ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ

ಬೆಂಗಳೂರು, ಜು.15- ಹಾಲ್‍ಟಿಕೆಟ್ ಸಿಗದ ವಿದ್ಯಾರ್ಥಿಗಳಿಗೆ ಕೂಡಲೇ ಹಾಲ್‍ಟಿಕೆಟ್ ಒದಗಿಸುವಂತೆ ಎಲ್ಲ ಬಿಇಒಗಳಿಗೆ ನೀಡಿರುವ ಆದೇಶಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಈ ಹಿಂದೆ ಸರ್ಕಾರ ನಿಗದಿಪಡಿಸಿದ ಶುಲ್ಕವನ್ನೇ ಪೋಷಕರು ಪಾವತಿ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಈ ರೀತಿ ಆದೇಶ ನೀಡುವುದು ಸರಿಯಾದ ಕ್ರಮವಲ್ಲ ಎಂದು ಖಾಸಗಿ ಶಾಲೆಗಳ ಒಕ್ಕೂಟ (ರುಪ್ಸಾ)ದ ಅಧ್ಯಕ್ಷ ಲೋಕೇಶ್ ತಾಳಿಕೋಟೆ ಹೇಳಿದ್ದಾರೆ.

ಬಿಇಒ ಕಚೇರಿಗಳ ಮೂಲಕ ಹಾಲ್‍ಟಿಕೆಟ್ ಪಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ. ಸರ್ಕಾರದ ಈ ನಿರ್ಧಾರವನ್ನು ನಾವು ಖಂಡಿಸುತ್ತೇವೆ. ಪರೀಕ್ಷಾ ಸಂದರ್ಭದಲ್ಲಿ ಪೋಷಕರು ಮಕ್ಕಳ ಶುಲ್ಕ ಪಾವತಿ ಮಾಡಬೇಕು. ಸರ್ಕಾರವೇ ನಿಗದಿಪಡಿಸಿರುವ ಶುಲ್ಕವನ್ನು ಪೋಷಕರು ಪಾವತಿ ಮಾಡಬೇಕು. ಆದರೆ, ಸರ್ಕಾರ ಹಾಲ್‍ಟಿಕೆಟ್ ಸಿಗದ ವಿದ್ಯಾರ್ಥಿಗಳಿಗೆ ಕೂಡಲೇ ಹಾಲ್‍ಟಿಕೆಟ್ ನೀಡುವಂತೆ ಬಿಇಒಗಳಿಗೆ ಸೂಚನೆ ನೀಡಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ್ದಾರೆ.

ಇದೇ 19 ಹಾಗೂ 22ರಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶುಲ್ಕ ನೆಪ ಇಟ್ಟುಕೊಂಡು ಖಾಸಗಿ ಶಾಲೆಗಳವರು ಹಾಲ್‍ಟಿಕೆಟ್ ನೀಡದೆ ವಿದ್ಯಾರ್ಥಿಗಳಿಗೆ ಸತಾಯಿಸುತ್ತಿದ್ದರು. 2020-21ನೆ ಸಾಲಿನ ಪೂರ್ತಿ ಶುಲ್ಕ ಕಟ್ಟದ ವಿದ್ಯಾರ್ಥಿಗಳಿಗೆ ಫೀಜ್ ಟಾರ್ಚರ್ ನೀಡುತ್ತಿದ್ದರು. ಪರೀಕ್ಷೆ ಬರೆಯಬೇಕು ಎಂದರೆ ಶುಲ್ಕ ಕಟ್ಟಿ ಎಂದು ಖಾಸಗಿ ಶಾಲೆಗಳು ಹೇಳಿದ್ದವು. ಇದೀಗ ಶುಲ್ಕ ಕಟ್ಟದೆ ವಿದ್ಯಾರ್ಥಿಗಳು ನೇರವಾಗಿ ಪರೀಕ್ಷೆ ಬರೆಯಬಹುದು.

ಪೋಷಕರಾಗಲಿ, ವಿದ್ಯಾರ್ಥಿಗಳಾಗಲಿ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಹಾಲ್‍ಟಿಕೆಟ್ ಸಿಗದ ವಿದ್ಯಾರ್ಥಿಗಳು ಆಯಾ ತಾಲ್ಲೂಕಿನ ಬಿಇಒ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿ ಹಾಲ್‍ಟಿಕೆಟ್‍ಗಳನ್ನು ಪಡೆದುಕೊಳ್ಳಬಹುದು. ಸರ್ಕಾರದ ಈ ನಿರ್ಧಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಮೊದಲೇ ಶಾಲೆಗಳು ನಡೆದಿಲ್ಲ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಶುಲ್ಕ ಪಾವತಿಸಲು ಪೋಷಕರು ಹೆಣಗಾಡುತ್ತಿದ್ದಾರೆ. ಶುಲ್ಕ ಪಾವತಿಸಲು ಹಾಲ್‍ಟಿಕೆಟ್ ನೆಪವಾಗಿಟ್ಟುಕೊಂಡು ಖಾಸಗಿ ಶಿಕ್ಷಣ ಸಂಸ್ಥೆಗಳು ಫೀಸ್ ಟಾರ್ಚರ್ ನೀಡುತ್ತಿರುವುದಕ್ಕೆ ಸರ್ಕಾರ ಈಗ ಸರಿಯಾದ ಶಾಕ್‍ಅನ್ನೇ ನೀಡಿದೆ. ಇದನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ವಿರೋಧಿಸಿದೆ. ಸರ್ಕಾರ ಒಳ್ಳೆಯ ಕ್ರಮ ಕೈಗೊಂಡಿದೆ ಎಂದು ಸಾರ್ವಜನಿಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.