ಬೆಂಗಳೂರು,ಜ.3- ಖಾಸಗಿ ಲ್ಯಾಬ್‍ನವರ ಎಡವಟ್ಟಿನಿಂದ ಇಡಿ ಬೆಂಗಳೂರು ಜನತೆ ಆತಂಕಕ್ಕೆ ಈಡಾಗುವಂತೆ ಮಾಡಿದೆ. ಖಾಸಗಿ ಲ್ಯಾಬ್‍ನಲ್ಲಿ ಟೆಸ್ಟಿಂಗ್ ಮಾಡಿಸಿಕೊಂಡಿರುವ ವ್ಯಕ್ತಿಯೊಬ್ಬನಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಸೋಂಕಿತ ವ್ಯಕ್ತಿಯ ವಿವರ ಪಡೆಯುವಲ್ಲಿ ಲ್ಯಾಬ್‍ನವರು ವಿಫಲರಾಗಿರುವುದರಿಂದ ಆತ ಎಲ್ಲಿದ್ದಾನೆ ಎಂಬುದು ಇದುವರೆಗೂ ಪತ್ತೆಯಾಗಿಲ್ಲ.
ಓಮಿಕ್ರಾನ್ ಸೋಂಕಿತ ವ್ಯಕ್ತಿ ನಗರದಲ್ಲಿ ಎಲ್ಲೆಲ್ಲಿ ಓಡಾಡಿದ್ದಾನೆ ಮತ್ಯಾರಿಗೆ ಸೋಂಕು ಹರಡಿದ್ದಾನೆ ಎಂಬ ಬಗ್ಗೆ ಮಾಹಿತಿ ತಿಳಿಯುತ್ತಿಲ್ಲ.
ಕಳೆದ ಡಿ.28 ರಂದು ಖಾಸಗಿ ಲ್ಯಾಬ್‍ಗೆ ತೆರಳಿದ 22 ವರ್ಷದ ಯುವಕನಿಗೆ 29 ರಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ಆತನ ಗಂಟಲು ದ್ರವ ಮಾದರಿಯನ್ನು ಜಿನೋಮ್ ಸೀಕ್ವೆನ್ಸ್ ಪರೀಕ್ಷೆಗೆ ರವಾನಿಸಲಾಗಿತ್ತು.
ಜಿನೋಮ್ ಸೀಕ್ವೆನ್ಸ್ ವರದಿಯಲ್ಲಿ ಆತನಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ಸಾಬೀತಾಗಿದೆ. ಆದರೆ ಆತ ಎಲ್ಲಿದ್ದಾನೆ, ಆತನ ಆರೋಗ್ಯ ಹೇಗಿದೆ ಹಾಗೂ ಅವರ ಸಂಪರ್ಕದಲ್ಲಿದ್ದವರ ಸಂಖ್ಯೆ ಎಷ್ಟು ಎನ್ನುವುದು ತಿಳಿಯದಾಗಿದೆ.
ಟೆಸ್ಟಿಂಗ್ ಮಾಡಿಸಿಕೊಳ್ಳುವಾಗ ಸೋಂಕಿತ ನೀಡಿದ ಮೊಬೈಲ್ ನಂಬರ್ ಸ್ವಿಚ್‍ಆಫ್ ಆಗಿರುವುದು ತಲೆನೋವಾಗಿ ಪರಿಣಮಿಸಿದೆ. ಒಂದು ವೇಳೆ ಓಮಿಕ್ರಾನ್ ಸೋಂಕಿತ ಪತ್ತೆಯಾಗದಿದ್ದರೆ ಬೆಂಗಳೂರಿಗೆ ಗಂಡಾಂತರ ಶತಸಿದ್ಧ ಎಂಬುದನ್ನು ಅರಿತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳು ಸೋಂಕಿತನ ಪತ್ತೆ ಮಾಡಿಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.
