ಕೆಂಪೇಗೌಡರ 108 ಅಡಿ ಎತ್ತರದ ಪ್ರಗತಿ ಪ್ರತಿಮೆ ಅನಾವರಣ

Social Share

ಬೆಂಗಳೂರು,ನ.11-ದೇವನಹಳ್ಳಿ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಿರ್ಮಾಣ ಮಾಡಲಾಗಿದ್ದ ಬೆಂಗಳೂರು ನಿರ್ಮಾತೃ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು.

ಪ್ರಧಾನಿ ನರೇಂದ್ರಮೋದಿ ಅವರು ಕೆಂಪೇಗೌಡ ಪ್ರತಿಮೆಯ ಪಾದಕ್ಕೆ ಜಲಾಭಿಷೇಕ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು. 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ಬೆಂಗಳೂರಿನಲ್ಲಿರುವ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಪಡೆದಿದೆ.

84 ಕೋಟಿ ವೆಚ್ಚದಲ್ಲಿ ಕಂಚಿನ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ರಾಜ್ಯ ಸರಕಾರವೇ ಪ್ರತಿಮೆ ನಿರ್ಮಾಣ ಕಾರ್ಯ ಮಾಡಿದೆ. ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಉಪಾಧ್ಯಕ್ಷತೆಯಲ್ಲಿದ್ದ ಕೆಂಪೇಗೌಡ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಕಾರ್ಯದ ಉಸ್ತುವಾರಿ ಹೊತ್ತುಕೊಂಡಿತ್ತು.

21 ಎಕರೆ: 21 ಎಕರೆ ವಿಶಾಲ ಪ್ರದೇಶದಲ್ಲಿ ಕೆಂಪೇಗೌಡರ ಪ್ರತಿಮೆ ರೂಪಿಸಲಾಗಿದೆ. ಪ್ರತಿಮೆ ಇರುವ ಸ್ಥಳವನ್ನು ಎರಡು ಹಂತದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಉದ್ಯಾನದಲ್ಲಿ ಥಿಯೇಟರ್, ಪಾದಚಾರಿ ಮಾರ್ಗ, ಕಾರಂಜಿ, ಪುಷ್ಪ ಉದ್ಯಾನ, ಜನರ ಮನೋರಂಜನೆಗೆ ಅಗತ್ಯವಾದ ವ್ಯವಸ್ಥೆ ರೂಪಿಸಲಾಗಿದೆ.

ಭೂಮಿಯಿಂದ 18 ಅಡಿ ಎತ್ತರದ ಪೀಠದ ಮೇಲೆ ಕೆಂಪೇಗೌಡರ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಗುಜರಾತ್ ನ ವಲ್ಲಭಭಾಯಿ ಪಟೇಲ್ ಪ್ರತಿಮೆ ರೂಪಿಸಿದ್ದ ಉತ್ತರ ಪ್ರದೇಶ ಮೂಲದ ರಾಮ್ ಸುತಾರ್ ಆರ್ಟ್ ಕ್ರಿಯೇಷನ್ಸ್ ಲಿಮಿಟೆಡ್ ಕೆಂಪೇಗೌಡ ಪ್ರತಿಮೆಯನ್ನು ವಿನ್ಯಾಸಗೊಳಿಸಿದೆ.

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್-2 ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

218 ಟನ್ ಕಂಚು ಹಾಗೂ ಉಕ್ಕನ್ನು ಬಳಸಿಕೊಂಡು ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. 98 ಟನ್ ಕಂಚು, 120 ಟನ್ ಉಕ್ಕನ್ನು ಬಳಕೆ ಮಾಡಿಕೊಳ್ಳಲಾಗಿದೆ. ಕೆಂಪೇಗೌಡರು ಕೈಲಿ ಹಿಡಿದಿರುವ ಖಡ್ಗದ ತೂಕ ಬರೋಬ್ಬರಿ 4 ಸಾವಿರ ಕೆ.ಜಿ.

ನಾಲ್ಕು ಗೋಪುರ: 24 ಅಡಿ ಎತ್ತರ, 7 ಅಡಿ ಸುತ್ತಳತೆಯ ನಾಲ್ಕು ಗೋಪುರಗಳನ್ನು ಪ್ರತಿಮೆ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ. ಕೆಂಪೇಗೌಡರ ಆಳ್ವಿಕೆಯ ಪ್ರಮುಖ ಭಾಗವಾಗಿದ್ದ ಗೋಪುರಗಳನ್ನು ಸಹ ಕಂಚಿನಲ್ಲಿ ನಿರ್ಮಿಸಲಾಗಿದೆ.

ಉತ್ತರಪ್ರದೇಶದ ರಾಮ ಸುತಾರ್ ಕ್ರಿಯೇಷನ್ ಕಂಪನಿಯಿಂದ ಟ್ರಕ್ ಮೂಲಕ ಪ್ರತಿಮೆಗೆ ಜೋಡಿಸುವ 10 ಅಡಿ ಉದ್ದದ ಬಿಡಿ ಭಾಗಗಳನ್ನು ತಂದು ಉದ್ದೇಶಿತ ಪ್ರತಿಮೆಗೆ ಜೋಡಿಸಲಾಗಿದೆ.

ಕೆಂಪೇಗೌಡರು ಒಬ್ಬ ಸೂರ್ತಿಯ ಚಿಲುಮೆಯಂತಿದ್ದ ನಾಯಕರು. ದೂರದೃಷ್ಟಿಯ ನಾಯಕ ಹೇಗಿರಬೇಕು ಎಂಬುದಕ್ಕೆ ಅವರು ಸಂಕೇತವಾಗಿದ್ದಾರೆ. ಬೆಂಗಳೂರಿಗೆ ಜಾಗತಿಕ ಮನ್ನಣೆ ಸಿಕ್ಕಿದ್ದರೆ ಅದಕ್ಕೆ ಕೆಂಪೇಗೌಡರ ದೂರದೃಷ್ಟಿ ಆಡಳಿತವೇ ಕಾರಣ. ಅಂಥ ಮಹಾನ್ ನಾಯಕನನ್ನು ಸದಾಕಾಲ ಸ್ಮರಿಸಲು ಸರಕಾರ ಬೃಹತ್ ಪ್ರತಿಮೆ ನಿರ್ಮಾಣ ಮಾಡಿದೆ.

ಇನ್ನು ಪ್ರತಿಮೆಯ ಮುಂಭಾಗದಲ್ಲಿ 3 ಎಕರೆ ಜಾಗದಲ್ಲಿ 20 ಕೋಟಿ ವೆಚ್ಚದಲ್ಲಿ ಥೀಮ್ ಪಾರ್ಕ್ ಸಹ ತಲೆ ಎತ್ತಲಿದ್ದು, ನಾಡಪ್ರಭು ಕೆಂಪೇಗೌಡರ ಜೀವನ ಚರಿತ್ರೆ ಆಡಳಿತದ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಸರ್ಕಾರ ಮಾಡಿದೆ.

ರಾಜ್ಯದಲ್ಲಿ ಮೋದಿ ಅಭಿವೃದ್ಧಿ ನೆಪ.. ರಾಜಕೀಯ ಲಾಭದ ಜಪ..

ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ನಾಯಕನಹಳ್ಳಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ,

ಶೋಭಾ ಕರಂದ್ಲಾಜೆ, ರಾಜ್ಯ ಸಚಿವರಾದ ಅರಗ ಜ್ಞಾನೇಂದ್ರ, ಕೆ.ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ವಿ.ಸೋಮಣ್ಣ, ಡಾ.ಅಶ್ವಥ್ ನಾರಾಯಣ, ಭೈರತಿ ಬಸವರಾಜ್, ಆರ್.ಅಶೋಕ್, ಡಾ.ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜ್ ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿದ್ದರು.

Articles You Might Like

Share This Article