ಬಿಜೆಪಿ ನಾಯಕರ ರಕ್ಷಣೆಗಾಗಿ ಪಿಎಸ್‍ಐ ಪರೀಕ್ಷೆ ರದ್ದು:ಡಿಕೆಶಿ

Spread the love

ಬೆಂಗಳೂರು,ಏ.30- ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಬಿಜೆಪಿಯ ಸಾಲು ಸಾಲು ನಾಯಕರು ಭಾಗಿಯಾಗಿದ್ದು, ಅವರನ್ನು ರಕ್ಷಿಸುವ ಸಲುವಾಗಿ ತನಿಖಾ ವರದಿಗೂ ಮೊದಲೇ ಪರೀಕ್ಷೆಯನ್ನು ರದ್ದು ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ತಮ್ಮ ನಿವಾಸದಲ್ಲಿಂದು ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರನ್ನು ಮಹಾರಾಷ್ಟ್ರದಲ್ಲಿ ಬಂಧಿಸಿ ಕರೆತರಲಾಗುತ್ತಿತ್ತು. ಆರೋಪಿ ಹಾದಿ ಮಧ್ಯೆ ಇರುವಾಗಲೇ ಪರೀಕ್ಷೆ ರದ್ದುಗೊಳಿಸುವ ಆತುರದ ನಿರ್ಧಾರವನ್ನು ಗೃಹ ಸಚಿವರು ಘೋಷಿಸಿದ್ದಾರೆ ಎಂದು ಟೀಕಿಸಿದರು.

ಈ ಮೊದಲು ಆರೋಪಿಯನ್ನು 18 ದಿನಗಳ ಕಾಲ ಬಿಜೆಪಿಯವರೇ ಮುಚ್ಚಿಟ್ಟಿದ್ದರು ಎಂಬ ಆರೋಪಗಳಿದ್ದವು. ಗೃಹ ಸಚಿವರೂ ಸೇರಿದಂತೆ ಹಲವಾರು ಸಚಿವರ ಜತೆ ಆರೋಪಿ ಫೋಟೋ ತೆಗೆಸಿಕೊಂಡಿದ್ದಾರೆ. ಹಗರಣದ ಕುರಿತು ತನಿಖೆ ನಡೆಯುತ್ತಿದೆ. ಆರೋಪಿಗಳು ಇನ್ನೂ ಪೊಲೀಸ್ ವಶದಲ್ಲೇ ಇದ್ದಾರೆ. ಸಿಐಡಿಯ ಯಾವುದೇ ವರದಿ ಸಲ್ಲಿಕೆಯಾಗಿಲ್ಲ. ಆದರೂ ಸಚಿವರು ಏಕಾಏಕಿ ಪರೀಕ್ಷೆ ರದ್ದು ಮಾಡಿರುವುದು ಅನುಮಾನ ಮೂಡಿಸಿದೆ ಎಂದರು.

ಇದಕ್ಕೂ ಮುನ್ನ ಪಿಎಸ್‍ಐ ಪರೀಕ್ಷೆಯಲ್ಲಿ ಪಾಸಾಗಿ ಹುದ್ದೆಯ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡರು. ತಪ್ಪು ಮಾಡಿದವರನ್ನು ಶಿಕ್ಷಿಸಿ ಕ್ರಮ ಕೈಗೊಳ್ಳಲಿ. ಆದರೆ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಯಶಸ್ವಿಯಾದ ನಮಗ್ಯಾಕೆ ಶಿಕ್ಷೆ ಎಂದು ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ.

ತಾವು ನಗರದ ಫ್ರೀಡಂ ಪಾರ್ಕ್‍ನಲ್ಲಿ ಹಗಲು-ರಾತ್ರಿ ಧರಣಿ ನಡೆಸಲು ಮುಂದಾಗಿದ್ದೇವೆ. ಆದರೆ, ಸಂಜೆ 5 ಗಂಟೆ ಮೇಲೆ ಧರಣಿ ನಡೆಸಿದರೆ ಎಫ್‍ಐಆರ್ ದಾಖಲಿಸುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಎಫ್‍ಐಆರ್ ದಾಖಲಾದರೆ ಸರ್ಕಾರದ ಯಾವ ಕೆಲಸಕ್ಕೂ ಅರ್ಜಿ ಹಾಕಲು ಸಾಧ್ಯವಿಲ್ಲ. ನಾವು ನಾಳೆಯಿಂದಲೇ ಹೋರಾಟ ಮಾಡುತ್ತಿದ್ದೇವೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.

ಈಗಾಗಲೇ ಊರಿನಲ್ಲಿ ನಮ್ಮನ್ನು ಸನ್ಮಾನಿಸಲಾಗಿದೆ. ಪರೀಕ್ಷೆ ರದ್ದಾಗಿರುವು ದರಿಂದ ಊರಿನಲ್ಲಿ ಮುಖ ತೋರಿಸ ಲಾಗುತ್ತಿಲ್ಲ. ಒಂದಿಬ್ಬರು ಪೋಷಕರು ವಿಷಯ ತಿಳಿದು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಾರಿಗಾದರೂ ಹೆಚ್ಚುಕಮ್ಮಿಯಾದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಅಭ್ಯರ್ಥಿಗಳು ಡಿ.ಕೆ.ಶಿವಕುಮಾರ್ ಅವರ ಬಳಿ ಹೇಳಿ ಕೊಂಡರು.

ನಿಮ್ಮ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ನೀಡಲಿದೆ. ತಪ್ಪಿತಸ್ಥರನ್ನು ಶಿಕ್ಷಸಬೇಕು ಎಂಬುದು ನಮ್ಮ ನಿಲುವು. ಅದೇ ರೀತಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯವಾಗಬಾರದು ಎಂಬುದು ನಮ್ಮ ಅನಿಸಿಕೆ ಎಂದು ಹೇಳಿದರು.

Facebook Comments