ಪ್ರಿಯಾಂಕ ಗಾಂಧಿಯವರನ್ನು ಅಕ್ರಮ ಬಂಧನದಲ್ಲಿಟ್ಟಿದ್ದಾರೆ : ಖರ್ಗೆ ಆರೋಪ

ಬೆಂಗಳೂರು, ಅ.6- ಉತ್ತರ ಪ್ರದೇಶದ ಲಖಿಂಪುರ ಖೇರಿ ದುರ್ಘಟನೆಯಲ್ಲಿ ಆರು ಮಂದಿ ರೈತರು ಮೃತಪಟ್ಟಿದ್ದು, ಸಾಂತ್ವಾನ ಹೇಳಲು ಹೋದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರನ್ನು ಬಿಜೆಪಿ ಸರ್ಕಾರ ಅಕ್ರಮವಾಗಿ ಬಂಧನದಲ್ಲಿಟ್ಟಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ ವಿರೋಧಿಯಾದ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದರು. ಅವರಿಗೆ ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಶ್ ಮಿಶ್ರಾ ಕಳೆದೆರಡು ದಿನಗಳ ಹಿಂದೆ ಎಚ್ಚರಿಕೆ ಕೊಟ್ಟು, ನಿಮಗೆ ಪಾಠ ಕಲಿಸುತ್ತೇನೆ ಎಂದಿದ್ದ. ಅದೇ ವ್ಯಕ್ತಿ ಭಾನುವಾರ ಲಖಿಂಪುರಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿದ್ದಾನೆ.

ಘಟನೆಯಲ್ಲಿ ಆರು ಮಂದಿ ರೈತರು ಮೃತಪಟ್ಟಿದ್ದಾರೆ. ಉಳಿದಿಬ್ಬರು ಬಿಜೆಪಿ ಕಾರ್ಯಕರ್ತರು ಎಂದು ಹೇಳುತ್ತಿದ್ದಾರೆ. ಸತ್ಯಾಸತ್ಯತೆ ತನಿಖೆಯಿಂದ ತಿಳಿಯಬೇಕಿದೆ ಎಂದರು. ಮೃತ ಪಟ್ಟಿದ್ದಾರೆ. ನಂತರದ ಘಟನೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿ ಇಬ್ಬರು ಮೃತಪಟ್ಟಿದ್ದಾರೆ ಎಂದರು. ಮೃತಪಟ್ಟ ರೈತರ ಸಂಖ್ಯೆಯನ್ನು ನಾಲ್ಕು ಎಂದು ತಿದ್ದಲು ಈಶ್ವರ ಖಂಡ್ರೆ ಮುಂದಾದಾಗ ಖರ್ಗೆ ಅವರು ಸುಮ್ಮನಿರುವಂತೆ ಸೂಚಿಸಿದರು. ಈ ಮೂಲಕ ಮೃತಪಟ್ಟ ರೈತರ ಸಂಖ್ಯೆ ಎಷ್ಟು ಎಂಬ ಗೊಂದಲ ಸೃಷ್ಟಿಯಾಗಿದೆ.

ಮುಂದುವರೆದು ಮಾತನಾಡಿದ ಖರ್ಗೆ ಅವರು, ಸರ್ಕಾರ ರೂಪಿಸಿದ ಕಾನೂನುಗಳನ್ನು ವಿರೋಧಿಸಿದರೆ ತಕ್ಕ ಪಾಠ ಕಲಿಸುವುದಾಗಿ ಬಿಜೆಪಿಯ ಅನೇಕ ನಾಯಕರು ರೈತರಿಗೆ ಎಚ್ಚರಿಕೆ ನೀಡಿದ್ದಾರೆ. ಹರ್ಯಾಣದ ಮುಖ್ಯಮಂತ್ರಿ ಕಟ್ಟರ್ ಈ ಮೊದಲು ಹೇಳಿಕೆ ನೀಡಿ, ಪ್ರತಿ ಜಿಲ್ಲೆಗೆ ಏಳು ಸಾವಿರ ಬಿಜೆಪಿ ಕಾರ್ಯಕರ್ತರು ಸಂಘಟಿತರಾಗಿ ದೊಣ್ಣೆಗಳನ್ನು ಹಿಡಿದು ಪ್ರತಿಭಟನಾ ನಿರತ ರೈತರಿಗೆ ಟಿಟ್ ಫಾರ್ ಟ್ಯಾಟ್ ಮಾದರಿಯಲ್ಲಿ ಪಾಠ ಕಲಿಸಿ, ನೀವು ಜೈಲಿಗೆ ಹೋದರು ಚಿಂತೆ ಇಲ್ಲ. ಹಿರೋಗಳಾಗಿ ಹೊರ ಬರುತ್ತಿರಾ ಎಂದು ಪ್ರಚೋದಿಸಿದ್ದಾರೆ.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅಖಿಂಪುರಖೇರಿಯಲ್ಲಿ ಘಟನೆಗೂ ಮೊದಲು ಹೇಳಿಕೆ ನೀಡಿ, ರೈತರು ಪ್ರತಿಭಟನೆ ಕೈಬಿಟ್ಟು ಬದಲಾಗದಿದ್ದರೆ ಎರಡು ನಿಮಿಷದಲ್ಲಿ ಪಾಠ ಕಲಿಸುತ್ತೇವೆ ಎಂದಿದ್ದರು. ಅವರ ಪುತ್ರನೇ ರೈತರ ಮೇಲೆ ಕಾರು ಹತ್ತಿಸಿದ್ದಾನೆ. ಬಿಜೆಪಿಯ ಇತರೆ ನಾಯಕರು ನಾನಾ ರೀತಿಯಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದಾರೆ.

ಸುಪ್ರೀಂಕೋರ್ಟ್‍ನ ನ್ಯಾಯಾವಾದಿ ದುಶ್ಯಂತ ಪ್ರಕಾರ ಹರ್ಯಾಣದ ಮುಖ್ಯಮಂತ್ರಿ ಕಟ್ಟರ್ ಮತ್ತು ಕೇಂದ್ರ ಸಚಿವ ಅಜಯ್ ಮಿಶ್ರಾ ವಿರುದ್ಧ ದೇಶ ದ್ರೋಹದ ಕೇಸು ಹಾಕಬೇಕಿದೆ. ಆದರೆ ಕೇಂದ್ರ ಸರ್ಕಾರ ದೇಶ ದ್ರೋಹದ ಪ್ರಕರಣಗಳನ್ನು ಪತ್ರಕರ್ತರ ಮತ್ತು ಪ್ರತಿಪಕ್ಷಗಳ ನಾಯಕರ ವಿರುದ್ಧ ದಾಖಲಿಸುತ್ತಿದೆ. ಸಾಮಾನ್ಯ ಜನರ ಮೇಲೆ ಕೇಸು ಹಾಕಿ ಅಪಮಾನ ಮಾಡಿ, ಹೆದರಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಮೃತಪಟ್ಟವರ ಕುಟುಂಬಕ್ಕೆ ಸಾಂತ್ವಾನ ಹೇಳಲು ಹೋಗುತ್ತಿದ್ದ ನಮ್ಮ ಪಕ್ಷದ ನಾಯಕ ಪ್ರಿಯಾಂಕ ಗಾಂಧಿ ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ. ಯಾವುದೇ ಲಿಖಿತ ಆದೇಶ ಇಲ್ಲದೆ 40 ಗಂಟೆಗಳಿಂದ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದಾರೆ. ಪ್ರಿಯಾಂಕರ ವಿರುದ್ಧ ಯಾವುದೇ ವಾರೆಂಟ್ ಇಲ್ಲ.

ಕೇಸು ಕೂಡ ದಾಖಲಾಗಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಲಕ್ನೋಗೆ ಹೋಗಿದ್ದರೂ ಆದರೆ ರೈತರ ಮನೆಗೆ ಭೇಟಿ ನೀಡಿಲ್ಲ. ಪ್ರಿಯಾಂಕಗಾಂಧಿ ತಮ್ಮ ಅಕ್ರಮ ಬಂಧನದ ಬಗ್ಗೆ ವಿಡಿಯೋ ಸಂದೇಶದ ಮೂಲಕ ಪ್ರಧಾನಿ ಗಮನ ಸೆಳೆದಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಾಧೀಶರಾದ ಮಧನ್ ಲೋಕೂರ್ ಹೇಳಿಕೆ ನೀಡಿ ಪ್ರಿಯಾಂಕ ಗಾಂಧಿ ಅವರ ಬಂಧನ ಸಂಪೂರ್ಣ ಅಕ್ರಮ ಎಂದಿದ್ದಾರೆ. ಬಂಧಿಸಿದ ವ್ಯ್ಕತಿಯನ್ನು ಜೈಲಿಗೆ ಕಳುಹಿಸಬೇಕು ಅಥವಾ ಠಾಣೆಯಲ್ಲಿ ಇಡಬೇಕು. ಪ್ರಿಯಾಂಕ ಗಾಂಧಿ ಅವರನ್ನು ಅತಿಥಿಗೃಹದಲ್ಲಿ ಇಡಲಾಗಿದೆ. ಆ ಜಾಗವನ್ನು ಉಪಕಾರಾಗೃಹ ಎಂದು ಘೋಷಣೆ ಮಾಡಿಲ್ಲ. ಸರ್ವಾಧಿಕಾರಿ ಧೋರಣೆಯಿಂದ ಅಕ್ರಮವಾಗಿ ಬಂಧನದಲ್ಲಿ ಇಡಲಾಗಿದೆ. ಬಿಜೆಪಿ ಸರ್ಕಾರ ಸಂವಿಧಾನಾತ್ಮಕವಾಗಿ ನಡೆದುಕೊಳ್ಳದೆ ಭಯ ಬೀಳಿಸುವ ಪ್ರಯತ್ನ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.

ಲಖಿಂಪುರಕ್ಕೆ ಬಿಜೆಪಿ ಮುಖ್ಯಮಂತ್ರಿಗಳು ಹೋಗಿ ರೈತರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ. ಕಾಂಗ್ರೆಸ್‍ರನ್ನು ಯಾಕೆ ತಡೆಯಲಾಗುತ್ತಿದೆ, ಬಿಜೆಪಿಯವರು ವ್ಯವಸ್ಥೆಯಾಗಿ ಕಾಂಗ್ರೆಸ್‍ನ್ನು ತಡೆಯುವ ಹುನ್ನಾರ ನಡೆಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಮುಖ್ಯಮಂತ್ರಿಯಾಗಿ ಮುಂದುವರೆಯಲು ಅರ್ಹರಲ್ಲ. ಸಾಧು ಬಟ್ಟೆ ಹಾಕಿರುವ ಅವರು ಹತ್ರಾಸ್ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಮೃತಳ ಶವವನ್ನು ಕುಟುಂಬ ಸದಸ್ಯರಿಗೆ ತಿಳಿಸಿದೆ ಸುಟ್ಟು ಹಾಕಿಸಿದರು. ಈ ರೀತಿಯ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಯೋಗಿ ಆದಿತ್ಯನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ದೇಶದ ಜನ ಲಖಿಂಪುರಖೇರಿ ಘಟನೆಯನ್ನು ಖಂಡಿಸಬೇಕು ಎಂದು ಆಗ್ರಹಿಸಿದರು.

ತಕ್ಷಣವೇ ಪ್ರಿಯಾಂಕಗಾಂಧಿ ಅವರನ್ನು ಬಿಡುಗಡೆ ಮಾಡಬೇಕು. ಅವರ ಅಕ್ರಮ ಬಂಧನದ ವಿರುದ್ಧ ಸುಪ್ರೀಂಕೋರ್ಟ್‍ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ರೈತರ ಮೇಲೆ ಕಾರು ಹತ್ತಿಸಿದ ಆರೋಪಿಯನ್ನು ಬಂಧಿಸಬೇಕು.

ತಮ್ಮ ಪುತ್ರ ಸ್ಥಳದಲ್ಲಿ ಇರಲಿಲ್ಲ ಎಂದು ಹೇಳಿಕೆ ನೀಡಿ ಪ್ರಕರಣದ ದಿಕ್ಕು ತಪ್ಪಿಸುತ್ತಿರುವ ಕೇಂದ್ರ ಸಚಿವ ಅಜಯ್ ಮಿಶ್ರಾರನ್ನು ತಕ್ಷಣ ಸಂಪುಟದಿಂದ ವಜಾಗೊಳಿಸಬೇಕು. ಆರೊಪಿ ಆಶಿಸ್ ಮಿಶ್ರಾ ಕಾರಿನ ಎಡಭಾಗದಲ್ಲಿ ಕುಳಿತಿದ್ದ ಎಂದು ಪ್ರತ್ಯೇಕ್ಷವಾಗಿ ನೋಡಿದ ರೈತರೇ ಹೇಳಿಕೆ ನೀಡಿದ್ದಾರೆ. ಆದರೂ ಕೇಂದ್ರ ಸಚಿವರು ತಪ್ಪು ಮಾಹಿತಿ ನೀಡುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಿಯಾಂಕ ಗಾಂಧಿಯನ್ನು ಬಿಡುಗಡೆ ಮಾಡಿಸಲು ನಾವು ಸರ್ಕಾರದಲ್ಲಿ ಇಲ್ಲ. ಒಂದು ವೇಳೆ ನಾವು ಅಧಿಕಾರದಲ್ಲಿದ್ದರೆ ಪ್ರಿಯಾಂಕ ಅವರನ್ನು ಎರಡು ನಿಮಿಷದಲ್ಲಿ ಬಿಡುಗಡೆ ಮಾಡಿಸುತ್ತಿದ್ದೇವು. ಆರೋಪಿಯನ್ನು ಯಾವ ಒತ್ತಡಕ್ಕೆ ಮಣಿಯದೆ ಬಂಧಿಸುತ್ತಿದ್ದೇವು. ಕಾಂಗ್ರೆಸ್ ಈ ಘಟನೆಯಲ್ಲಿ ರಾಜಕಾರಣ ಮಾಡುತ್ತಿಲ್ಲ. ಬಿಜೆಪಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿ ತನ್ನ ಸರ್ವಾಧಿಕಾರಿ ಧೋರಣೆಯನ್ನು ಮುಂದುವರೆಸುತ್ತಿದೆ ಎಂದು ಖರ್ಗೆ ಆಕ್ರೋಶ ವ್ಯಕ್ತ ಪಡಿಸಿದರು.

ಕೃಷಿ ಕಾನೂನುಗಳ ಕುರಿತು ಸಂಸತ್‍ನಲ್ಲೂ ಚರ್ಚೆಗೆ ಅವಕಾಶ ನೀಡಿಲ್ಲ. ಪ್ರತಿಭಟನಾ ನಿರತ ರೈತರು ನೇರವಾಗಿ ನ್ಯಾಯಾಲಯದ ಮೆಟ್ಟಿಲು ಏರಿಲ್ಲ. ಕೃಷಿ ಕಾನೂನುಗಳ ಕುರಿತು ಬಿಜೆಪಿಯವರೇ ಸುಪ್ರೀಂಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿಸಿದ್ದಾರೆ. ತಮಗೆ ಬೇಕಾದಂತೆ ತೀರ್ಪು ಬಂದರೆ ಅಲ್ಲಿಗೆ ವಿಷಯ ಮುಗಿಸುತ್ತಾರೆ. ಕಾನೂನು ವಿರೋಧಿಸುತ್ತಿರುವ ರೈತರೊಂದಿಗೆ ಪ್ರಧಾನಿ ನೆಪಗಳನ್ನು ಬಿಟ್ಟು ಮಾತುಕತೆ ನಡೆಸಬೇಕು ಎಂದರು.

ಆರ್‍ಎಸ್‍ಎಸ್ ವಿರುದ್ಧ ಆಕ್ರೋಶ: ಆರ್‍ಎಸ್‍ಎಸ್ ಸಾಮಾಜಿಕ ನ್ಯಾಯವನ್ನು ಒಪ್ಪುವುದಿಲ್ಲ. ಗೋಲ್ವಾಲ್ಕರ್ ಸಿದ್ಧಾಂತ ಪಾಲನೆ ಮಾಡುತ್ತದೆ. ಮನುಸ್ಮøತಿ ಪಾಲನೆಯಾಗಬೇಕು ಎಂದು ಹೇಳುತ್ತದೆ. ಆರ್‍ಎಸ್‍ಎಸ್ ಕಾರಣದಿಂದಲೇ ನಾನು ಕಲಬುರ್ಗಿ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದೇನೆ. ಆ ಸಂಘಟನೆ ವಿರುದ್ಧ ನಮ್ಮ ಹೋರಾಟ ಸದಾ ಕಾಲ ಇರುತ್ತದೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ದೃವನಾರಾಯಣ್, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.