ಕನ್ನಡ ಮಾಧ್ಯಮ ಶಾಲೆಗಳ ಅನುದಾನಕ್ಕಾಗಿ ಪರಿಷತ್ ನಲ್ಲಿ ಪಕ್ಷಾತೀತವಾಗಿ ಧರಣಿ

Social Share

ಬೆಂಗಳೂರು,ಫೆ.13- ಕನ್ನಡ ಮಾಧ್ಯಮದ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿ ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನ ಕೆಲ ಸದಸ್ಯರು ಪಕ್ಷಾತೀತವಾಗಿ ಧರಣಿ ನಡೆಸಿದ ಪ್ರಸಂಗ ನಡೆಯಿತು.

ಬೋಜನ ವಿರಾಮದ ಬಳಿಕ‌, ನಿಯಮ 330 ರ ಅಡಿ ಗಮನ ಸೆಳೆಯುವ ಸೂಚನೆಯಲ್ಲಿ ಸದಸ್ಯರು 1986-87 ರಿಂದ 1994-95ರ ನಡುವೆ ಪ್ರಾರಂಭವಾಗಿ‌‌ ಸತತವಾಗಿ ನಡೆಯುತ್ತಿರುವ ಎಲ್ಲಾ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳನ್ನು ವೇತನಾದಾನಕ್ಕೆ ಒಳಪಡಿಸುವ ವಿಷಯ ಕುರಿತು ಪ್ರಸ್ತಾಪಿಸಿದರು.

ಎಸ್.ಎಲ್.ಭೋಜೇಗೌಡ, ಕರ್ನಾಟಕದಲ್ಲಿ ಕನ್ನಡಕ್ಕೆ ಮಾನ್ಯತೆ ಇಲ್ಲವಾಗಿದೆ. ಅನುದಾನದಿಂದ ಹೊರಗೆ ಉಳಿದಿರುವ ಕನ್ನಡ ಮಾಧ್ಯಮದ 114 ಶಾಲೆಗಳಿಗೆ ಒಂದು ಅವಧಿಗೆ ಸೇರಿದಂತೆ ಅನುದಾನ ಕೊಡಬೇಕು ಎಂದು ಒತ್ತಾಯಿಸಿದರು.

ಪುಟ್ಟಣ್ಣ, ಈ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಅದನ್ನು ಪಾಲಿಸದಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. 2015ರಿಂದಲೂ ಖಾಸಗಿ ಶಾಲೆಗಳಲ್ಲಿ ಬಾಕಿ ಇರುವ ಹುದ್ದೆಗಳಿಗೆ ನೇಮಕಾತಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಎಸ್.ವಿ.ಸಂಕನೂರು, ಸರ್ಕಾರದಲ್ಲಿ ಹಣಕಾಸಿನ ಕೊರತೆ ಇಲ್ಲ ಎಂದು ಹೇಳುತ್ತಾರೆ. ಆದರೆ ಸಂಪುಟದಲ್ಲಿ ತೆಗೆದುಕೊಂಡ ನಿರ್ಧಾರವನ್ನು ತಡೆ ಹಿಡಿಯಲು ಹಣಕಾಸು ಇಲಾಖೆ ಅಧಿಕಾರಿಗಳು ಟಿಪ್ಪಣಿ ಬರೆಯುತ್ತಾರೆ. ಈ ಮೂಲಕ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಅವಮಾನ ಮಾಡುತ್ತಿದ್ದಾರೆ. 25 ವರ್ಷಗಳಿಂದ ನಡೆದಿರುವ ಶಾಲೆಗಳಲ್ಲಿ ಕೆಲಸ ಮಾಡುವವರು ಇನ್ನೂ ಕೆಲವೇ ವರ್ಷಗಳಲ್ಲಿ ನಿವೃತ್ತರಾಗುತ್ತಿದ್ದಾರೆ‌. ಅವರು ಬದುಕಿನ ಇಳಿ ವಯಸ್ಸಿನಲ್ಲಿ ಬರಿ ಕೈನಲ್ಲಿ ಮನೆಗೆ ಹೋಗುವ ಪರಿಸ್ಥಿತಿ ಬರಬಾರದು. ಕೂಡಲೇ ಆ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಿ ಎಂದು ಒತ್ತಾಯಿಸಿದರು.

ಮರಿತಿಬ್ಬೇಗೌಡ, ವೇತನಾನುದಾನ ನೀಡುವುದನ್ನು ಬಹಳ ವರ್ಷಗಳ ಹಿಂದೆ ಸರ್ಕಾರ ನಿಲ್ಲಿಸಿದ್ದವು. ಸಭಾಪತಿಯವರು ಶಿಕ್ಷಣ ಸಚಿವರಾಗಿದ್ದಾಗ ವೇತನಾನುದಾತ ನೀಡುವ ಪದ್ಧತಿಯನ್ನು ಮತ್ತೆ ಶುರು ಮಾಡಲಾಯಿತು. ವೇತನಾನುದಾನ ಕಡತ ಇತ್ಯರ್ಥವಾಗಬೇಕಾದರೆ ಭಾರಿ ಭ್ರಷ್ಟಚಾರ ನಡೆಯುತ್ತದೆ. ಈವರೆಗೂ 2699 ಶಾಲೆಗಳಿಗೆ ಅನುದಾನ ನೀಡಲಾಗಿದೆ.

ಬಾಕಿ ಇರುವ 114 ಶಾಲೆಗಳಿಗೆ ಅನುದಾನ ನೀಡಲು ಸರ್ಕಾರ ಚೌಕಾಶಿ ಮಾಡುತ್ತಿದೆ. ಈ‌ ಶಾಲೆಗಳಲ್ಲಿ 576 ಹುದ್ದೆಗಳಿದ್ದು ಅನುದಾನಕ್ಕೆ ಒಳಪಡಿಸಿದರೆ ವಾರ್ಷಿಕ 26.76 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದರು.

ಅನುದಾನಕ್ಕೆ ಒಳಪಡಿಸಲು ಬೆಳಗಾವಿಯ ಸುವರ್ಣಸೌಧದಲ್ಲಿ ಮುಖ್ಯಂತ್ರಿ‌ಬಸವರಾಜ ಬೊಮ್ಮಾಯಿ, ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ಅನುದಾನಕ್ಕೆ ಒಳಪಡಿಸಲು ತೀರ್ಮಾನಿಸಲಾಗಿದೆ.‌ಇದಕ್ಕೆ ತಕರಾರು ಯಾಕೆ ಎಂದು ಪ್ರಶ್ನಿಸಿದರು.

ಈ ಶಾಲೆಗಳಿಗೆ ನಾಳೆಯಿಂದಲೇ ಅನುದಾನಕ್ಕೆ ಒಳಪಡಿಸುವುದಾಗಿ ಹೇಳುವವರೆಗೂ ನಾನು ಸಭಾಪತಿ ಮುಂದಿನ ಬಾವಿಯಿಂದ ಹೊರ ಬರುವುದಿಲ್ಲ ಎಂದು ಧರಣಿ ನಡೆಸುವ ಎಚ್ಚರಿಕೆ ನೀಡಿದರು‌. ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವವ ಶಿಕ್ಷಕರು 108 ದಿನ ಧರಣಿ ನಡೆಸಿದ್ದಾರೆ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆಯಾದ ಬಳಿಕ ಖಾಸಗಿ ಆಡಳಿತ ಮಂಡಳಿ ವೇತನ ನೀಡುತ್ತಿಲ್ಲ. ಇತ್ತ ಸರ್ಕಾರದ ಅನುದಾನವೂ ಇಲ್ಲದೇ ಜೀವನ ನಡೆಸಲು ಕಷ್ಟವಾಗಿದೆ ಎಂದರು.

ಮಾತಿನ ಭರದಲ್ಲಿ ಬಸವರಾಜ ಹೊರಟ್ಟಿಯವರನ್ನು ಸಭಾಪತಿ ಎನ್ನುವ ಬದಲು ಮುಖ್ಯಮಂತ್ರಿ ಎಂದು ಬಾಯಿ ತಪ್ಪಿ ಹೇಳಿದ್ದು ಸ್ವಾರಸ್ಯಕರ ಚರ್ಚೆಗೆ ಗ್ರಾಸವಾಯಿತು. ಮರಿತಿಬ್ಬೆಗೌಡರ ಬಾಯಿನಲ್ಲಿ ಬಂದಿದೆ ಎಂದರೆ ಅದು ನಿಜವಾಗಬಹುದು ಎಂದು ವಿಪಕ್ಷ ನಾಯಕ ಹರಿಪ್ರಸಾದ್ ಹೇಳಿದರು.
ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಸಭಾಪತಿ ಸ್ಥಾನ ನೀಡಲು ಮೀನಾಮೇಶ ಎಣಿಸಲಾಗಿತ್ತು. ಇನ್ನೂ ಮುಖ್ಯಮಂತ್ರಿ ಮಾಡುತ್ತಾರಾ ಎಂದು ಕಾಲೆಳೆದರು.

ತೇಜೆಸ್ವಿನಿ ರಮೇಶ್, ನೀವು ಆಡಳಿತ ಭಾಗದಲ್ಲಿ ಕುಳಿತು ಆ ಮಾತು ಹೇಳಿದ್ದರೆ ಬೇಗ ನಿಜವಾಗುತ್ತಿತ್ತು ಎಂದು ಮರಿತಿಬ್ಬೇಗೌಡರಿಗೆ ಹೇಳಿದರು. ಹೊರಟ್ಟಿ ಅವರನ್ನು ನಾವು ಸಭಾಪತಿ ಮಾಡಿದ್ದೇವೆ ಎಂದು ಸರ್ಕಾರದ ಮುಖ್ಯಸಚೇತಕ ವೈ.ಎ‌.ನಾರಾಯಣ ಸ್ವಾಮಿ ನುಡಿದರು. ನಿಮಗಿಂತ ಮೊದಲು ನಮ್ಮಲ್ಲಿ ಅವರನ್ನು‌ ಸಭಾಪತಿ ಮಾಡಲಾಗಿತ್ತು ಎಂದು ಮರಿತಿಬ್ಬೇಗೌಡ ತಿರುಗೇಟು ನೀಡಿದರು.

ಅದಕ್ಕೂ ನಮ್ಮ ಪಕ್ಷದ ಬೆಂಬಲ ಇತ್ತು ಎಂದು ವೈ.ಎ.ನಾರಾಯಣವಸ್ವಾಮಿ ಸ್ಪಷ್ಟನೇ ನೀಡಿದರು. ಸಭಾಪತಿ ಮಾಡದಿದ್ದರೆ ಕುತ್ತಿಗೆಗೆ ಬರುತ್ತದೆ ಎಂಬ ಪರಿಸ್ಥಿತಿಯಲ್ಲಿ ಬಿಜೆಪಿ ಅನಿವಾರ್ಯವಾಗಿ ಅವಕಾಶ ನೀಡಿದೆ ಎಂದು ಬೋಜೇಗೌಡ ಕಿಚಾಯಿಸಿದರು‌.

ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ವಾರ್ಷಿಕ ವೆಚ್ಚ 26.76 ಕೋಟಿ ಮಾತ್ರ‌. ಸದನದ ನಿರ್ಣಯವಾದ ನಂತರವೂ ಹಣಕಾಸು ಇಲಾಖೆ ಅಕ್ಷೇಪ ವ್ಯಕ್ತ ಪಡಿಸುವುದು ಸರಿಯಲ್ಲ. ವೈ.ಎ.ನಾರಾಯಣಸ್ವಾಮಿ, ಜಿ.ಮಧುಗೌಡ, ಹಣಮಂತಪ್ಪ ನಿರಾಣಿ, ನಾಗರಾಜ್ ಯಾದವ್, ಪ್ರಕಾಶ್ ರಾಥೋಡ್ ಚರ್ಚೆಯಲ್ಲಿ ಭಾಗವಹಿಸಿದ್ದರು.

ಚರ್ಚೆಗೆ ಉತ್ತರ ನೀಡಿದ ಶಾಲಾ ಶಿಕ್ಷಣ ಸಚಿವ ಸಚಿವ ಬಿ.ಸಿ.ನಾಗೇಶ್, ಇವು 1995 ಹಿಂದಿನ ಶಾಲೆಗಳು. ಆರ್ಥಿಕ ಇಲಾಖೆ ಅನುದಾನಕ್ಕೆ ಒಳಪಡಿಸಲು ಸಾಧ್ಯವಿಲ್ಲ ಎಂದು ಜನವರಿ 19ರಂದು ಷರಾ ಬರೆಯಲಾಗಿದೆ. ಕಡತವನ್ನು ಮತ್ತೆ ಮಂಡಿಸಲಾಗುವುದು. ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಸಭಾಪತಿ, ಮತ್ತೆ ಕೇಳುವುದು, ಸಭೆ ಮಾಡುವುದು ಅಗತ್ಯ ಇಲ್ಲ. ಈ ಮೊದಲೇ ಅನುದಾನ ನೀಡುವ ನಿರ್ಣಯ ತೆಗೆದುಕೊಳ್ಳಲಾಗಿದೆ. 26 ಕೋಟಿ ದೊಡ್ಡದಲ್ಲ. ಒಮ್ಮೆಲೇ ಅನುದಾನ ನೀಡಿ ಎಂದು ಸೂಚನೆ ನೀಡಿದರು.
ಪುಟ್ಟಣ್ಣ, ಸರ್ಕಾರ ನೀಡಿರುವ ಉತ್ತರವನ್ನು ಹಿಂಪಡೆಯಬೇಕು ಮತ್ತು ಅನುದಾನ ಘೋಷಿಸಬೇಕು ಎಂದು ಒತ್ತಾಯಿಸಿ ಭಾವೋದ್ವೇಗಕ್ಕೆ ಒಳಗಾಗಿದ್ದಲ್ಲದೆ ಧರಣಿ ನಡೆಸುವ ಎಚ್ಚರಿಕೆ ನೀಡಿದರು.

ವಿಷಯ ಗಂಭೀರವಾಗಿದೆ ಸಭಾನಾಯಕರು ಮತ್ತು ಸಚಿವರು ಸ್ಪಷ್ಟನೆ ನೀಡಬೇಕು. ಎರಡು ದಿನದಲ್ಲಿ ಉತ್ತರ ಹೇಳಿ ಎಂದು ಸಭಾಪತಿ ಸಲಹೆ ನೀಡಿದರು.ಈ ಹಂತದಲ್ಲಿ ಜೆಡಿಎಸ್ ನ‌ ಮರಿತಿಬ್ಬೆರಗೌಡ, ಆಡಳಿತ ಪಕ್ಷದ ಪುಟ್ಟಣ್ಣ, ಕಾಂಗ್ರೆಸ್ ನ ನಾಗರಾಜ್ ಯಾದವ್ ಸದನದ ಬಾವಿಗಿಳಿದು ಧರಣಿ ನಡೆಸಿದರು.ಒಂದು ಗಂಟೆ ಚರ್ಚೆ ನಡೆದಿದೆ. ಶಿಕ್ಷಕರ ಪರಿಸ್ಥಿತಿ ಸಂಕಷ್ಟಮಯವಾಗಿದೆ. ಸರ್ಕಾರ ಶೀಘ್ರ ನಿರ್ಣಯ ಕೈಗೊಳ್ಳಬೇಕು ಎಂದು ಸಭಾಪತಿ ಪದೇ ಪದೇ ಮನವೋಲಿಸುವ ಯತ್ನ ನಡೆಸಿದರು.

ಇದಕ್ಕೆ ಉತ್ತರಿಸಿದ ಸಚಿವ ನಾಗೇಶ್, ಈಗಾಗಲೇ ಉತ್ತರ ನೀಡಿದ್ದೇನೆ‌. ಮುಖ್ಯಮಂತ್ರಿಯವರ ಜೊತೆ ಇಲ್ಲಿ ಉತ್ತರ ನೀಡುತ್ತೇನೆ‌ ಎಂದು ಪುನರುಚ್ಚರಿಸಿದರು.ಇದು ಸದಸ್ಯರ ಸಹನೆ ಕೆಡಿಸಿತ್ತು. ಸಚಿವರು ಒಂದೇ ರೀತಿಯ ಉತ್ತರಕ್ಕೆ ಅಂಟಿಕೊಂಡಿರುವುದು ಸರಿಯಲ್ಲ.‌ ಸರ್ಕಾರ ನಿಲುವು‌ ಬದಲಿಸದಿದ್ದರೆ ವಿಪಕ್ಷದ ಎಲ್ಲಾ ಸದಸ್ಯರು ಧರಣಿ ನಡೆಸಬೇಕಾಗುತ್ತದೆ ಕೆಲ‌ ಸದಸ್ಯರು ಎಚ್ಚರಿಕೆ ನೀಡಿದರು. ಮುಖ್ಯಮಂತ್ರಿ ಶುಕ್ರವಾರದ ಒಳಗೆ ಉತ್ತರ ಕೊಡಿಸುವುದಾಗಿ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು. ಇದನ್ನು ಒಪ್ಪಿಕೊಂಡು ಸದಸ್ಯರು ಧರಣಿ ಕೈ ಬಿಟ್ಟರು.

#Protest, #KannadaMediumSchools,

Articles You Might Like

Share This Article