ಪ್ರಯಾಣ ದರ ದುಬಾರಿ : ಖಾಸಗಿ ಬಸ್, ಆಟೋ, ಟ್ಯಾಕ್ಸಿಗಳ ದರ್ಬಾರ್..!

ಬೆಂಗಳೂರು, ಫೆ.9- ಸಾರಿಗೆ ಮುಷ್ಕರ 3ನೇ ದಿನ ಮುಂದುವರೆದಿದ್ದರೂ ತೀವ್ರತೆ ತಗ್ಗಿತ್ತು. ಖಾಸಗಿ ಬಸ್‍ಗಳ ಮೂಲಕ ಸಾರ್ವಜನಿಕ ಪ್ರಯಾಣಿಕರಿಗೆ ಸೇವೆ ಒದಗಿಸಿದ ಪರಿಣಾಮ ತೊಂದರೆ ಅಷ್ಟಾಗಿ ಕಾಣಲಿಲ್ಲವಾದರೂ ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಸೇವೆ ಇಲ್ಲದಿದ್ದರಿಂದ ಜನ ಆಟೋ ಟ್ಯಾಕ್ಷಿ, ಟೆಂಪೋಗಳ ಮೂಲಕ ದುಪ್ಪಟು ಹಣ ತೆತ್ತು ಸಂಚರಿಸುತ್ತಿದದ್ದು ಕಂಡುಬಂತು.

ಸಾಲು ಸಾಲು ರಜೆ ಇರುವುದರಿಂದ ಊರಿಗೆ ತೆರಳುವವರಿಗೆ ಸರ್ಕಾರಿ ಬಸ್‍ಗಳು ಇಲ್ಲದ ಪರಿಣಾಮ ಖಾಸಗಿ ಬಸ್‍ನವರು ಪೈಪೋಟಿಯಲ್ಲಿ ಸೇವೆ ಒದಗಿಸುತ್ತಿದುದು ಕಂಡುಬಂತು. ಮೆಜೆಸ್ಟಿಕ್ ಬಸ್ ನಿಲ್ದಾಣ, ಕೆಂಪೇಗೌಡ ಬಸ್ ನಿಲ್ದಾಣಗಳಲ್ಲಿ ಆಟೋ, ಮಿನಿಬಸ್, ಟೆಂಪೋಗಳ ಕಾರುಬಾರು ಜೋರಾಗಿತ್ತು. ಮುಷ್ಕರ ನಿರತರು ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ನಿವೃತ್ತ ಸಿಬ್ಬಂದಿಯನ್ನು ಬಳಸಿಕೊಂಡು ಸಂಚಾರ ಆರಂಭಿಸಲು ಮುಂದಾಗಿದೆ. ಅಲ್ಲದೆ ಎಲ್ಲೆಲ್ಲಿ ಸಾಧ್ಯವೋ ಅಲೆಲ್ಲ ಖಾಸಗಿ ಬಸ್‍ಗಳನ್ನು ಓಡಿಸಲು ಅನುಮತಿ ನೀಡಿದೆ.

ಜನರು ಕೂಡ ತಮ್ಮ ಕೆಲಸವಾದರೆ ಸಾಕು ತಾವು ತಲುಪಬೇಕಾದ ಸ್ಥಳ ತಲುಪಿದರೆ ಸಾಕು ಎಂದು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಿಕ್ಕ ಟೆಂಪೋ, ಗೂಡ್ಸ್‍ಗಾಡಿಗಳನ್ನು ಹತ್ತಿಕೊಂಡು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ವೀಕೆಂಡ್ ಮೋಜು ಮಸ್ತಿಗೆ ತೆರಳುವವರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಬ್ರೇಕ್ ಬಿದ್ದಿದೆ. ಸಾಮಾನ್ಯವಾಗಿ ಸರ್ಕಾರಿ ಬಸ್‍ಗಳಲ್ಲಿ ತೆರಳುತ್ತಿದ್ದವರು ಖಾಸಗಿ ಬಸ್ ಮತ್ತು ಬೇರೆ ಬೇರೆ ವಾಹನಗಳನ್ನು ಅವಲಂಬಿಸಿದ್ದಾರೆ. ಮುಷ್ಕರದ ನಡುವೆಯೂ ಹಲವಾರು ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಸಿಬ್ಬಂದಿಗಳು ಪೆÇಲೀಸ್ ರಕ್ಷಣೆಯಲ್ಲಿ ಬಸ್ ಓಡಿಸಿದ್ದಾರೆ.

ನಿನ್ನೆ ಮತ್ತು ಇಂದು ಬಸ್‍ಗಳು ಸಂಚರಿಸಿವೆ. ಬೆಂಗಳೂರಿನಲ್ಲಿ 150ಕ್ಕೂ ಹೆಚ್ಚು ಬಿಎಂಟಿಸಿ ಬಸ್‍ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸಿದರೆ ಕೆಎಸ್‍ಆರ್‍ಟಿಸಿ ಬಸ್‍ಗಳು ಸಂಚರಿಸಿವೆ. ಕೊಪ್ಪಳ, ವಿಜಯಪುರ, ಬಳ್ಳಾರಿ, ದಕ್ಷಿಣ ಕನ್ನಡ ಮುಂತಾದೆಡೆ ಹಲವು ಬಸ್ ಸಂಚರಿಸಿವೆಯಾದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಎಚ್ಚರಿಕೆಯ ನಡುವೆಯೂ ಸಾರಿಗೆ ನೌಕರರು ಸರ್ಕಾರದ ಬೆದರಿಕೆಗೆ ಜಗ್ಗದೆ ತಮ್ಮ ಪಟ್ಟನ್ನು ಮುಂದುವರೆಸಿದ್ದಾರೆ.

ಅರ್ಥಿಕ ಸಂಕಷ್ಟವಿದೆ. ಕೋವಿಡ್ ಪರಿಸ್ಥಿತಿಯಲ್ಲಿ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ನಿಮ್ಮ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸಲಾಗಿದೆ. 6ನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಶೇ.8ರಷ್ಟು ವೇತನವನ್ನು ಹೆಚ್ಚಳ ಮಾಡುತ್ತೇವೆ ಎಂಬ ಭರವಸೆಯನ್ನು ಸರ್ಕಾರ ನೀಡಿದೆ. ಆದರೆ ಇದಾವುದಕ್ಕೂ ನೌಕರರು ಒಪ್ಪುತ್ತಿಲ್ಲ. ಸಚಿವರೇ ನೀಡಿದ ಭರವಸೆಯಂತೆ 6ನೇ ವೇತನ ಆಯೋಗ ಶಿಫಾರಸ್ಸನ್ನು ಜಾರಿ ಮಾಡಲೇಬೇಕೆಂದು ಪಟ್ಟು ಹಿಡಿದು ಮುಷ್ಕರ ಮುಂದುವರೆಸಿದ್ದಾರೆ.

ಅನಿರ್ಧಿಷ್ಟಾವಧಿ ಮುಷ್ಕರ ಮುಂದುವರೆದರೆ ಸಂಭಾವ್ಯ ಸಮಸ್ಯೆಗಳನ್ನು ತಪ್ಪಿಸಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಲಕ್ಷಾಂತರ ಜನ ಹಬ್ಬಕ್ಕೆ ಊರುಗಳಿಗೆ ತೆರಳುತ್ತಾರೆ. ಹೀಗಾಗಿ ಅವರಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಎಲ್ಲ ಖಾಸಗಿ ಬಸ್‍ಗಳಿಗೆ ತಾತ್ಕಲಿಕ ಪರ್ಮಿಟ್ ನೀಡಿದ್ದು, ಎಲ್ಲ ಕಡೆ ಖಾಸಗಿ ಬಸ್‍ಗಳು ಸಂಚರಿಸುತ್ತಿವೆ.

ತರಬೇತಿಯ ಅವಧಿಯಲ್ಲಿದ್ದವರು ಕರ್ತವ್ಯಕ್ಕೆ ಹಾಜರಾಗಬೇಕೆಂದು ಸರ್ಕಾರ ಎರಡು ಬಾರಿ ನೋಟಿಸ್ ನೀಡಿದೆ. ಹಾಜರಾಗದ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿಯ 32 ಹಾಗೂ ಬಿಎಂಟಿಸಿಯ 96 ಸಿಬ್ಬಂದಿ ಸೇರಿ ಒಟ್ಟು 128 ಮಂದಿಯನ್ನು ಸೇವೆಯಿಂದಲೇ ವಜಾ ಮಾಡುವ ಮೂಲಕ ಕರ್ತವ್ಯಕ್ಕೆ ಬಾರದವರಿಗೆ ಎಚ್ಚರಿಕೆಯ ಸಂದೇಶ ನೀಡಿದೆ.

ಕೊರೊನಾದಂತಹ ಕಠಿಣ ಸಂದರ್ಭದಲ್ಲೂ ವೇತನವನ್ನು ಇಲಾಖೆ ಪಾವತಿಸಿದೆಯಾದರೂ ನೌಕರರು ಪಟ್ಟು ಹಿಡಿದು ಮುಷ್ಕರ ಮುಂದುವರೆಸಿರುವುದು ಸಮಂಜಸವಲ್ಲ. ಸರ್ಕಾರದ ಜೊತೆ ಸಹಕರಿಸಬೇಕೆಂದು ಪದೇ ಪದೇ ಮನವಿ ಮಾಡಿದೆ. ಆದರೂ ಯಾವ ಮನವಿಗೂ ನೌಕರರು ಕ್ಯಾರೆ ಎನ್ನುತ್ತಿಲ್ಲ. ನಿವೃತ್ತ ಚಾಲಕರು, ನಿರ್ವಾಹಕರನ್ನು ಕರ್ತವ್ಯದ ಮೇಲೆ ನಿಯೋಜಿಸಲು ನಿರ್ಧರಿಸಿ ಸಾರ್ವಜನಿಕರಿಗೆ ಸೇವೆ ಒದಗಿಸಲು ಮುಂದಾಗಿದೆ.

ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ತಮ್ಮ ಎಲ್ಲ ಪ್ರಯತ್ನಗಳನ್ನು ಮುಂದುವರೆಸಿದೆ. ನೌಕರರು ಕೂಡ ಪಟ್ಟು ಬಿಡದೆ ಮುಷ್ಕರವನ್ನು ಮುಂದುವರೆಸಿದ್ದಾರೆ. ಸರ್ಕಾರ ಹಾಗೂ ನೌಕರರ ನಡುವಿನ ಹಗ್ಗಜಗ್ಗಾಟದಿಂದ ಪ್ರಯಾಣಿಕರು ಮಾತ್ರ ಹೈರಾಣಾಗುತ್ತಿದ್ದಾರೆ. ಖಾಸಗಿ ಬಸ್, ಮಿನಿಬಸ್, ಟೆಂಪೋ, ಆಟೋ ಟ್ಯಾಕ್ಸಿಯವರಿಗೆ ದರ ನಿಗದಿ ಮಾಡಿದರೂ ಕೂಡ ಅವರು ಸಾರ್ವಜನಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ.