ಕಲಬುರಗಿ, ಆ.12- ಕರ್ನಾಟಕದ ಯುವತಿಯರಿಗೆ ನೌಕರಿ ಬೇಕು ಎಂದರೆ ಮಂಚ ಹತ್ತಬೇಕು, ಯುವಕರಿಗೆ ನೌಕರಿ ಬೇಕು ಎಂದರೆ ಲಂಚ ನೀಡಬೇಕು. ಹಾಗಾಗಿ ಇದು ಲಂಚ-ಮಂಚದ ಸರ್ಕಾರವಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.40ರಷ್ಟು ಕಮಿಷನ್ ದಂಧೆಯ ಈ ಸರ್ಕಾರ ಯುವಕರ ವಿರೋಧಿಯಾಗಿದೆ. ಎಂಟು ವರ್ಷಗಳ ಹಿಂದೆ ಚುನಾವಣೆ ಪ್ರಚಾರದಲ್ಲಿ ನರೇಂದ್ರ ಮೋದಿ ಅವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿತ್ತು. ಆದರೆ ಇರುವ ಉದ್ಯೋಗಗಳು ನಷ್ಟವಾಗಿವೆ ಎಂದು ಅವರು ಆರೋಪಿಸಿದರು.
ದುಡ್ಡು ಕೊಡದಿದ್ದರೆ ಈ ಸರ್ಕಾರದಲ್ಲಿ ಯಾವುದೇ ಕೆಲಸವಾಗುವುದಿಲ್ಲ. ರಾಜ್ಯ ಮತ್ತು ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರದ್ದು ಶೂನ್ಯ ಸಾಧನೆಯಾಗಿದೆ. ಖಾಲಿಯಾಗಿರುವ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡುತ್ತಿಲ್ಲ.
ಸಚಿವ ಪ್ರಭು ಚೌಹಾನ್ ಆಪ್ತ ಜ್ಞಾನದೇವ ಜಾಧವ್ ಅನೇಕ ಹುದ್ದೆಗಳನ್ನು ಕೊಡಿಸುವದಾಗಿ ಹೇಳಿ ವಂಚಿಸಿದ್ದಾರೆ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿ ಹುದ್ದೆಗಳ ನೇಮಕಾತಿಯಲ್ಲಿಯೂ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿದರು.
ಕೆಪಿಟಿಸಿಎಲ್‍ನ 1,492 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಮೂರು ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಹಾಕಿದ್ದರು. ಸರ್ಕಾರ ಈ ನೇಮಕಾತಿಯನ್ನು ಪಿಎಸ್‍ಐ ಪರೀಕ್ಷೆ ಮಾದರಿಯಲ್ಲೇ ನಡೆಸಿದೆ. ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಸ್ಮಾರ್ಟ್ ವಾಚ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಯ ಬಂಧನವಾಗಿದೆ. ಹಾಗಾದರೆ ಕೆಪಿಟಿಸಿಎಲ್ ಹುದ್ದೆಗಳಿಗೂ ಮತ್ತೊಮ್ಮೆ ಪರೀಕ್ಷೆ ಮಾಡುತ್ತಾರಾ ಎಂದು ಪ್ರಶ್ನಿಸಿದರು.
ಕೆಪಿಟಿಸಿಎಲ್‍ನ ಕಿರಿಯ ಇಂಜಿನಿಯರ್ (ಜೆಇ) ಹುದ್ದೆಗೆ ಮೂವತ್ತು ಲಕ್ಷ ರೂಪಾಯಿ, ಸಹಾಯಕ ಇಂಜಿನಿಯರ್ (ಎಇ) ಹುದ್ದೆಗಳನ್ನು 50 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ. ಈ ರೀತಿ ಆರು ನೂರಕ್ಕೂ ಹೆಚ್ಚು ಹುದ್ದೆಗಳು ಮಾರಾಟವಾಗಿರುವ ಶಂಕೆಯಿದೆ ಎಂದು ಗಂಭೀರ ಆರೋಪ ಮಾಡಿದರು.
ಈ ಸರ್ಕಾರದ ಅವಯಲ್ಲಿ ನಡೆದಿರುವ ಎಲ್ಲಾ ನೇಮಕಾತಿಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು, ಅವರುಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಯಾವುದೇ ತಪ್ಪು ಮಾಡಿಲ್ಲ, ಪ್ರಾಮಾಣಿಕರು ಎಂದು ಹೇಳಿಕೊಳ್ಳುವ ಸರ್ಕಾರಕ್ಕೆ ನ್ಯಾಯಾಂಗ ತನಿಖೆ ನಡೆಸಲು ಹಿಂಜರಿಕೆ ಏಕೆ ಎಂದು ಪ್ರಶ್ನಿಸಿದರು.
ಸರ್ಕಾರಿ ಹುದ್ದೆಗಳನ್ನು ಮಾರಾಟ ಮಾಡುತ್ತಿದೆ, ಇನ್ನೂ ಮುಂದೆಯೂ ನೇಮಕಾತಿ ಹಗರಣಗಳನ್ನು ನಿರ್ಲಕ್ಷ್ಯಿಸಿದರೆ ನಿರುದ್ಯೋಗಿಗಳು ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹರ್ ಘರ್ ತಿರಂಗಾ ಅಭಿಯಾನದ ಹೆಸರಿನಲ್ಲಿ ಸರ್ಕಾರ ದೇಶಭಕ್ತಿ ಮತ್ತು ರಾಷ್ಟ್ರಧ್ವಜವನ್ನು ಮಾರಾಟಕ್ಕಿಟ್ಟಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿ ಕೊಡುಗೆ ಏನೂ ಇಲ್ಲ. ಧ್ವಜ ಸಂಹಿತೆ ಬದಲಾಯಿಸಿ, ಪಾಲಿಯಸ್ಟರ್ ಧ್ವಜ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಇದರಿಂದ ಖಾದಿ ಉದ್ಯಮಕ್ಕೆ ಘಾಸಿಯಾಗಿದೆ. ಪಾಲಿಸ್ಟರ್ ಧ್ವಜ ತಯಾರಿಸುತ್ತಿರುವುದು ರಿಲಯನ್ಸ್ ಗ್ರೂಪ್?. ದೇಶಭಕ್ತಿಯನ್ನೂ ಇವರು ಅದಾನಿ ಮತ್ತು ಅಂಬಾನಿ ಕಂಪನಿಗೆ ಅಡ ಇಟ್ಟಿದ್ದಾರೆ. ಸರ್ಕಾರಿ ಅಧಿಕಾರಿಗಳನ್ನು ಸೇಲ್ಸ್ ಏಜೆಂಟ್‍ಗಳನ್ನಾಗಿ ಬಳಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಧ್ವಜಗಳ ಮಾರಾಟಕ್ಕೂ ಕೇಂದ್ರ ಸರ್ಕಾರ ಗುರಿ ನಿಗದಿ ಮಾಡಿದೆ. ಸರ್ಕಾರವೇ ಧ್ವಜಗಳನ್ನು ಖರೀದಿಸಿ, ಮಾರಾಟ ಮಾಡಿ ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿದೆ. ಕಾಶ್ಮೀರಿ ಫೈಲ್ಸ್ ಸಿನಿಮಾಗೆ ತೆರಿಗೆ ರಿಯಾಯಿತಿ ಕೊಟ್ಟರು. ಅನೇಕ ಶಾಸಕರು ಚಿತ್ರವನ್ನು ಜನರಿಗೆ ಉಚಿತವಾಗಿ ತೋರಿಸಿದರು. ಈಗ ರಾಷ್ಟ್ರಧ್ವಜವನ್ನು ಉಚಿತವಾಗಿ ನೀಡದೆ ಮಾರಾಟ ಮಾಡುತ್ತಿದ್ದಾರೆ ಏಕೆ ಎಂದು ಪ್ರಶ್ನಿಸಿದರು.
ಎಸಿಬಿಯನ್ನು ರದ್ದು ಮಾಡಿ, ಲೋಕಾಯುಕ್ತವನ್ನು ಪುನರುಜ್ಜೀವನಗೊಳಿಸಿರುವ ಹೈಕೋರ್ಟ್ ತೀರ್ಪಿನಿಂದ ಸಿದ್ದರಾಮಯ್ಯ ಅವರ ಸರ್ಕಾರದ ಆದೇಶಕ್ಕೆ ಹಿನ್ನೆಡೆಯಾಗಿದೆ ಎಂಬ ವಿಶ್ಲೇಷಣೆ ಸರಿಯಲ್ಲ. ಬಿಜೆಪಿ 2018ರ ಚುನಾವಣೆಯಲ್ಲಿ ಲೋಕಾಯುಕ್ತವನ್ನು ಬಲಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅದನ್ನು ಈಡೇರಿಸಲಿಲ್ಲ. ಈಗಲೂ ಸರ್ಕಾರ ನಿರ್ಧಾರ ತೆಗೆದುಕೊಂಡಿಲ್ಲ. ಬದಲಾಗಿ ಹೈಕೋರ್ಟ್ ಆದೇಶ ನೀಡಿದೆ ಎಂದರು.
ಮುಖ್ಯಮಂತ್ರಿ ಬದಲಾವಣೆ ವಿಷಯ ಪ್ರಸ್ತಾಪ ಮಾಡಿದ್ದು ಬಿಜೆಪಿ ನಾಯಕರು, ಕಾಂಗ್ರೆಸ್ ಅವರ ಹೇಳಿಕೆ ಆಧರಿಸಿ ಟ್ವೀಟ್ ಮಾಡಿದೆ. ಈಗ ನೋಡಿದರೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.