ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣ ಕುರಿತು ನಿಷ್ಪಕ್ಷಪಾತ ತನಿಖೆ : ಗೃಹ ಸಚಿವರು

Social Share

ಬೆಂಗಳೂರು,ಜು.16- ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣವು ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತಿದೆ. ಕಾಂಗ್ರೆಸ್ ಕಾಲದಲ್ಲಿ ಎಷ್ಟು ವಲಸು, ದುರ್ನಾತ ನಡೆದಿತ್ತು ಎಂಬುದನ್ನು ನಾನು ದಾಖಲೆಗಳ ಸಮೇತ ಹೇಳಬಲ್ಲೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಗುಡುಗಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲೇ ಮೊದಲ ಬಾರಿಗೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಹಿರಿಯ ಎಡಿಜಿಪಿ ದರ್ಜೆಯ ಐಪಿಎಸ್ ಅಧಿಕಾರಿಯನ್ನು ಬಂಧಿಸಿರುವ ಸರ್ಕಾರ ನಮ್ಮದು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಷ್ಟು ಹಗರಣಗಳು ನಡೆದಿದ್ದವು ಎಂಬುದು ನಮಗೂ ಗೊತ್ತು. ನಮ್ಮ ಬಗ್ಗೆ ಟೀಕಿಸುವವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಅಕ್ರಮದ ತನಿಖೆಯನ್ನು ಅತ್ಯಂತ ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ. ಇದರಲ್ಲಿ ಯಾರೇ ಭಾಗಿಯಾದರೂ ಕೂಡ ಸುಮ್ಮನೆ ಬಿಡುವುದಿಲ್ಲ. ಕಾನೂನಿನ ಪ್ರಕಾರ ಏನು ಶಿಕ್ಷೆಯಾಗಬೇಕೋ ಅದು ಆಗುತ್ತದೆ ಎಂದು ಎಚ್ಚರಿಸಿದರು. ಪಿಎಸ್ ಹಗರಣದದಲ್ಲಿ ಮಧ್ಯವರ್ತಿ, ಹಣ ಕೊಟ್ಟವರ ವಿರುದ್ಧವೂ ಕ್ರಮ ಆಗುತ್ತಿದೆ. ಇನ್ನೊಮ್ಮೆ ಪರೀಕ್ಷೆಯಲ್ಲಿ ಇಂತಹ ಘಟನೆ ಆಗಬಾರದು ಯಾವುದೇ ಊಹೆಯ ಮಾತುಗಳು ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಐಡಿ ತನಿಖಾ ತಂಡಕ್ಕೆ ನಾವು ಯಾವುದೇ ಒತ್ತಡ ಹಾಕಿಲ್ಲ. ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಇದರಲ್ಲಿ ಯಾರೇ ಆದರೂ ರಾಜಕೀಯ ಲಾಭ ಪಡೆದುಕೊಳ್ಳಬಾರದು. ನಮ್ಮ ಕಣ್ಣ ಮುಂದೆ ಇರುವುದು ಪಿಎಸ್‍ಐ ಅಕ್ರಮದ ತನಿಖೆ ಬಗ್ಗೆ ಪ್ರಕರಣದ ತನಿಖೆ ಹಂತದಲ್ಲಿ ಇರುವಾಗ ನಾನು ಹೆಚ್ಚು ಮಾತನಾಡುವುದು ಸರಿಯಲ್ಲ. ಇದಂತೆ, ಅದಂತೆ ಎಂಬ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು.

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ರಾಜ್ಯಪಾಲರಿಗೆ ಬರೆದಿರುವ ಪತ್ರದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿಚಾರಣೆ ಹಂತದಲ್ಲಿ ಇರುವುದರಿಂದ ನಾನು ಏನು ಹೇಳುವುದಿಲ್ಲ. ಯಾರಬೇಕಾದರೂ ರಾಜ್ಯಪಾಲರಿಗೆ ಪತ್ರವನ್ನು ಬರೆಯಬಹುದು. ನಾವು ಪ್ರಾಮಾಣಿಕವಾಗಿಯೇ ತನಿಖೆ ನಡೆಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ಬಿಗಿಯಾದ ಕ್ರಮ: ಜೈಲುಗಳಲ್ಲಿ ಗಾಂಜಾ ಪೂರೈಕೆ, ಅಕ್ರಮ ನಡೆಯದಂತೆ ಬಿಗಿ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. ಒಂದೆರಡು ಜೈಲುಗಳಲ್ಲಿ ಇರುವುದು ನಮ್ಮ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಅದನ್ನು ಕೂಡ ಸರಿಪಡಿಸುತ್ತೇವೆ ಎಂದು ಹೇಳಿದರು.

ಹಿರಿಯ ಅಧಿಕಾರಿ ಮುರುಗನ್ ಸಮಿತಿ ವರದಿ ಆಧಾರದಲ್ಲಿ ಪರಪ್ಪನ ಅಗ್ರಹಾರದಲ್ಲಿ 15 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಜೊತೆಗೆ 30 ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ . ಪ್ರಸ್ತುತ ಬಹುತೇಕ ಹೊಸ ಸಿಬ್ಬಂದಿಗಳಿದ್ದಾರೆ ಎಂದು ತಿಳಿಸಿದರು.

ಜೈಲು ಸಿಬ್ಬಂದಿ ಜಾಗೃತರಾಗಿರುವುದರಿಂದಲ್ಲೇ ಅರೋಪಿಗಳನ್ನು ಹಿಡಿಯುತ್ತಿದ್ದಾರೆ. ಇನ್ನು ಮುಂದೆ ಜೈಲುಗಳಲ್ಲಿ ಫೋನ್, ನಿಷೇಧಿತ ವಸ್ತು ಬಳಕೆ ಮಾಡಿದರೆ ಕೈದಿಗಳುಸ ಸೇರಿದಂತೆ ಸಿಬ್ಬಂದಿ ವಿರುದ್ಧವೂ ಎಫ್‍ಐಆರ್ ದಾಖಲು ಮಾಡಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.

ಕೈದಿಗಳ ಶಿಕ್ಷೆ ಪ್ರಮಾಣ ಮುಗಿದ ಬಳಿಕ ಐದು ವರ್ಷ ಶಿಕ್ಷೆ ವಿಧಿಸುವ ಅವಕಾಶ ಇದೆ. ಈ ರೀತಿ ಬಿಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪರಪ್ಪನ ಅಗ್ರಹಾರದಲ್ಲಿ 4 ಜಿ ಜಾಮರ್ ಹಾಕಲಾಗುವುದು . ಅತ್ಯಂತ ಶೀಘ್ರವಾಗಿ ಈ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಕೆಲವು ಸಿಬ್ಬಂದಿ ಅನಾಚಾರದಲ್ಲಿ ಕೈಜೋಡಿಸಿದ್ದರು. ಈಗ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಚಂದ್ರು ಹತ್ಯೆ ಪ್ರಕರಣ ಚಾರ್ಜ್ ಶೀಟ್ ಸಲ್ಲಿಕೆ ವಿಚಾರಕ್ಕೆ ಕುರಿತಂತೆ ಮಾತನಾಡಿದ ಅವರು, ಚಂದ್ರು ಹತ್ಯೆಗೆ ಭಾಷೆಯೂ ಒಂದು ಕಾರಣವಾಗಿದೆ. ಚಾರ್ಜ್ ಶೀಟ್ ಬಗ್ಗೆ ನಾನು ಓದಿದ್ದೇನೆ. ಆದರೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿಲ್ಲ. ಹತ್ಯೆಗೆ ಭಾಷೆಯೂ ಒಂದು ಕಾರಣ ಎಂದು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖವಾಗಿದೆ ಎಂದರು.

ಸ್ವಾತಂತ್ರ್ಯ ದಿನದ ಅಂಗವಾಗಿ ಸನ್ನಡತೆ ಆಧಾರದ ಮೇಲೆ 84 ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಆಜಾದಿ ಕಾ ಅಮೃತ ಮಹೋತ್ಸವ ದಿನದ ಅಂಗವಾಗಿ ನಮ್ಮ 1 ಲಕ್ಷದ ಪೊಲೀಸ್ ಅಧಿಕಾರಿಗಳ ಮನೆ ಮೇಲೆ ತಿರಂಗ ಹಾರಿಸಲಾಗುತ್ತದೆ ಎಂದು ತಿಳಿಸಿದರು.

ಸ್ವಾತಂತ್ರ್ಯೋತ್ಸದ ಹಿನ್ನಲೆಯಲ್ಲಿ ಸನ್ನಡತೆ ಆಧಾರದಲ್ಲಿ 84 ಕೈದಿಗಳ ಬಿಡುಗಡೆ ಮಾಡಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಗೃಹಸಚಿವರು ಪುನರುಚ್ಚರಿಸಿದರು.

Articles You Might Like

Share This Article