ನವದೆಹಲಿ, ಜ.21- ಮಾಜಿ ವಿಶ್ವ ಸುಂದರಿ ಹಾಗೂ ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ ಮತ್ತು ನಿಕ್ಸ್ ಜೋನ್ಸ್ ಜೋಡಿ ಬಾಡಿಗೆ ತಾಯ್ತನದ ಮೂಲಕ ಪೋಷಕರಾಗಿದ್ದಾರೆ. ಜನವರಿ 21ರಂದು ಪ್ರಿಯಾಂಕ ತಮ್ಮ ಇನ್ಸ್‍ಟಾಗ್ರಾಮ್‍ನಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ್ದು, ನಾವು ಈ ಸುದ್ದಿಯನ್ನು ಪ್ರಕಟಿಸಲು ಸಂತೋಷ ಪಡುತ್ತೇವೆ.
ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದೇವೆ. ಈ ವಿಶೇಷ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ಎಲ್ಲರಲ್ಲಿ ಗೌರವಯುತವಾಗಿ ಕೇಳಿಕೊಳ್ಳುತ್ತೇವೆ. ನಮ್ಮ ಕುಟುಂಬಕ್ಕೆ ಗಮನ ಕೇಂದ್ರಿಕರಿಸುತ್ತೇವೆ ಎಂದು ಪ್ರಿಯಾಂಕ ಪೋಸ್ಟ್ ಹಾಕಿದ್ದಾರೆ.
ಬಾಲಿವುಡ್‍ನಲ್ಲಿ ಭಾರೀ ಬೇಡಿಕೆಯ ನಟಿಯಾಗಿದ್ದ ಪ್ರಿಯಾಂಕ ಛೋಪ್ರಾ 2018ರ ಡಿಸೆಂಬರ್ 1ರಂದು ನಿಕ್ಸ್ ರನ್ನು ಮದುವೆಯಾಗಿದ್ದರು. ಮೂರು ವರ್ಷಗಳ ಬಳಿಕ ದಂಪತಿ ಬಾಡಿಗೆ ತಾಯ್ತನ ಮೂಲಕ ಮಗುವಿನ ಪೋಷಕರಾಗಿದ್ದಾರೆ.
ಪ್ರಿಯಾಂಕರ ಸಾಮಾಜಿಕ ಜಾಲತಾಣದ ಪೋಸ್ಟ್ ಭಾರೀ ವೈರಲ್ ಆಗುತ್ತಿದ್ದಂತೆ, ಬಾಡಿಗೆ ತಾಯ್ತನದ ಮೊರೆ ಹೋದ ಮತ್ತಷ್ಟು ಬಾಲಿವುಡ್ ಜೋಡಿಗಳ ಬಗ್ಗೆ ಚರ್ಚೆ ಆರಂಭವಾಗುತ್ತಿದೆ. ಇತ್ತೀಚೆಗೆ ಮದುವೆಯಾದ ನಟಿ ಕತ್ರಿನಾ ಕೈಫ್, ಎರಡನೇ ಸಂಬಂಧದಲ್ಲಿರುವ ನಟ ಮತ್ತು ನಿರ್ದೇಶಕ ಫರಾನ ಅಕ್ತರ್ ಅವರು ಬಾಡಿಗೆ ತಾಯ್ತನದ ಮೊರೆ ಹೋಗಿರುವ ಸುದ್ದಿಗಳಿವೆ.
ಈ ಮೊದಲು ಶಾರುಖ್ ಖಾನ್ ಮತ್ತು ಗೌರಿ ಖಾನ್ ದಂಪತಿ ತಮ್ಮ ಆರ್ಯನ್ ಮತ್ತು ಸುಹಾನ ಎಂಬ ಮಕ್ಕಳಿದ್ದರೂ 2013ರಲ್ಲಿ ಬಾಡಿಗೆ ತಾಯ್ತನದ ಮೂಲಕ ಮೂರನೇ ಮಗು ಅಬ್ರಾಮ್‍ನನ್ನು ಪಡೆದಿದ್ದರು. ಅಮಿರ್‍ಖಾನ್ ಮತ್ತು ಕಿರಣ್ ರಾವ್ 2011ರಲ್ಲಿ ಅಜಾದ್ ಎಂಬ ಪುತ್ರನನ್ನು ಕೃತಕ ಗರ್ಭಧಾರಣೆ (ಐವಿಎಫ್) ಪದ್ಧತಿಯ ಮೂಲಕ ಪಡೆದುಕೊಂಡಿದ್ದರು. ನಟಿ ಶಿಲ್ಪಾಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿ 2020ರಲ್ಲಿ ಸಮಿಶಾಳನ್ನು ಬಾಡಿಗೆ ತಾಯ್ತನದ ಮೂಲಕವೇ ಪಡೆದುಕೊಂಡಿದ್ದಾರೆ.
ಬಾಲಿವುಡ್‍ನಲ್ಲಿ ನಟಿ ಫರ್ಹಾ ಖಾನ್, ನಿರ್ದೇಶಕ ಕರಣ್ ಜೋಹರ್, ನಟ ತುಷಾರ್ ಕಪೂರ್, ನಟಿ ಏಕ್ತಾ ಕಪೂರ್ ಅವರು ಬಾಡಿಗೆ ತಾಯ್ತನದ ಸಹಾಯ ಪಡೆದವರಾಗಿದ್ದಾರೆ.
