BIG NEWS: ಪಿಎಸ್‍ಐ ಪರೀಕ್ಷಾ ಅಕ್ರಮ: ಧಾರವಾಡ ಕೋಚಿಂಗ್ ಸೆಂಟರ್ ಶಿಕ್ಷಕ ಸಿಐಡಿ ವಶಕ್ಕೆ

Spread the love

ಹುಬ್ಬಳ್ಳಿ,ಮೇ13- ಪಿಎಸ್‍ಐ ನೇಮಕಾತಿ ಹಗರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಸಿಐಡಿ ಪೊಲೀಸರು, ಧಾರವಾಡದ ಕೋಚಿಂಗ್ ಸೆಂಟರ್‍ನ ಶಿಕ್ಷಕರೊಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸಪ್ತಾಪುರಭಾವಿ ಪ್ರದೇಶದಲ್ಲಿರುವ ಕೋಚಿಂಗ್ ಸೆಂಟರ್‍ನ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಹಗರಣದಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳಲ್ಲಿ ಒಬ್ಬರು ನೀಡಿದ ಮಾಹಿತಿಯ ಆಧಾರದ ಮೇಲೆ ಈ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೋಚಿಂಗ್ ತರಗತಿಗಳು ಮತ್ತು ಪರೀಕ್ಷೆಗೆ ತರಬೇತಿ ಪಡೆದ ಹಲವಾರು ಜನರನ್ನು ವಿಚಾರಣೆಗಾಗಿ ಕರೆಸಲಾಗಿದೆ. ಸಿಐಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ಅಭ್ಯರ್ಥಿಯೊಬ್ಬರು, ಈಗ ವಶಕ್ಕೆ ಪಡೆದಿರುವ ಶಿಕ್ಷಕರಿಂದ ಪರೀಕ್ಷೆಯಲ್ಲಿ ಸಹಾಯ ಪಡೆದಿರುವುದಾಗಿ ತಿಳಿದುಬಂದಿದೆ.

ಧಾರವಾಡದಲ್ಲಿ ಹಲವಾರು ಪರೀಕ್ಷಾ ತರಬೇತಿ ಕೇಂದ್ರಗಳಿವೆ ಮತ್ತು ಉತ್ತರ ಕರ್ನಾಟಕ ಭಾಗದ ಹಲವು ವಿದ್ಯಾರ್ಥಿಗಳು ತರಬೇತಿಗಾಗಿ ಇಲ್ಲಿಗೆ ಬರುತ್ತಾರೆ. ಕೋಚಿಂಗ್ ಸೆಂಟರ್ ಮಾಲೀಕರೊಂದಿಗೆ ನಂಟು ಹೊಂದಿರುವ ಕೆಲವು ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಕಾನೂನುಬಾಹಿರವಾಗಿ ಏನನ್ನಾದರೂ ಮಾಡಿರಬಹುದು ಎಂಬ ಶಂಕೆ ಇದೆ. ಆದರೆ ಅದಕ್ಕೆ ಪೂರಕವಾದ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಕೋಚಿಂಗ್ ಸೆಂಟರ್ ಟಾರ್ಗೆಟ್: ಪಿಎಸ್‍ಐ ಅಕ್ರಮ ನೇಮಕಾತಿ ಹಗರಣ ಬಗೆದೆಷ್ಡು ಅವವ್ಯಹಾರ ಬಯಲಿಗೆ ಬರುತಿದ್ದು ಧಾರವಾಡಲ್ಲಿನ ಕೋಚಿಂಗ್ ಸೆಂಟರ್‍ಗಳನ್ನು ಹಗರಣದ ರೂವಾರಿಗಳು ಟಾರ್ಗೆಟ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪಿಎಸ್‍ಐ ಅಕ್ರಮ ನೇಮಕಾತಿ ಸಂಬಂಧಪಟ್ಟಂತೆ ಸಿಐಡಿ ಒಂದು ತಂಡ ಕಳದೆ ಒಂದು ವಾರದಿಂದ ಹುಬ್ಬಳ್ಳಿ ಧಾರವಾಡದಲ್ಲಿ ಗೌಪ್ಯ ಸ್ಥಳದಲ್ಲಿ ಬಿಡುಬಿಟ್ಟಿದೆ.

ಧಾರವಾಡ, ಗದಗ, ರಾಯಚೂರು, ಕಲಬುರಗಿ, ಕೊಪ್ಪಳ, ಬಳ್ಳಾರಿ, ವಿಜಯಪುರ ,ಬಾಗಲಕೋಟೆ ಸೇರಿದಂತೆ ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ ಕಡೆಗಳಿಂದ ಹೆಚ್ಚು ಹೆಚ್ಚು ಅಭ್ಯರ್ಥಿಗಳು ವಿವಿಧ ಕೋಚಿಂಗ್ ಸೆಂಟರ್‍ಗಳಿಗೆ ಬರುತ್ತಾರೆ. ಅದರಲ್ಲೂ ಧಾರವಾಡದಲ್ಲೇ ಸುಮಾರು 200ಕ್ಕೂ ಹೆಚ್ಚು ಕೋಚಿಂಗ್ ಸೆಂಟರ್‍ಗಳಿಗೆ. ಇಲ್ಲಿಗೆ ಮಧ್ಯಮ ವರ್ಗದ ಕುಟುಂಬದಿಂದ ಬರುತ್ತಾರೆ. ಈ ವರ್ಗದವರನ್ನೇ ಟಾರ್ಗೆಟ್ ಮಾಡಿಕೊಂಡು ಅವರಿಗೆ ಸುಲಭವಾಗಿ ನೇಮಕಾತಿಯ ಆಮಿಷವೊಡ್ಡುತ್ತಾರೆ.

ಈಗ ಧಾರವಾಡದಲ್ಲಿ ತನಿಖೆ ನಡೆಸಿದಷ್ಟು ಅಕ್ರಮ ಕುಳಗಳ ಮಾಹಿತಿ ಹೊರ ಬೀಳುತ್ತಲೇ ಇವೆ. ಈಗಾಗಲೇ ಎಂಜಿನಿಯರಿಂಗ್ ಹಿನ್ನೆಲೆಯುಳ್ಳ ಬಸವರಾಜ ಎಂಬ ಅಭ್ಯರ್ಥಿ ಧಾರವಾಡದ ಖಾಸಗಿ ಕೋಚಿಂಗ್ ಸೆಂಟರ್‍ಗೆ ಕೆಎಎಸ್ ಕುರಿತು ಕೋಚಿಂಗ್ ಪಡೆಯಲು ಬಂದಿದ್ದ. ಆ ಖಾಸಗಿ ಕೋಚಿಂಗ್ ಸೆಂಟರ್‍ಗೆ ಭೇಟಿ ನೀಡಿದ ಸಿಐಡಿ ತಂಡ ಬಸವರಾಜನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬೆನ್ಮಲ್ಲೇ ಈಗ ಶಿಕ್ಷಕರೊಬ್ಬರನ್ನೂ ಸಹ ವಿಚಾರಣೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಇಷ್ಟೇ ಅಲ್ಲಾ ಧಾರವಾಡದ ವಿವಿಧ ಪರೀಕ್ಷಾ ಕೇಂದ್ರಗಳಲ್ಲೂ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆಯಿಂದ ಧಾರವಾಡದಲ್ಲಿ ಸಿಐಡಿ ಅಕಾರಿಗಳು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ.