ಪಿಎಸ್‍ಐ ಪರೀಕ್ಷೆ ಹಗರಣ : ಬೆಂಗಳೂರಿನ 22 ಅಭ್ಯರ್ಥಿಗಳ OMR ತಿದ್ದಿದ್ದು ಎಲ್ಲಿ..?

Spread the love

ಬೆಂಗಳೂರು,ಮೇ7- ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಓಎಂಆರ್ ಶೀಟ್ ತಿದ್ದಲು ಬೆಂಗಳೂರಿನಲ್ಲಿ ನೆರವು ನೀಡಿದವರ ಪತ್ತೆಗೆ ಸಿಐಡಿ ಮುಂದಾಗಿದೆ. ಹಗರಣ ಬೆಳಕಿಗೆ ಬಂದ ನಂತರ ಹಲವಾರು ದೃಷ್ಟಿಕೋನಗಳಿಂದ ಸಿಐಡಿ ತನಿಖೆ ನಡೆಸುತ್ತಿದೆ. ಕಲಬುರಗಿಯಲ್ಲಿ ಪರೀಕ್ಷಾ ಕೇಂದ್ರಗಳ ಅಕ್ರಮ, ಓಎಂಆರ್ ಶೀಟ್ ತಿದ್ದಿರುವುದು ಮತ್ತು ಬ್ಲೂಟೂತ್ ಬಳಕೆ ಸೇರಿ ಹಲವು ಅಕ್ರಮಗಳಿಗಾಗಿ ಆರೋಪಿಗಳನ್ನು ಬಂಧಿಸಲಾಗಿದೆ.

ಬೆಂಗಳೂರಿನಲ್ಲಿ ನಡೆದ ಪರೀಕ್ಷೆಯ ಮೇಲೂ ಅನುಮಾನದ ಕರಿ ನೆರಳು ಬಿದ್ದಿರುವುದರಿಂದ 36 ಓಎಂಆರ್ ಶೀಟ್‍ಗಳನ್ನು ಪ್ರಾಥಮಿಕವಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಒಳಪಡಿಸಿದಾಗ ಅದರಲ್ಲಿ 22 ಶೀಟ್‍ಗಳಲ್ಲಿ ವ್ಯತ್ಯಾಸಗಳು ಕಂಡುಬಂದಿದ್ದವು. ಈ ಸಂಬಂಧ 16 ಮಂದಿ ಅಭ್ಯರ್ಥಿಗಳನ್ನು ಬಂಧಿಸಲಾಗಿದೆ.ಓಎಂಆರ್ ಶೀಟ್ ತಿದ್ದಲು ಎಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು

ಸಿಐಡಿ ತನಿಖೆ ಮುಂದುವರೆಸಿದೆ. ಬಂಧಿತ ಅಭ್ಯರ್ಥಿಗಳಿಂದ ಹೇಳಿಕೆಗಳನ್ನು ಪಡೆಯಲಾಗುತ್ತಿದೆ. ಪರೀಕ್ಷಾ ಕೇಂದ್ರದಲ್ಲೇ ಓಎಂಆರ್ ಶೀಟ್ ತಿದ್ದಲು ಅವಕಾಶ ಮಾಡಿಕೊಡಲಾಯಿತೇ? ಅಥವಾ ಮೌಲ್ಯಮಾಪನ ಕೇಂದ್ರದಲ್ಲಿ ಈ ಅವ್ಯವಹಾರ ನಡೆಯಿತೇ ಅಥವಾ ನಿಗೂಢ ಸ್ಥಳವೊಂದರಲ್ಲಿ ಅಕ್ರಮ ಆಗಿದೆಯೇ? ಎಂಬುದರ ಜಾಡನ್ನು ಸಿಐಡಿ ಬೆನ್ನತ್ತಿದೆ.

ಹೀಗಾಗಿ ಪರೀಕ್ಷಾ ಕೇಂದ್ರಗಳ ಉಸ್ತುವಾರಿ ವಹಿಸಿದ್ದ ಅಧಿಕಾರಿಗಳ ಜೊತೆ ಮೇಲ್ವಿಚಾರಕರು ಕೂಡ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮೌಲ್ಯಮಾಪನ ಕೇಂದ್ರದಲ್ಲೇ ಈ ಹಗರಣ ನಡೆದಿದ್ದರೆ ಅದು ಇನ್ನು ಬೃಹದಾಕಾರವಾಗಿರುವ ಸಾಧ್ಯತೆಗಳಿವೆ. ಹೀಗಾಗಿ ಸಿಐಡಿ ತಂಡೋಪ ತಂಡವಾಗಿ ಪ್ರತಿಯೊಂದು ಅಂಶಗಳ ಬೆನ್ನುಬಿದ್ದು ಪರಿಶೀಲನೆ ಆರಂಭಿಸಿದೆ.

ಬೆಂಗಳೂರಿನಲ್ಲಿ ಒಂದಿಷ್ಟು ಕೇಂದ್ರಗಳ ಮೇಲೆ ಶಂಕೆ ವ್ಯಕ್ತವಾಗಿ ಇಂಚಿಂಚು ಜಾಲಾಡಿದ ಬಳಿಕ ತುಮಕೂರು, ಧಾರವಾಡ, ಬೆಳಗಾವಿ, ಮಂಗಳೂರು ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳ ಮೇಲೂ ಅನುಮಾನ ಹುಟ್ಟಿಕೊಂಡಿದೆ.ಹೀಗಾಗಿ ಸಿಐಡಿ, ಪಿಎಸ್‍ಐ ನೇಮಕಾತಿಯ ಅಕ್ರಮದ ಬುಡವನ್ನು ಶೋಧಿಸಲು ಅಖಾಡಕ್ಕೆ ಇಳಿದಿದೆ.

ಈಗಾಗಲೇ ಯಶಸ್ವಿಯಾದ ಎಲ್ಲಾ ಅಭ್ಯರ್ಥಿಗಳ ಓಎಂಆರ್ ಶೀಟ್‍ಗಳ ಪರಿಶೀಲನೆ ನಡೆಯುತ್ತಿದ್ದು, ರಾಜ್ಯಾದ್ಯಂತ ಈತನಕ 46 ಅಭ್ಯರ್ಥಿಗಳ ಆಯ್ಕೆಯಲ್ಲಿ ಲೋಪಗಳು ಕಂಡುಬಂದಿವೆ. ಪರಿಶೀಲನೆ ಮುಂದುವರೆದಿದ್ದು ಪರೀಕ್ಷಾ ಕೇಂದ್ರಗಳಲ್ಲಿನ ವಿಚಾರಣೆ ಕೂಡ ಚುರುಕು ಪಡೆದಿದೆ.

ಹೀಗಾಗಿ ಅಕ್ರಮ ಮಾರ್ಗದ ಮೂಲಕ ಸರ್ಕಾರಿ ನೌಕರಿ ಗಿಟ್ಟಿಸಲು ಯತ್ನಿಸಿದವರು ತಲೆ ಮರೆಸಿಕೊಂಡಿದ್ದಾರೆ. ಒಂದೆಡೆ ಆರೋಪಿಗಳ ಬಂಧನಕ್ಕೂ ಕಾರ್ಯಾಚರಣೆ ನಡೆಯುತ್ತಿದ್ದರೆ, ಮತ್ತೊಂದೆಡೆ ಹಗರಣದ ಸ್ವರೂಪವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಕೆಲವು ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದವರಿಗೆ ನೆರವು ನೀಡಿರುವ ಆರೋಪಗಳಿವೆ. ನಾನಾ ರೀತಿಯ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ಈತನಕ ಸಿಐಡಿ 49 ಮಂದಿಯನ್ನು ಬಂಸಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.