ಬೆಂಗಳೂರು,ಜು.15- ವಿದ್ಯಾರ್ಥಿಗಳಿಗೆ ಉಂಟಾಗುತ್ತಿದ್ದ ಕಿರಿಕಿರಿಯನ್ನು ತಪ್ಪಿಸಲು ಮುಂದಾಗಿರುವ ರಾಜ್ಯ ಸರ್ಕಾರ ವೃತ್ತಿಪರ ಕೋರ್ಸ್‍ಗಳ ಪ್ರವೇಶಾತಿಯ ದಾಖಲಾತಿಗಳನ್ನು ಆನ್‍ಲೈನ್ ಮೂಲಕವೇ ಪರಿಶೀಲನೆ ನಡೆಸುವ ವಿನೂತನ ಸಾಫ್ಟ್‍ವೇರ್‍ನ್ನು ಅಭಿವೃದ್ಧಿಪಡಿಸಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೆ ಬರಲಿದ್ದು, ಇನ್ನು ಮುಂದೆ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‍ಗಳಾದ ಎಂಬಿಬಿಎಸ್, ಇಂಜಿನಿಯರಿಂಗ್, ದಂತ ವೈದ್ಯಕೀಯ, ಕೃಷಿ ಸೇರಿದಂತೆ ಮತ್ತಿತರ ಕೋರ್ಸ್‍ಗಳಿಗೆ ಆನ್‍ಲೈನ್ ಮೂಲಕವೇ ದಾಖಲೆಗಳನ್ನು ಭರ್ತಿ ಮಾಡಬಹುದು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದಕ್ಕಾಗಿಯೇ ಪ್ರತ್ಯೇಕವಾದ ಸಾಫ್ಟ್‍ವೇರ್‍ವೊಂದನ್ನು ಅಭಿವೃದ್ಧಿಪಡಿಸಿದ್ದು, ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕವೇ ಪ್ರವೇಶಾತಿ ದಾಖಲೆಗಳನ್ನು ಸಲ್ಲಿಸಬಹುದು.
ನಾಳೆಯಿಂದ 18ರವರೆಗೆ ವೃತ್ತಿಪರ ಕೋರ್ಸ್‍ಗಳ ಪ್ರವೇಶಾತಿಗೆ ದಾಖಲೆಗಳ ಪರಿಶೀಲನೆ ನಡೆಯಲಿದ್ದು, ವಿದ್ಯಾರ್ಥಿಗಳು ಆನ್‍ಲೈನ್‍ನಲ್ಲಿಯೇ ತಮ್ಮ ದಾಖಲೆಗಳನ್ನು ಸಲ್ಲಿಕೆ ಮಾಡಬಹುದು.
ಈ ಮೊದಲು ಸಿಇಟಿ ಬರೆದ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‍ಗಳಿಗೆ ದಾಖಲೆಗಳನ್ನು ಬೆಂಗಳೂರು ಸೇರಿದಂತೆ ಕೆಇಎ ನಿಗದಿಪಡಿಸಿದ ಕೇಂದ್ರಗಳಲ್ಲಿ ಸಲ್ಲಿಕೆ ಮಾಡಬೇಕಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಭಾರೀ ತೊಂದರೆ ಉಂಟಾಗುತ್ತಿತ್ತು.
ದೂರದ ಕಲಬುರಗಿ, ಮಂಗಳೂರು, ಬೆಳಗಾವಿ, ಬೀದರ್ ಸೇರಿದಂತೆ ಮತ್ತಿತರ ಭಾಗಗಳಿಂದ ಬೆಂಗಳೂರಿಗೆ ಬರಬೇಕಾದರೆ ವಿದ್ಯಾರ್ಥಿಗಳು ಒಂದಿಲ್ಲೊಂದು ತೊಂದರೆಗಳನ್ನು ಎದುರಿಸುತ್ತಿದ್ದರು.
ಇದನ್ನು ತಪ್ಪಿಸುವ ಸಲುವಾಗಿಯೇ ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಕೆಇಎ ಪ್ರತ್ಯೇಕವಾದ ಸಾಫ್ಟ್‍ವೇರ್ ಸಿದ್ದಪಡಿಸಿದ್ದು, ಇದರಿಂದ ವಿದ್ಯಾರ್ಥಿಗಳು ಒಂದು ಕೇಂದ್ರದಿಂದ ಮತ್ತೊಂದು ಕೇಂದ್ರಕ್ಕೆ ಅಲೆಯುವುದು ತಪ್ಪಿದಂತಾಗುತ್ತದೆ.
ವಿದ್ಯಾರ್ಥಿಗಳು ಸಾಫ್ಟ್‍ವೇರ್‍ನಲ್ಲಿ ಮೊದಲು ತಮ್ಮ ಹೆಸರು, ನೋಂದಣಿ ಸಂಖ್ಯೆ, ವರ್ಗ, ಸಿಇಟಿಯಲ್ಲಿ ಪಡೆದಿರುವ ಅಂಕ ಮತ್ತಿತರ ಅಗತ್ಯ ದಾಖಲೆಗಳನ್ನು ನಮೂದಿಸಬಹುದು.