ ನಿಗದಿಯಾಗುವುದು ಬಾಕಿಯಿದೆ.

ಮಾರ್ಚ್ ತಿಂಗಳಲ್ಲಿ ಕಾರವಾರದ ಕದಂಬ ನೌಕಾನೆಲೆಯಲ್ಲಿ ನಡೆಯಲಿರುವ ಸಂಯೋಜಿತ ಕಮಾಂಡರ್‍ಗಳ ಸಮ್ಮೇಳನದಲ್ಲಿ (ಸಿಸಿಸಿ) ಮೋದಿ ಭಾಗವಹಿಸುವ ನಿರೀಕ್ಷೆ ಇದೆ.

ಪೂರ್ವ ಮತ್ತು ಪಶ್ಚಿಮ ನೌಕಾಪಡೆಗಳನ್ನು ವಿಲೀನಗೊಳಿಸಿ, ಭೂಸೇನೆ, ವಾಯುಸೇನೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್‍ನ ಸ್ವತ್ತುಗಳನ್ನು ಹಾಗೂ ಕಾರ್ಯಾಚರಣೆಯನ್ನು ಒಂದೇ ವೇದಿಕೆಯಡಿ ನಿಯಂತ್ರಣಕ್ಕೆ ತರುವ ಮೆರಿಟೈಮ್ ಥಿಯೇಟರ್ ಕಮಾಂಡ್ (ಎಂಟಿಸಿ) ಸ್ಥಾಪನೆ ಈ ಹಿಂದಿನ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಸಿ) ಬಿಪಿನ್ ರಾವತ್ ಅವರ ಕನಸಿನ ಕೂಸಾಗಿತ್ತು. ಮೆರಿಟೈಮ್ ಥಿಯೇಟರ್ ಕಮಾಂಡ್‍ನ ಕುರಿತು ರಾವತ್ ಅವರು ಸಾಕಷ್ಟು ಅಧ್ಯಯನ ನಡೆಸಿ, ರಚನೆ ಕುರಿತು ಯೋಜನೆಗಳನ್ನು ರೂಪಿಸಿದ್ದರು. ಆದರೆ ಅವರ ನಿಧನದ ಬಳಿಕ ಮುಂದೇನು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು.

ಇದೀಗ ಮತ್ತೆ ಈ ಬಗ್ಗೆ ಸಿದ್ಧತಾ ಕಾರ್ಯಗಳು ಚುರುಕುಗೊಂಡಿದ್ದು, ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಇದರ ಕೇಂದ್ರ ಕಚೇರಿ ಸ್ಥಾಪಿಸಲು ತಯಾರಿ ನಡೆದಿವೆ ಎನ್ನಲಾಗುತ್ತಿದೆ. ಕಾರವಾರದ ಕದಂಬ ನೌಕಾನೆಲೆಯಲ್ಲಿ ಸೀಬರ್ಡ್ ಯೋಜನೆಯ ಎರಡನೇ ಹಂತದ ಕಾಮಗಾರಿಗಳು ಈಗಾಗಲೇ ವೇಗ ಪಡೆದುಕೊಂಡಿದ್ದು, ಒಮ್ಮೆ ಈ ಕಾಮಗಾರಿಗಳು ಮುಕ್ತಾಯಗೊಂಡಲ್ಲಿ ಮೆರಿಟೈಮ್ ಥಿಯೇಟರ್ ಕಮಾಂಡ್ ಸ್ಥಾಪನೆಗೆ ಎಲ್ಲಾ ಸೌಕರ್ಯಗಳು ಸಿಕ್ಕಂತಾಗುತ್ತವೆ ಎನ್ನುತ್ತವೆ ಮೂಲಗಳು.

ಲಕ್ಷಕ್ಕೂ ಅಧಿಕ ಸೈನಿಕರು, ನೂರಾರು ಯುದ್ಧನೌಕೆಗಳು, ವಿಮಾನಗಳು ಈ ಮೆರಿಟೈಮ್ ಥಿಯೇಟರ್ ಕಮಾಂಡ್‍ನ ಅಡಿ ಕಾರವಾರಕ್ಕೆ ಬರಲಿದ್ದು, ಇದಕ್ಕಾಗಿ ಅವಶ್ಯಕ ಮೂಲಸೌಕರ್ಯಗಳ ಅಭಿವೃದ್ಧಿಗೊಳಿಸುವ ಕಾರ್ಯ ಸೀಬರ್ಡ್ ಎರಡನೇ ಹಂತದ ಯೋಜನೆಯಲ್ಲಿ ಭರದಿಂದ ಸಾಗಿದೆ.

ಕಾರವಾರದಲ್ಲಿ ಮೆರಿಟೈಮ್ ಥಿಯೇಟರ್ ಕಮಾಂಡ್ ಸ್ಥಾಪನೆಯ ಕುರಿತಾಗಿ ಸರ್ಕಾರ ಅಕೃತವಾಗಿ ಆದೇಶಿಸುವುದೊಂದೇ ಬಾಕಿ ಇದೆ. ಆದರೆ ಇದಕ್ಕೆ ಪೂರಕವಾಗಿ ಈಗಾಗಲೇ ನೌಕಾನೆಲೆಯಲ್ಲಿ ತಯಾರಿಗಳು ನಡೆದಿದ್ದು, ಈ ನಿಟ್ಟಿನಲ್ಲಿ ಮಾರ್ಚ್ ನಲ್ಲಿ ನೌಕಾನೆಲೆಯಲ್ಲಿ ಈ ಸಂಯೋಜಿತ ಕಮಾಂಡರ್‍ಗಳ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ.

ರಾಂಚಿ ಹೊರವಲಯದಲ್ಲಿ ಭದ್ರತಾ ಪಡೆ-ನಕ್ಸಲರ ನಡುವೆ ಗುಂಡಿನ ಚಕಮಕಿ

ಹಾಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಈ ವೇಳೆ ಪ್ರಧಾನಿ ಮೋದಿಯವರಿಗೆ ಈ ಮೆರಿಟೈಮ್ ಥಿಯೇಟರ್ ಕಮಾಂಡ್‍ನ ಕಾರ್ಯಾಚರಣೆಯ ಸಮಗ್ರ ಮಾಹಿತಿ ಒದಗಿಸಲಿದ್ದಾರೆ ಎನ್ನಲಾಗಿದೆ.

ಭಾರತೀಯ ನೌಕಾಪಡೆ ಆಯೋಜಿಸುವ ಈ ಸಮ್ಮೇಳನದಲ್ಲಿ ಕೇವಲ ಕಮಾಂಡರ್ ಇನ್ ಚೀಫ್ ರ್ಯಾಂಕ್‍ನ ಅಧಿಕಾರಿಗಳು ಮಾತ್ರ ಭಾಗವಹಿಸಲಿದ್ದು, ಇಲ್ಲಿ ಮೂರೂ ಸೇನೆಗೆ ಸಂಬಂಧಿಸಿದ ಬಹುಮುಖ್ಯ ಚರ್ಚೆಗಳು ನಡೆಯಲಿವೆ ಎನ್ನಲಾಗುತ್ತಿದೆ. ಆದರೆ ಪ್ರಧಾನಿ ಭೇಟಿಯ ಬಗ್ಗೆ ರಕ್ಷಣಾ ಇಲಾಖೆ ಅಥವಾ ಪ್ರಧಾನಮಂತ್ರಿ ಕಾರ್ಯಾಲಯ ಈವರೆಗೆ ಅಧಿಕೃತಗೊಳಿಸಿಲ್ಲ.

ಮುಂದಿನ ಹಂತದಲ್ಲಿ ಪ್ರಚಾರ ಸಭೆ:
ಮಾರ್ಚ್ ಮಧ್ಯ ಭಾಗ ಅಥವಾ ಅಂತ್ಯದಲ್ಲಿ ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಅಲ್ಲಿಯವರೆಗೆ ರಾಜ್ಯದಲ್ಲಿಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಪೂರ್ಣಗೊಂಡ ಯೋಜನೆ ಉದ್ಘಾಟನೆಯ ಭರಾಟೆ ಇರಲಿದೆ.

ಇದರಲ್ಲಿ ಪ್ರಮುಖ ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಅದಾದ ಬಳಿ ಮುಂದಿನ ಹಂತದಲ್ಲಿ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಕಡೆಯಿಂದ ಹೆಚ್ಚು ರ್ಯಾಲಿಗಳನ್ನು ಮಾಡಿಸುವುದು ರಾಜ್ಯ ಬಿಜೆಪಿಯ ಉದ್ದೇಶವಾಗಿದೆ.

Prime Minister, Narendra Modi, visit, Karnataka,

Articles You Might Like

Share This Article