ಅಂಬೇಡ್ಕರ್ ಅವರಿಗೆ ಅವಮಾನ : ಜೈನ್ ವಿವಿ ರದ್ದತಿಗೆ ಆಗ್ರಹಿಸಿ ಸದನದಲ್ಲಿ ಧರಣಿ

Social Share

ಬೆಂಗಳೂರು, ಫೆ. 15- ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಜೈನ್ ವಿಶ್ವವಿದ್ಯಾಲಯದಲ್ಲಿ ಅಪಮಾನ ಮಾಡಲಾಗಿದೆ ಎಂಬ ಆರೋಪ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿದಲ್ಲದೆ, ಜೈನ್ ವಿಶ್ವವಿದ್ಯಾಲಯವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ ಕೆಲಕಾಲ ಧರಣಿ ನಡೆಸಿದರು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅನ್ನದಾನಿ, ಜೈನ್ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ಗೆ ಅಪಮಾನ ಮಾಡಲಾಗಿದೆ. ಆ ವಿಶ್ವವಿದ್ಯಾಲಯದ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವಿಶ್ವವಿದ್ಯಾನಿಲಯಕ್ಕೆ ಸ್ವಾಯತ್ತ ವಿವಿಗೆ ಅನುಮತಿ ಕೊಟ್ಟಿದ್ದು ಯಾರು? ಸರಿಯಾಗಿ ಶಿಕ್ಷಣ ನೀಡುವ ಯೋಗ್ಯತೆ ಇಲ್ಲ. ಸರ್ಕಾರ ಕೂಡಲೇ ನೀಡಿರುವ ಅನುಮತಿ ರದ್ದುಪಡಿಸಬೇಕು. ಸಂವಿಧಾನಶಿಲ್ಪಿಗೆ ಅವಮಾನ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಹರ್ಷವರ್ದನ್ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಶೆಂಪುರ್ ಕೂಡ ಅಂಬೇಡ್ಕರ್ಗೆ ಅವಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, ಕೆಲವು ವಿದ್ಯಾರ್ಥಿಗಳು ಸಮಾರಂಭವೊಂದರಲ್ಲಿ ಅಂಬೇಡ್ಕರ್ ಅವರನ್ನು ಅವಹೇಳನ ಮಾಡುವ ರೀತಿ ನಾಟಕ ಮಾಡಿದ್ದಾರೆ ಎಂಬುದು ನೋಟಿಸ್ನಲ್ಲಿದೆ. ಅಂಬೇಡ್ಕರ್ಗೆ ಅವಮಾನ ಮಾಡುವುದನ್ನು ಸಹಿಸುವುದಿಲ್ಲ. ಈ ಬಗ್ಗೆ ಸಮಾಜ ಕಲ್ಯಾಣ ಸಚಿವರಿಂದ ಸೂಕ್ತ ಉತ್ತರ ಕೊಡಿಸುವ ಭರವಸೆ ನೀಡಿದರು.

ಆದರೂ ತೃಪ್ತರಾಗದೇ ವಿಶ್ವವಿದ್ಯಾಲಯಕ್ಕೆ ನೀಡಿರುವ ಅನುಮತಿ ರದ್ದುಪಡಿಸಬೇಕು ಎಂದು ಆಗ್ರಹಿಸಿ ಅನ್ನದಾನಿ ಕೆಲ ಕಾಲ ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ಮಾಡಿದರು.
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಅವರು ಸಮಾಧಾನ ಪಡಿಸಿದ ನಂತರ ಧರಣಿ ಹಿಂಪಡೆದು ಸ್ವಸ್ಥಾನಕ್ಕೆ ಮರಳಿದರು.

ಮತ್ತೆ ಮಾತನಾಡಿದ ಸಚಿವ ಮಾಧುಸ್ವಾಮಿ, ಅನ್ನದಾನಿ ಅವರೇ ಕೆಲವರನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಅಂಬೇಡ್ಕರ್ಗೆ ಅವಮಾನ ಮಾಡಿದವರನ್ನು ಯಾವುದೇ ಕಾರಣಕ್ಕೂ ಸರ್ಕಾರ ಸಹಿಸುವುದಿಲ್ಲ. ಈ ಸಂಬಂಧ ವರದಿ ಪಡೆದು ಕ್ರಮ ಜರುಗಿಸುವ ಭರವಸೆ ನೀಡಿದರು.

Protest Againt #Jain University

Articles You Might Like

Share This Article