ಬೆಂಗಳೂರು, ಜ.10- ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸುವ ಸರ್ಕಾರದ ಸಚಿವರು ಹಾಗೂ ಬಿಜೆಪಿ ನಾಯಕರ ವಿರುದ್ಧ ಮೊದಲು ಕೇಸು ದಾಖಲಿಸಿ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಸವಾಲು ಹಾಕಿದರು. ಮೇಕೆದಾಟು ಯೋಜನೆ ಶೀಘ್ರ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಯ ಎರಡನೇ ದಿನದಲ್ಲಿ ಭಾಗವಹಿಸಿದ್ದ ಅವರು, ಹೋರಾಟವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ನೀರು ಸಿಗುವವರೆಗೆ ಹೋರಾಟ ಮುಂದುವರಿಯಲಿದೆ. ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯವರು ಕಲುಬುರಗಿಯಲ್ಲಿ ಕಾರ್ಯಕ್ರಮ ಮಾಡಿದ್ದಾರೆ. ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಜನ ಸೇರಿದ್ದರು. ಅಲ್ಲಿ ಕೋವಿಡ್ ಉಲ್ಲಂಘನೆಯಾಗಲಿಲ್ಲವೇ ಎಂದು ಪ್ರಶ್ನಿಸಿದರು.
ಮೊದಲು ಮಂತ್ರಿಗಳ ಮೇಲೆ ಕೇಸ್ ಹಾಕಲಿ, ನಾವು ಕೇಸ್ ಹಾಕಿದ್ರೂ ಹೆದರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು. ಇದೇ ವೇಳೆ ಮಾತನಾಡಿದ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು, ನಾವು ಪಾದಯಾತ್ರೆ ಮಾಡುತ್ತಿರುವುದು ನೀರಿಗಾಗಿ. ಸರ್ಕಾರ ನೀರು ಕೊಟ್ಟರೆ ಹೋರಾಟ ನಿಲ್ಲಲಿದೆ. ಹೋರಾಟದ ಹಿಂದೆ ರಾಜಕೀಯ ಉದ್ದೇಶವಿಲ್ಲ. ನಿನ್ನೆಯ ಪಾದಯಾತ್ರೆಯಲ್ಲೂ ಸಾವಿರಾರು ಜನ ಸೇರಿದ್ದರು. ಇಂದು ಕೂಡ ಸೇರಿದ್ದಾರೆ. ಕಾಂಗ್ರೆಸ್ ಕಟ್ಟಾಳುಗಳು ಯಾವ ಕೇಸಿಗೂ ಹೆದರುವುದಿಲ್ಲ ಎಂದು ಹೇಳಿದರು.
