PSI SCAM : ಹೆಡ್ ಮಾಸ್ಟರ್ ಕಾಶಿನಾಥ್ CID ಮುಂದೆ ಶರಣು

ಬೆಂಗಳೂರು,ಮೇ2-ಪಿಎಸ್‍ಐ ಪರೀಕ್ಷೆಯ ಅಕ್ರಮದ ಆರೋಪಿಗಳು ಸಿಐಡಿ ಮುಂದೆ ಒಬ್ಬೊಬ್ಬರೆ ಶರಣಾಗುತ್ತಿದ್ದಾರೆ. ಪರೀಕ್ಷೆ ಅಕ್ರಮಗಳ ಪ್ರಮುಖ ಆರೋಪಿ ಎನ್ನಲಾದ ಮಂಜುನಾಥ್ ಮೇಳಕುಂದಿ ನಿನ್ನೆ ಕಲಬುರಗಿಯಲ್ಲಿ ಸಿಐಡಿ ಪೊಲೀಸರ ಮುಂದೆ ಶರಣಾದ ಬೆನ್ನಲ್ಲೇ ಇಂದು ಬೆಳಗಿನ ಜಾವ ಜ್ಞಾನಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಇಂದು ಪೊಲೀಸರ ಮುಂದೆ ಶರಣಾಗಿದ್ದಾರೆ.

ದಿವ್ಯ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಕಾಶಿನಾಥ್ ಅವರು ಪರೀಕ್ಷಾ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ನಾಪತ್ತೆಯಾಗಿದ್ದರು. ಕಾಶಿನಾಥ್‍ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಇಂದು ಅಂತಿಮವಾಗಿ ತಾವಾಗಿಯೇ ಸಿಐಡಿ ಕಚೇರಿಗೆ ಬಂದು ಪೊಲೀಸರಿಗೆ ಶರಣಾಗಿದ್ದಾರೆ.

ಪಿಎಸ್‍ಐ ಪರೀಕ್ಷಾ ಅಕ್ರಮದ ರೂವಾರಿಗಳು ಎನ್ನಲಾದ ರುದ್ರೇಗೌಡ ಪಾಟೀಲ್, ನೀರಾವರಿ ಇಲಾಖೆಯ ಇಂಜಿನಿಯರ್ ಆಗಿರುವ ಮಂಜುನಾಥ್ ಮೇಳಕುಂದಿ ಜೊತೆ ಕಾಶಿನಾಥ್ ಸಂಪರ್ಕ ಹೊಂದಿದ್ದ ಕಾಶಿನಾಥ್ ಪರೀಕ್ಷಾ ಅಕ್ರಮ ನಡೆಸಲು ಸಹಕರಿಸುವಂತೆ ದಿವ್ಯ ಹಾಗರಗಿಯನ್ನು ಒಪ್ಪಿಸಿದ್ದ ಎನ್ನಲಾಗಿದೆ.

ಅಕ್ರಮ ಬಯಲಿಗೆ ಬರುತ್ತಿದ್ದಂತೆ ಏ.10ರಿಂದ ನಾಪತ್ತೆಯಾಗಿದ್ದ ಈತನಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದರು. ಪಿಎಸ್‍ಐ ಪರೀಕ್ಷಾ ಹಗರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲೂ ಗಮನಸೆಳೆದಿತ್ತು.

ಸಿಐಡಿ ಪೊಲೀಸರು ಪ್ರಮುಖವಾಗಿ ಆರು ಆರೋಪಿಗಳನ್ನು ಗುರುತಿಸಿ ಇವರ ಬಂಧನಕ್ಕೆ ನ್ಯಾಯಾಲಯದಿಂದ ವಾರೆಂಟ್ ಪಡೆದಿದ್ದರು.
ವಾರೆಂಟ್ ನಂತರ ಆರೋಪಿಗಳಾದ ದಿವ್ಯ ಹಾಗೂ ಅರ್ಚನರನ್ನು ಮೊನ್ನೆ ಮಹಾರಾಷ್ಟ್ರದ ಪುಣೆಯಲ್ಲಿ ಬಂಸಲಾಗಿತ್ತು. ನಿನ್ನೆ ಎಂಜಿನಿಯರಿಂಗ್ ಮಂಜುನಾಥ್ ಮೇಳಕುಂದಿ ಸಿಐಡಿ ಪೊಲೀಸರಿಗೆ ಶರಣಾಗಿದ್ದರು.

ಇಂದು ಹೆಡ್‍ಮಾಸ್ಟರ್ ಕಾಶಿನಾಥ್ ತಾವಾಗಿಯೇ ಸಿಐಡಿ ಪೊಲೀಸರಿಗೆ ಶರಣಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 26 ಆರೋಪಿಗಳನ್ನು ಬಂಧಿಸಲಾಗಿದೆ.