ಪ್ರಧಾನಿ ಮೋದಿ ಗುಜರಾತ್ ಭೇಟಿ

Social Share

ಅಹಮಾದಾಬಾದ್(ಗುಜರಾತ್),ಸೆ.29- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎರಡು ದಿನಗಳ ಪ್ರವಾಸದ ಮೇಲೆ ತಮ್ಮ ತವರು ರಾಜ್ಯ ಗುಜರಾತ್‍ಗೆ ಇಂದು ಭೇಟಿ ನೀಡಿದ್ದಾರೆ. ಇಂದು ಬೆಳಗ್ಗೆ ಸೂರತ್ ಏರ್‍ಪೋರ್ಟ್‍ನಲ್ಲಿ ಆಗಮಿಸಿದ ಪ್ರಧಾನಿಗಳನ್ನು ಮುಖ್ಯಮಂತ್ರಿ ಭುಪೇಂದ್ರ ಪಟೇಲ್ ಅವರು ಬರಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಮೊದಲ ಬಾರಿಗೆ ಆಯೋಜಿಸಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಪ್ರಧಾನಿ ಮೋದಿ ಅವರು ಇಂದು ಸಂಜೆ ಉದ್ಘಾಟಿಸಲಿದ್ದಾರೆ. ಎರಡು ದಿನಗಳ ಗುಜರಾತ್ ಭೇಟಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಪ್ರಮುಖವಾಗಿ ಡೈಮಂಡ್ ರಿಸರ್ಚ್ ಮತ್ತು ಮರ್ಕೆಂಟೈಲ್ (ಡ್ರೀಮ್) ಸಿಟಿಯ ಮುಖ್ಯ ಪ್ರವೇಶ ದ್ವಾರದ ಉದ್ಘಾಟನೆ ಮತ್ತು ಹಂತ-1ರ ಕಾಮಗಾರಿಗಳು ಸೇರಿದಂತೆ ಒಟ್ಟು 3,400 ಕೋಟಿ ರೂ. ವೆಚ್ಚ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ.

ಪಿಎಂ ಮೋದಿ ಸೂರತ್‍ನಿಂದ ಭಾವನಗರಕ್ಕೆ ಹೋಗಲಿದ್ದು, ಅಲ್ಲಿ ವಿಶ್ವದ ಮೊದಲ ಸಿಎನ್‍ಜಿ ಟರ್ಮಿನಲ್ ಮತ್ತು ಬ್ರೌನ್‍ಫೀಲ್ಡ್ ಬಂದರಿನ ಶಿಲಾನ್ಯಾಸ ಸೇರಿದಂತೆ ಸುಮಾರು 6,000 ಕೋಟಿ ರೂ. ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 36 ನೇ ರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದು, ಗುರುವಾರ ಸಂಜೆ ಉದ್ಘಾಟನೆ ಮಾಡಲಿದ್ದಾರೆ.

ಗುಜರಾತ್‍ನಲ್ಲಿ ಬಿಜೆಪಿ ಸುಮಾರು ಮೂರು ದಶಕಗಳ ಕಾಲ ಆಡಳಿತ ನಡೆಸಿದೆ. ಡಿಸೆಂಬರ್‍ನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ರಾಜ್ಯಕ್ಕೆ ಭೇಟಿ ನೀಡಿರುವುದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

Articles You Might Like

Share This Article