ಕಾರಾಗೃಹಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಅಧಿಕಾರಿಗಳೇ ಹೊಣೆ

Social Share

ಬೆಂಗಳೂರು, ಜು.16- ರಾಜ್ಯದ ಯಾವುದೇ ಕಾರಾಗೃಹಗಳಲ್ಲಿ ಇನ್ನು ಮುಂದೆ ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆ ಮಾಡಬೇಕಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ವಿಕಾಸಸೌಧದಲ್ಲಿಂದು ಇತ್ತೀಚೆಗೆ ರಚನೆಗೊಂಡ ಕಾರಾಗೃಹ ಅಭಿವೃದ್ಧಿ ಮಂಡಳಿಯ ಮೊದಲ ಸಭೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ನಡೆಸಲಾಯಿತು. ಸಭೆಯಲ್ಲಿ ಆರಗ ಜ್ಞಾನೇಂದ್ರ ಅವರು ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿ ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅದರಲ್ಲೂ ರಾಜಧಾನಿ ಬೆಂಗಳೂರಿನ ಪರಪ್ಪನ ಅಗ್ರಹಾರ, ಬೆಳಗಾವಿಯ ಹಿಂಡಲಗ, ಬಳ್ಳಾರಿ ಜೈಲುಗಳಲ್ಲಿ ನಿರಂತರವಾಗಿ ಅಕ್ರಮ ಚಟುವಟಿಕೆಗಳು ನಡೆಯುತ್ತಲೇ ಇವೆ. ಮಾಧ್ಯಮಗಳಲ್ಲಿ ನಿರಂತರವಾಗಿ ಸುದ್ದಿಯಾದರೂ ಕೂಡ ಸಂಬಂಧಪಟ್ಟವರು ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಅಪರಾಧ ಎಸಗಿದ ಕೈದಿಗಳಿಗೆ ಡ್ರಗ್ಸ್, ಮದ್ಯ, ಮೊಬೈಲ್ ಸೇರಿದಂತೆ ಎಲ್ಲ ರೀತಿಯ ಸವಲತ್ತುಗಳನ್ನು ನೀಡಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದು, ಮದ್ಯ ಸೇವಿಸಿ ಮೋಜುಮಸ್ತಿ ಮಾಡುವುದು, ಗಾಂಜಾ ಸೇವನೆ ಸೇರಿದಂತೆ ಹತ್ತು ಹಲವು ರೀತಿಯ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಇದನ್ನು ಸರಬರಾಜು ಮಾಡುತ್ತಿರುವವರು ನಮ್ಮ ಅಧಿಕಾರಿಗಳೇ. ನಿಮ್ಮಿಂದ ಸರ್ಕಾರ ಮತ್ತು ಇಲಾಖೆಗೂ ಕೆಟ್ಟ ಹೆಸರು ಎಂದು ಹರಿಹಾಯ್ದಿದ್ದಾರೆ.

ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಮಾಡಿದ ಆರೋಪಿಗಳಿಗೆ ಪರಪ್ಪನ ಅಗ್ರಹಾರದಲ್ಲಿ ಮೋಜುಮಸ್ತಿ ಮಾಡಲು ಅವಕಾಶ ಮಾಡಿಕೊಟ್ಟವರು ಯಾರು? ಒಬ್ಬ ಅಪರಾಧಿ ಇಲ್ಲಿ ಇರಬೇಕಾದರೆ ಆತನು ತಾನು ಮಾಡಿದ್ದು ತಪ್ಪು ಎಂದು ಮನಃಪರಿವರ್ತನೆಯಾಗಬೇಕು. ಆದರೆ ಇಲ್ಲಿ ನಡೆಯುತ್ತಿರುವುದು ನಿಮಗೆ ಶೋಭೆ ತರುವುದೇ ಎಂದು ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.

ಜೈಲಿನಲ್ಲಿ ಬಿಗಿಬಂದೋಸ್ತ್ ಇದ್ದರೂ ಕೂಡ ಎಲ್ಲ ಸವಲತ್ತುಗಳು ರಾಜರೋಷವಾಗಿ ಸಿಗುತ್ತಿವೆ ಎಂದರೆ ಯಾರನ್ನು ಹೊಣೆ ಮಾಡಬೇಕು? ಕೈದಿಗಳನ್ನು ನೋಡಲು ಬರುವ ಸಂಬಂಧಿಕರೇ? ಇಲ್ಲವೇ ನಮ್ಮ ಅಧಿಕಾರಿಗಳ ಸಹಕಾರವಿಲ್ಲದೆ ಇಂತಹ ಚಟುವಟಿಕೆಗಳು ನಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಕೈದಿಗಳನ್ನು ನೋಡಲು ಬರುವ ಸಂಬಂಧಿಕರನ್ನು ತಪಾಸಣೆ ನಡೆಸಿ ಒಳಗೆ ಬಿಡಬೇಕು. ಇತ್ತೀಚೆಗೆ ಇಬ್ಬರು ಮಹಿಳೆಯರೇ ಡ್ರಗ್ಸ್ ತಂದು ಸಿಕ್ಕಿಬಿದ್ದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದಕ್ಕೆ ಕುಮ್ಮಕ್ಕು ಕೊಟ್ಟ ಅಧಿಕಾರಿಗಳ ಮೇಲೆ ಏಕೆ ಶಿಸ್ತುಕ್ರಮ ಜರುಗಿಸಿಲ್ಲ ಎಂದು ಸಭೆಯಲ್ಲಿದ್ದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರನ್ನು ಗೃಹ ಸಚಿವರು ಪ್ರಶ್ನಿಸಿದ್ದಾರೆ.

ಇನ್ನು ಮುಂದೆ ಕಡ್ಡಾಯವಾಗಿ ಪ್ರತಿ ತಿಂಗಳು ರಾಜ್ಯದ ಎಲ್ಲ ಬಂಧಿಖಾನೆಗಳಿಗೆ ಡಿಜಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಬೇಕು. ಪ್ರತಿಯೊಂದು ಜೈಲಿನಲ್ಲಿ ಜಾಮರ್ ಅಳವಡಿಕೆ , ಸಿಸಿಟಿವಿ ಹಾಕುವುದು, ಕೈದಿಗಳನ್ನು ನೋಡಲು ಬರುವ ಸಂಬಂಧಿಕರನ್ನು ಬಿಗಿಯಾಗಿ ತಪಾಸಣೆ ನಡೆಸುವುದು ಸೇರಿದಂತೆ ಕೆಲವು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ಸೂಚಿಸಿದ್ದಾರೆ.

ಜೈಲಿನಲ್ಲಿರುವ ಆರೋಪಿಗಳ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬರುತ್ತಿವೆ. ಇದು ಪದೇ ಪದೇ ಮರುಕಳಿಸಬಾರದು. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‍ಸೂದ್, ಕಾರಾಗೃಹ ಅಭಿವೃದ್ಧಿ ಪ್ರಾಧಿಕಾರ ಆಡಳಿತ ಮಂಡಳಿಯ ಕಾರ್ಯದರ್ಶಿ ಅಲೋಕ್ ಮೋಹನ್, ಗೃಹ ಇಲಾಖೆ ಕಾರ್ಯದರ್ಶಿ ರಜಿನೀಶ್ ಗೋಯಲ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Articles You Might Like

Share This Article