ಬೆಂಗಳೂರು, ಜು.20- ಆಸ್ತಿಗಾಗಿ ಒಡಹುಟ್ಟಿದ ತಮ್ಮನನ್ನೇ ಅಣ್ಣ ಕೊಲೆ ಮಾಡಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾವೇರಿ ಪುರದ 3ನೇ ಮುಖ್ಯರಸ್ತೆ, 5ನೇ ಕ್ರಾಸ್ ನಿವಾಸಿ ವಿನಯ್ ಕುಮಾರ್(31) ಕೊಲೆಯಾದ ದುರ್ದೈವಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಣ್ಣ ಸತೀಶ್ ಕುಮಾರ್(37)ನನ್ನು ಪೊಲೀಸರು ಬಂಧಿಸಿದ್ದಾರೆ.
ಸುಮಾರು 40 ವರ್ಷಗಳಿಂದ ಅರಸಯ್ಯ-ಜಯಮ್ಮ ಎಂಬುವರು ಕಾವೇರಿ ಪುರದಲ್ಲಿ ವಾಸವಾಗಿದ್ದು, ಇವರ ಮೊದಲನೇ ಮಗ ಸತೀಶ್ ಕುಮಾರ್ ಬೌಲಿ ಕಂಪೆನಿಯಲ್ಲಿ ಸೇಲ್ಸ್ ಎಕ್ಸಿಟ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದು, ಸುಶೀಲ ಎಂಬುವರನ್ನು ಮದುವೆಯಾಗಿ ಮೊದಲನೇ ಮಹಡಿಯಲ್ಲಿ ವಾಸ ಮಾಡಿಕೊಂಡಿದ್ದಾರೆ.
ಎರಡನೇ ಮಗ ವಿನಯ್ಕುಮಾರ್ ತಾವರೆಕೆರೆಯಲ್ಲಿರುವ ಅಮ್ಮ ಆಸ್ಪತ್ರೆಯಲ್ಲಿ ಲ್ಯಾಬ್ ಇಟ್ಟುಕೊಂಡು ವ್ಯವಹಾರ ನೋಡಿಕೊಂಡು ಅಪ್ಪ- ಅಮ್ಮನ ಜೊತೆಯಲ್ಲಿಯೇ ವಾಸಮಾಡಿಕೊಂಡಿದ್ದು, 4ನೇ ಮಹಡಿಯ ರೂಂ ನಲ್ಲಿ ಮಲಗುತ್ತಿದ್ದನು.
ಸತೀಶ್ಕುಮಾರ್ ವಿಪರೀತ ಸಾಲ ಮಾಡಿಕೊಂಡಿದ್ದು, ಆಸ್ತಿ ಮಾರಾಟ ಮಾಡುವ ವಿಚಾರವಾಗಿ ಪೋಷಕರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದನು. ಮನೆಯಲ್ಲಿ ತೀವ್ರ ತೊಂದರೆಯಾಗಿ ಹಣದ ಅವಶ್ಯಕತೆ ಇದ್ದುದರಿಂದ ತಾಯಿ ಜಯಮ್ಮ ಅವರು ಮೂರು ತಿಂಗಳ ಹಿಂದೆ ಚಿನ್ನದ ವಡವೆಗಳನ್ನು ಅಡವಿಟ್ಟಿದ್ದರು.
ಈ ವಿಷಯವಾಗಿ ತಾಯಿ ಜೊತೆ ಸತೀಶ್ ಕುಮಾರ್ ಆಗಾಗ್ಗೆ ಜಗಳವಾಡುತ್ತಿದ್ದುದರಿಂದ ಸತೀಶ್ ಕುಮಾರ್ ಮತ್ತು ಆತನ ಪತ್ನಿ ಜೊತೆ ತಾಯಿ ಮಾತನಾಡುತ್ತಿರಲಿಲ್ಲ. ನಿನ್ನೆ ಬೆಳಗ್ಗೆ 9 ಗಂಟೆಗೆ ವಿನಯ್ಕುಮಾರ್ ಹೊರಗಡೆ ಹೋಗಿ ಅರ್ಧಗಂಟೆಗೆ ವಾಪಸ್ ಬಂದು ರೂಂಗೆ ಹೋಗಿದ್ದನು. ಸತೀಶ್ ಕುಮಾರ್ ಬೆಳಗ್ಗೆ 9.30ರ ಸುಮಾರಿಗೆ ಪತ್ನಿ ಸುಶೀಲರನ್ನು ಕೆಲಸಕ್ಕೆ ಬಿಟ್ಟು ಮನೆಗೆ ವಾಪಸ್ ಬಂದಿದ್ದಾನೆ.
ಮಧ್ಯಾಹ್ನ 12.15ರ ಸುಮಾರಿನಲ್ಲಿ ವಿನಯ್ ಕುಮಾರ್ ಕೆಳಗೆ ಬಂದು ಸ್ನಾನ ಮಾಡಿ ಹಾಲು ಮತ್ತು ಬ್ರೆಡ್ ತೆಗೆದುಕೊಂಡು ರೂಂಗೆ ಹೋಗಿದ್ದಾನೆ. ಈ ನಡುವೆ 1.15ರ ಸುಮಾರಿನಲ್ಲಿ ಹೊರಗಿನಿಂದ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುವವರು ಓನರ್ ಆಂಟಿ ಎಂದು ಕೂಗಿಕೊಳ್ಳುತ್ತಿರುವುದು ಕೇಳಿಸಿಕೊಂಡು ಹೋಗಿ ನೋಡಿದಾಗ ಮಗ ವಿನಯ್ಕುಮಾರ್ ಪಕ್ಕದ ಮನೆಯ ಮೊದಲನೇ ಮಹಡಿಯ ಮೆಟ್ಟಿಲಿನ ಮೇಲೆ ತಲೆ ಕೆಳಗಾಗಿ ಬಿದ್ದಿದ್ದು ಕಂಡು ಬಂದಿದೆ.
ತಕ್ಷಣ ಅಲ್ಲಿಗೆ ಹೋದಾಗ ವಿನಯ್ ಕುಮಾರ್ ಪ್ರಜ್ಞೆ ತಪ್ಪಿ ಬಿದ್ದಿದ್ದು, ಕೈಮೇಲೆ, ಕಿಬೊಟ್ಟಿಗೆ ಚಾಕುವಿನಿಂದ ಹಲ್ಲೆಯಾಗಿರುವುದು, ರಕ್ತ ಹರಿಯುತಿದ್ದುದ್ದು ಕಂಡು ತಾಯಿ ನೀರು ಕುಡಿಸಲು ಹೋದಾಗ ನೀರು ಕುಡಿದಿಲ್ಲ. ಕಟ್ಟಡದ ಮೇಲೆ ರಕ್ತ ಚಿಮ್ಮಿತ್ತು. ತಕ್ಷಣ ವಿನಯ್ ಕುಮಾರ್ನನ್ನು ಅಬ್ಯುಲೆನ್ಸ್ನಲ್ಲಿ ಲಕ್ಷ್ಮೀ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದುದ್ದಾಗಿ ತಿಳಿಸಿದ್ದಾರೆ.
ವಿಷಯ ತಿಳಿದು ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರೀಶಿಲಿಸಿದಾಗ ರೂಂ ಬೆಡ್ ಮೇಲೆ ಮತ್ತು ಗೋಡೆಗಳ ಮೇಲೆ, ರೂಂನ ಹೊರಗಡೆ ರಕ್ತದ ಕಲೆಗಳಿರುವುದು ಕಂಡು ಬಂದಿದೆ.
ಘಟನೆ ಸಂಬಂಧ ತಾಯಿ ಜಯಮ್ಮ ಪೊಲೀಸರಿಗೆ ದೂರು ನೀಡಿದ್ದು, ನನ್ನ ಮೊದಲನೇ ಮಗ ಸತೀಶ್ ಕುಮಾರ್ ಆಸ್ತಿ ವಿವಾದದ ದ್ವೇಷದಿಂದ ಎರಡನೇ ಮಗ ವಿನಯ್ ಕುಮಾರ್ನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಸತೀಶ್ ಕುಮಾರ್ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.