ಮೈಸೂರು, ಸೆ.20- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಮೈಸೂರು ಅರಮನೆಯಲ್ಲಿಂದು ಸಿಂಹಾಸನ ಜೋಡಣೆ ಆರಂಭಿಸಲಾಗಿದೆ. ಈ ಕಾರಣದಿಂದ ಅರಮನೆಗೆ ಈ ದಿನ ಮಧ್ಯಾಹ್ನದ ತನಕ ಸಾರ್ವಜನಿಕರ ಪ್ರವೇಶ ನಿರ್ಬಂಧ ಗೊಳಿಸಲಾಗಿದೆ.
ಸಿಂಹಾಸನ ಜೋಡಣೆ ಮಾಡುತ್ತಿರುವ ಕಾರಣ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಅರಮನೆಯ ಗೇಟ್‍ಗಳನ್ನು ಬಂದ್ ಮಾಡಲಾಗಿದೆ. ಗೆಜ್ಜಗಳ್ಳಿ ಗ್ರಾಮದ ನುರಿತವರು ಐತಿಹ್ಯ ಸಿಂಹಾಸನ ಜೋಡಣೆ ಕಾರ್ಯದಲ್ಲಿ ತೊಡಗಿದ್ದಾರೆ. ರತ್ನಖಚಿತ ಸಿಂಹಾಸನ ಜೋಡಣಾ ಕಾರ್ಯ ಈಗ ಆರಂಭವಾಗಿದೆ.
ಇದನ್ನೂ ಓದಿ : ಭಾರತದ ರಾಯಭಾರ ಕಚೇರಿಗೆ ಗೂಗಲ್ ಸಿಇಒ ಸುಂದರ್ ಪಿಚೈ ಭೇಟಿ
ಸ್ವತಃ ಪ್ರಮೋದಾ ದೇವಿ ಒಡೆಯರ್ ಅವರೆ ಮುತುವರ್ಜಿ ವಹಿಸಿ ಸಿಂಹಾಸನ ಜೋಡಣೆ ಮಾಡಿಸುತ್ತಿದ್ದಾರೆ.
ಅರಮನೆಯ ಸ್ಟ್ರಾಂಗ್ ರೂಂನಲ್ಲಿರುವ ಸಿಂಹಾಸನದ ಬಿಡಿಭಾಗಗಳನ್ನು ಹೊರ ತೆಗೆಯಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಜೋಡಣೆ ನಡೆಯುತ್ತಿದೆ. ಬೆಳ್ಳಿಯ ಭದ್ರಾಸನ ಸೇರಿ ರತ್ನಖಚಿತ ಸಿಂಹಾಸನದ ಬಿಡಿ ಭಾಗಗಳು ಅತ್ಯಾಕರ್ಷಕವಾಗಿವೆ.
ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿ ದರ್ಬಾರ್ ಹಾಲ್‍ನಲ್ಲಿ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತಿದೆ.ಇದಕ್ಕೂ ಮೊದಲು ಅರಮನೆಯ ಪುರೋಹಿತರ ಸಮ್ಮುಖದಲ್ಲಿ ಗಣಪತಿ ಹೋಮ, ಚಾಮುಂಡಿಪೂಜೆ, ಶಾಂತಿ ಹೋಮ ನಡೆಸಿದ್ದು, ಯದುವೀರ್ ಇದರಲ್ಲಿ ಭಾಗಿಯಾಗಿದ್ದಾರೆ. ಪೂರ್ಣಾಹುತಿ ಬಳಿಕ ಧಾರ್ಮಿಕ ಕಾರ್ಯಕ್ರಮ ಆಂತ್ಯವಾಗಲಿದೆ.
ಸೆ.26 ರಿಂದ ನಡೆಯಲಿರುವ ಖಾಸಗಿ ದರ್ಬಾರ್‍ನಲ್ಲಿ ರಾಜವಂಶಸ್ಥ ಯದುವೀರ್ ಸಿಂಹಾಸನಾರೋಹಣ ಮಾಡಲಿದ್ದಾರೆ.