ಪಿಎಸ್‍ಐ ನೇಮಕಾತಿ ಅಕ್ರಮ : ನೊಂದ ಅಭ್ಯರ್ಥಿಗಳಿಂದ ಪ್ರಧಾನಿಗೆ ರಕ್ತದಲ್ಲಿ ಪತ್ರ

Spread the love

ಬೆಂಗಳೂರು,ಮೇ16- ಪಿಎಸ್‍ಐ ನೇಮಕಾತಿ ಪರೀಕ್ಷೆಯನ್ನು ರದ್ದುಪಡಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ನೊಂದ ಅಭ್ಯರ್ಥಿಗಳು ನ್ಯಾಯ ಒದಗಿಸುವಂತೆ ಪ್ರಧಾನಿ ನರೇಂದ್ರಮೋದಿಗೆ ರಕ್ತದಲ್ಲಿ ಪತ್ರ ಬರೆದಿದ್ದಾನೆ. ಸುಮಾರು ಎರಡು ಪುಟಗಳ ಪತ್ರ ಬರೆದಿರುವ ಅಭ್ಯರ್ಥಿಗಳು ತಮಗೆ ರಾಜ್ಯ ಸರ್ಕಾರದಿಂದ ಸೂಕ್ತ ನ್ಯಾಯ ಸಿಗದಿದ್ದರೆ ನಕ್ಸಲ್ ಹೋರಾಟದಲ್ಲಿ ಕೈ ಜೋಡಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ಪ್ರಧಾನಿಗೆ ಬರೆದಿರುವ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿದೆ. ಪ್ರಧಾನಿ ಮೋದಿಯವರ ಬಗ್ಗೆ ನಮಗೆ ಅಪಾರ ಗೌರವವಿದೆ. ಕೆಲಸ ನಾಡಿ ನ್ಯಾಯ ಕೊಡಿಸುತ್ತಾರೆ ಎಂದು ನಂಬಿದ್ದೇವೆ. ಒಂದು ವೇಳೆ ನ್ಯಾಯ ಕೊಡಿಸದೆ ಹೋದರೆ ನಾವೂ ಮುಂದೆ ಟೆರರಿಸ್ಟ್ ಗಳ ಜೊತೆ ಕೈಜೋಡಿಸುತ್ತೇವೆ. ಇನ್ನು ಮುಂದೆ ಸರ್ಕಾರಿ ಹುದ್ದೆಗಳಿಗೆ ಪರೀಕ್ಷೆ ಬರೆಯುವುದಿಲ್ಲ ಎಂದಿದ್ದಾರೆ.

ಕರ್ನಾಟಕ ಸರ್ಕಾರದ ಹುದ್ದೆಗಳು ಹಣ ಇದ್ದವರಿಗೆ ಎಂಬಂತಾಗಿದೆ. ಸರ್ಕಾರದ ಈ ವ್ಯವಸ್ಥೆಯಿಂದ ನಾವೂ ಮಾನಸಿಕವಾಗಿ ಸತ್ತು ಹೋಗಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ. ಪಿಎಸ್‍ಐ ಪರೀಕ್ಷೆಯ ಆಯ್ಕೆಯಲ್ಲಿ ಮೋಸ ಹೋದವರಿಗೆ ನ್ಯಾಯ ಸಿಗಬೇಕು, ಅನ್ಯಾಯ ಮಾಡಿದವರನ್ನು ಜೈಲಿಗೆ ಹಾಕಬೇಕು. ಆದರೆ ನಿಯತ್ತಿನಿಂದ, ಪ್ರಾಮಾಣಿಕವಾಗಿ ಬರೆದು ಪಾಸಾದವರಿಗೆ ಮೋಸವಾಗಬಾರದು. 2021ರಲ್ಲಿ ನಡೆದ ಎಫ್‍ಡಿಎ ಪರೀಕ್ಷೆಯಲ್ಲಿ ಕೂಡ ಅಕ್ರಮವಾಗಿದೆ. ಅದನ್ನು ಕೂಡ ತನಿಖೆ ಮಾಡಿ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಸುಮಾರು 2 ಪುಟಗಳ ಪತ್ರವನ್ನು ರಕ್ತದಲ್ಲಿ ಬರೆಯಲಾಗಿದೆ. ಆದರೆ ಪತ್ರದಲ್ಲಿ ತಮ್ಮ ಹೆಸರನ್ನು ಅಭ್ಯರ್ಥಿಗಳು ನಮೂದಿಸಿಲ್ಲ. ನಾವು ಎಂಟು ಮಂದಿ ಇದ್ದೇವೆ, ನಾವೆಲ್ಲರು ಈ ನಿರ್ಧಾರ ಮಾಡಿದ್ದಾಗಿ ಪ್ರಧಾನಿಗೆ ಪತ್ರ ಬರೆದಿರುವ ನೋಂದ ಪಿಎಸ್‍ಐ ಅಭ್ಯರ್ಥಿಗಳು ಎಚ್ಚರಿಸಿದ್ದಾರೆ.

ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳು, ಪ್ರಮುಖ ಆರೋಪಿ ದಿವ್ಯಾ ಹಾಗರಗಿ, ವೀರೇಶ್, ವೈಜನಾಥ್, ಮಂಜುನಾಥ್ ಮೇಳಕುಂದಿ, ಅರ್ಚನಾ, ಸುನೀತಾ, ಕಾಳಿದಾಸ್, ಸುನೀತಾ ಪಾಟೀಲ್, ಸುರೇಶ್ ಕಾಟೇಗಾವ್, ಸದ್ದಾಂ ಸೇರಿದಂತೆ ಇದುವರೆಗೂ 55ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.

Facebook Comments