ಬೆಂಗಳೂರು, ಫೆ.28- ಮನೆಯೊಂದರಲ್ಲಿ ದುಷ್ಕರ್ಮಿಗಳು ಜಾಹೀರಾತು ಪ್ರಿಂಟಿಂಗ್ ಏಜೆನ್ಸಿ ಮಾಲೀಕನ ಮೇಲೆ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಚಂದ್ರಾಲೇಔಟ್‍ನ ಮೊದಲನೇ ಹಂತ ದುರ್ಗಾ ಪರಮೇಶ್ವರಿ ದೇವಸ್ಥಾನ ಸಮೀಪದ ನಿವಾಸಿ ಲಿಯಾಖತ್ ಅಲಿಖಾನ್(44) ಕೊಲೆಯಾದ ವ್ಯಕ್ತಿ. ಲಿಯಾಖತ್ ಅವರು ಸ್ವಂತ ಮನೆಯನ್ನು ಹೊಂದಿದ್ದು, ಪತ್ನಿ ಶಬಾನಖಾನಂ ಮಗ ಅರ್ಮಾನ್ ಅಲಿಖಾನ್ ಮಗಳು ದೀನಾಜ್ ಖಾನಂರೊಂದಿಗೆ ವಾಸವಾಗಿದ್ದರು.
ಪತ್ನಿ ಗೃಹಿಣಿಯಾಗಿದ್ದು, ಮಗ ಪ್ರಥಮ ಪಿಯುಸಿ ಹಾಗೂ ಮಗಳು ಎರಡನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಲಿಯಾಖತ್ ಅಲಿಖಾನ್ ಅವರು ಸುಮಾರು 20 ವರ್ಷಗಳಿಂದ ಗಂಗೊಂಡನಹಳ್ಳಿಯಲ್ಲಿ ರಾಯಲ್ ಕಮ್ಯುನಿಕೇಷನ್ ಎಂಬ ಜಾಹೀರಾತು ಪ್ರಿಂಟಿಂಗ್ ಏಜೆನ್ಸಿ ಇಟ್ಟುಕೊಂಡ ವ್ಯವಹಾರ ನಡೆಸುತ್ತಿದ್ದರು.
3ನೇ ಹಂತದ ಪ್ರಜಾಧ್ವನಿ ಯಾತ್ರೆಗೆ ಕಾಂಗ್ರೆಸ್ ಚಾಲನೆ
ಲಿಯಾಖತ್ ಅಲಿಖಾನ್ ಅವರು ಪ್ರತಿದಿನ ರಾತ್ರಿ 8 ಗಂಟೆಗೆ ನಾಗರಭಾವಿಯಲ್ಲಿರುವ ಜಿಮ್‍ಗೆ ಹೋಗಿ ಆನಂತರ ಅಲ್ಲಿಂದ ಗಂಗೊಂಡನಹಳ್ಳಿಯ ಕಚೇರಿಗೆ ಹೋಗಿ ರಾತ್ರಿ 11.30ರ ವೇಳೆಗೆ ಮನೆಗೆ ವಾಪಸ್ ಆಗುತ್ತಿದ್ದರು.
ನಿನ್ನೆ ರಾತ್ರಿ ಸಹ 8 ಗಂಟೆಗೆ ಎಂದಿನಂತೆ ಜಿಮ್‍ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ರಾತ್ರಿ 12 ಗಂಟೆಯಾದರೂ ವಾಪಸ್ ಆಗಿಲ್ಲ.
ಇದರಿಂದ ಗಾಬರಿಯಾದ ಕುಟುಂಬದವರು ಲಿಯಾಖತ್ ಅವರ ಸಹೋದರ ಮೋಸಿಖಾನ್ ಅವರಿಗೆ ತಿಳಿಸಿದ್ದು, ಅವರು ಜಿಮ್ ಬಳಿ ಹೋಗಿ ನೋಡಿದಾಗ ಜಿಮ್‍ಗೆ ಲಿಯಾಖತ್ ಹೋಗಿಲ್ಲವೆಂಬುದು ಗೊತ್ತಾಗಿದೆ.
ತಕ್ಷಣ ಮಗ ಅರ್ಮಾನ್ ಅಲಿಖಾನ್ ತಂದೆಯನ್ನು ಹುಡುಕಿಕೊಂಡು ಕಚೇರಿ ಬಳಿ ಹೋದಾಗ ಕಚೇರಿ ಬಾಗಿಲು ಹಾಕಿರುವುದು ಕಂಡು ಎಲ್ಲಾ ಕಡೆ ಹುಡುಕಾಡಿದ್ದಾರೆ.
ರಾತ್ರಿ ಸುಮಾರು 2 ಗಂಟೆಗೆ ನಾಯಂಡಹಳ್ಳಿಯ ಚೆಟ್ಟೀಸ್ ಪೆಟ್ರೋಲ್ ಬಂಕ್ ಹಿಂಭಾಗ ಇರುವ ಲಿಯಾಖತ್ ಅವರಿಗೆ ಸೇರಿದ ಮನೆ ಬಳಿ ಹೋಗಿ ನೋಡಿದಾಗ ಮನೆ ಹೊರಗೆ ತಂದೆಯ ಜಾವಾ ಬೈಕ್ ನಿಂತಿರುವುದು ಕಂಡು ಬಂದಿದೆ.
ಮುಳ್ಳುಹಂದಿ ಶಿಕಾರಿಗೆ ಹೋದಾಗ ಸುರಂಗದಲ್ಲಿ ಸಿಲುಕು ಇಬ್ಬರ ಸಾವು
ತಕ್ಷಣ ಮನೆ ಬಳಿ ಹೋದಾಗ ಬಾಗಿಲು ತೆರೆದಿರುವುದು ಗಮನಿಸಿ, ಮನೆಯಲ್ಲಿ ವಿದ್ಯುತ್ ಇಲ್ಲದ ಕಾರಣ ಮೊಬೈಲ್ ಟಾರ್ಚ್ ಹಾಕಿಕೊಂಡು ಒಳಗೆ ಹೋಗಿ ನೋಡಿದಾಗ ರೂಮ್ ನಲ್ಲಿ ತಂದೆಯವರು ಹಾಸಿಗೆ ಮೇಲೆ ಬಿದ್ದಿದ್ದು, ಗೋಡೆಯ ಮೇಲೆ ರಕ್ತದ ಕಲೆ ಇರುವುದು, ಅವರ ತಲೆಯಲ್ಲೆಲ್ಲ ರಕ್ತ ಗಾಯವಾಗಿರುವುದು ಗಮನಿಸಿ ಮುಟ್ಟಿ ನೋಡಿದಾಗ ದೇಹ ತಣ್ಣಗಾಗಿ ಮೃತಪಟ್ಟಿರುವುದು ಗೊತ್ತಾಗಿದೆ.
ಕೂಡಲೇ ಈ ವಿಷಯವನ್ನು ತಮ್ಮ ಕುಟುಂಬದವರಿಗೆ ಹಾಗೂ ಪೊಲೀಸರಿಗೆ ತಿಳಿಸಿದ್ದಾನೆ. ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯನ್ನೆಲ್ಲಾ ಪರಿಶೀಲಿದ್ದಾರೆ.
ಯಾರೋ ನಮ್ಮ ತಂದೆಯವರನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುತ್ತಾರೆ. ತಂದೆಯವರ ಜೊತೆ ವ್ಯವಹಾರ ಮಾಡುತ್ತಿದ್ದ ಗಂಗೊಂಡನಹಳ್ಳಿ ನಿವಾಸಿಗಳಾದ ವಸೀಮ್ ಮತ್ತು ಜೋಹರ್‍ರವರು ನಮ್ಮ ತಂದೆಯವರಿಗೆ ಲಕ್ಷಾಂತರ ರೂಪಾಯಿ ಹಣ ಕೊಡಬೇಕಿತ್ತು. ಅವರೇ ಕೊಲೆ ಮಾಡಿಸಿರಬಹುದು. ಅಲ್ಲದೆ ಯಾವಾಗಲೂ ನಮ್ಮ ತಂದೆ ಜೊತೆಯಲ್ಲಿ ಓಡಾಡಿಕೊಂಡಿದ್ದ ಇಲಿಯಾಜ್ ಖಾನ್ ಎಂಬುವರ ಮೇಲೆ ಅನುಮಾನವಿದೆ ಎಂದು ಅವರ ಮಗ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಲಿಯಾಖತ್ ಅಲಿಖಾನ್ ಅವರ ಮಗ ಅರ್ಮನ್ ಅಲಿಖಾನ್ ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
printing, agency, owner, murder, Bengaluru,