ಖಾಸಗಿ ಬಸ್ ಸಂಸ್ಥೆಗಳಿಂದ ದೀಪಾವಳಿ ಸುಲಿಗೆ ಶುರು, ಸತ್ತಂತೆ ನಟಿಸುತ್ತಿದೆ ಸರ್ಕಾರ

Social Share

ಬೆಂಗಳೂರು,ಅ.19- ಧಾರ್ಮಿಕ ಹಬ್ಬಗಳು ಖಾಸಗಿ ಬಸ್ ಸಂಸ್ಥೆಗಳಿಗೆ ಹೆಚ್ಚು ಹಣ ಸುಲಿಗೆ ಮಾಡಲು ವರದಾನವಾಗಿವೆ. ಪ್ರತಿ ಬಾರಿ ಹಬ್ಬದಂತೆ ದೀಪಾವಳಿ ಹಬ್ಬದ ವೇಳೆಯೂ ಪ್ರಯಾಣಿಕರಿಗೆ ದರ ಏರಿಕೆಯ ಶಾಕ್ ನೀಡಿವೆ. ಆದರೆ ರಾಜ್ಯ ಸರ್ಕಾರ, ಸಾರಿಗೆ ಸಚಿವರ ಸೂಕ್ತ ಕ್ರಮಗಳ ಘೋಷಣೆ ಮಾತ್ರ ಭರವಸೆಯಾಗೇ ಉಳಿದಿವೆ.

ಪ್ರತಿ ಹಬ್ಬಗಳಲ್ಲೂ ಎಚ್ಚರಿಕೆ ನೀಡುವ ಸಾರಿಗೆ ಸಚಿವರು ಈವರೆಗೆ ಎಷ್ಟು ಖಾಸಗಿ ಬಸ್ ಸಂಸ್ಥೆಗಳ ವಿರುದ್ಧ ದಂಡ ಇಲ್ಲವೇ ಪ್ರಕರಣ ದಾಖಲಿಸಿದ್ದಾರೆ ಎಂಬುದನ್ನು ತಿಳಿಸಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಖಾಸಗಿ ಬಸ್ ಟಿಕೆಟ್ ದರ ಏರಿಕೆಯ ಬಿಸಿ ಬೆಂಗಳೂರಿನಿಂದ ಉತ್ತರ ಕರ್ನಾಟಕ ಭಾಗ ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ಇನ್ನಿತರ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ತಟ್ಟುತ್ತಿದೆ.

ದೀಪಾವಳಿ ಹಿನ್ನೆಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಾಮಾನ್ಯ ಬಸ್‍ಗಳ ಪ್ರಯಾಣದ ದರ ಯಥಾಸ್ಥಿತಿಯಲ್ಲಿದ್ದರೆ, ಹಬ್ಬಕ್ಕೆಂದೇ ನಿಯೋಜನೆಗೊಳ್ಳುವ ವಿಶೇಷ (1500ಬಸ್) ಬಸ್‍ಗಳ ಟಿಕೆಟ್ ದರ ಶೇ.20ರಷ್ಟು ಹೆಚ್ಚಳವಾಗಿದೆ.

ದುಬಾರಿ ಕಾಲದಲ್ಲಿ ಶೇ.20ರಷ್ಟು ಟಿಕೆಟ್ ದರ ಏರಿಕೆ ಹೊರೆ ಎನ್ನುವಾಗ ಖಾಸಗಿ ಸಂಸ್ಥೆಗಳು ಬಸ್ ಪ್ರಯಾಣದ ದರವನ್ನು ಮೂರರಿಂದ ನಾಲ್ಕು ಪಟ್ಟು ವಸೂಲಿ ಮಾಡುತ್ತಿವೆ. ಹೀಗಿದ್ದರೂ ಸರ್ಕಾರ ಮೌನವಾಗಿದೆ.
ದೀಪಾವಳಿ ಹಿನ್ನೆಲೆ ಅಕ್ಟೋಬರ್ 22ರಂದು ಕೆಎಸ್‍ಆರ್‍ಟಿಸಿ ಬಸ್ ಟಿಕೆಟ್ ದರ ನೋಡುವುದಾದರೆ ಬೆಂಗಳೂರಿನಿಂದ ಬೆಳಗಾವಿಗೆ ಎಸಿ ಸ್ಲೀಪರ್ 1139 ರೂ.ನಿಂದ 1348 ರೂ.ವರೆಗೆ ನಿಗದಿ ಮಾಡಲಾಗಿದೆ. ನಾನ್ ಎಸಿ ಸ್ಲೀಪರ್ 1061 ರೂ. ಇದ್ದರೆ, ಎಸಿ ಅಲ್ಲದ ಆಸನಗಳ ಟಿಕೆಟ್ ದರ 899 ರೂ.ವರೆಗೆ ಇದೆ.

ಇದೇ ಬೆಂಗಳೂರು- ಬೆಳಗಾವಿಗೆ ಖಾಸಗಿ ಬಸ್ ಟಿಕೆಟ್ ದರ ಎಸಿ ಸ್ಲೀಪರ್ ಇಂಟರ್ಸಿಟಿ ಸ್ಮಾಟ್ ಬಸ್ 2,700 ರೂ., ನಾನ್ ಎಸಿ ಸ್ಲೀಪರ್ ರಷ್ಮಾ ಟ್ರಾವೇಲ್ಸ್ 1,700ರೂ., ವಿಆರ್‍ಎಲ್ ಟ್ರಾವೆಲ್ಸ್ 1,900ರೂ. ದರವಿದೆ. ಆರೆಂಜ್ ಟೂರ್ಸ್ ಆಂಡ್ ಟ್ರಾವೆಲ್ಸ್ 2,310ರೂ. ಇದೆ. ಎಸ್‍ಆರ್‍ಎಸ್ ಮಲ್ಟಿ ಎಕ್ಸೆಲ್ ಸೆಮಿ ಸ್ಲೀಪರ್ 3,500ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ.
ಅದೇ ರೀತಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಕೆಎಸ್‍ಆರ್‍ಟಿಸಿ ಬಸ್‍ಗಳ ಪ್ರಯಾಣದ ದರ ಎಸಿ ಸ್ಲೀಪರ್ 960 ರಿಂದ 1,140ರೂ.ವರೆಗೆ ಇದೆ. ನಾನ್ ಎಸಿ ಸ್ಲೀಪರ್ 797 ರೂ.ನಿಂದ 943ರೂ.ಇದೆ.

ಈ ಮಾರ್ಗಕ್ಕೆ ಖಾಸಗೀ ಬಸ್‍ಗಳ ದರ ನೋಡುವುದಾದರೆ ನಾನ್ ಎಸಿ ಸ್ಲೀಪರ್ ವಿಆರ್ ಎಲ್ 1,800 ರೂ., ಸುಗಮ ಟೂರಿಸ್ಟ್ 1,300 ರೂ. ನಿಂದ 1,450 ಇದೆ. ಎಸ್‍ಆರ್‍ಇ 1,615ರೂ. ಇದ್ದರೆ, ರಷ್ಮಾ ಟ್ರಾವೆಲ್ಸ 1,600 ರೂ. ಹಣ ನಿಗದಿಗೊಳಿಸಿದೆ.

ಬೆಂಗಳೂರಿನಿಂದ ಹಾವೇರಿಗೆ ಕೆಎಸ್‍ಆರ್ಟಿಸಿ ಬಸ್ಗಳ ಪ್ರಯಾಣದ ದರ ಎಸಿ ಸೆಮಿ ಸ್ಲೀಪರ್ 788 (ಐರಾವತ) ಇದೆ. ನಾನ್ ಎಸಿ ಸ್ಲೀಪರ್ ರೂ.700 ರಿಂದ 824 ರೂ. ಇದೆ. ಇದೇ ಬೆಂಗಳೂರಿನಿಂದ ಹಾವೇರಿಗೆ ಖಾಸಗೀ ಬಸ್ ಗಳಲ್ಲಿ ಪ್ರಯಾಣದ ದರ ಸುಗಮ ಟೂರಿಸ್ಟ್ ಎಸಿ ಸ್ಲೀಪರ್ 1,400 ರೂ., ನಾನ್ ಎಸಿ ಸ್ಲೀಪರ್ ರೂಬಿ ಟೂರ್ಸ್ ಆಂಡ್ ಟ್ರಾವೆಲ್ಸ್ 999ರೂ., ಎಸ್‍ಆರ್‍ಎಸ್ 1,450ರೂ., ಸುಗಮ ಟೂರಿಸ್ಟ್ 1,300 ರೂ. ಗೆ ಏರಿಕೆ ಆಗಿದೆ.

ಹಬ್ಬದಲ್ಲಿ ವಿಶೇಷ ಬಸ್ಗಳು ನಿಯೋಜನೆಗೊಳ್ಳುತ್ತಿದ್ದಂತೆ ಬೇಗನೇ ಎಲ್ಲ ಆಸನಗಳು ಬುಕ್ ಆಗಿಬಿಡುತ್ತವೆ. ನಂತರ ಪ್ರಯಾಣಿಕರು ಅನಿವಾರ್ಯವಾಗಿ ಖಾಸಗಿ ಬಸ್ಗಳನ್ನು ಅವಲಂಬಿಸಬೇಕಾಗುತ್ತದೆ. ಆದ್ದರಿಂದ ಸಾರಿಗೆ ಇಲಾಖೆ ಇನ್ನಷ್ಟು ಹೆಚ್ಚುವರಿ ಬಸ್ ಬಿಡಬೇಕು.

ಜೊತೆಗೆ ಮನಬಂದಂತೆ ಪ್ರಯಾಣದ ದರ ಹೆಚ್ಚಿಸುವ ಖಾಸಗಿ ಬಸ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರದ ಎಚ್ಚರಿಕೆ ಕ್ರಮಗಳು ಒಮ್ಮೆಯಾದರೂ ಹಬ್ಬದ ವೇಳೆ ಜಾರಿಯಾಗಬೇಕು, ಎಂದು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.

Articles You Might Like

Share This Article