ಪಿಎಸ್ಐ ನೇಮಕಾತಿ ಹಗರಣ: ವಿಧಾನಸಭೆಯಲ್ಲಿ ಕೋಲಾಹಲ

Social Share

ಬೆಂಗಳೂರು,ಸೆ.15-ರಾಜ್ಯಾದ್ಯಂತ ಭಾರೀ ವಿವಾದ ಸೃಷ್ಟಿಸಿರುವ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ಕುರಿತು ನಿಯಮ 60ರಡಿ ಚರ್ಚೆಗೆ ಅವಕಾಶ ಕೊಡಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಪಟ್ಟು ಹಿಡಿದ ಪರಿಣಾಮ ವಿಧಾನಸಭೆಯಲ್ಲಿಂದು ಕೋಲಾಹಲ, ಗದ್ದಲ ಉಂಟಾಯಿತು.

ಪ್ರಶ್ನೋತ್ತರ ಕಲಾಪ ಮುಗಿದ ಬಳಿಕ ಸಿದ್ದರಾಮಯ್ಯನವರು ವಿಷಯ ಪ್ರಸ್ತಾಪಿಸಿ, ಇದೊಂದು ಅತ್ಯಂತ ಗಂಭೀರವಾದ ವಿಷಯ. ಹಿರಿಯ ಪೊಲೀಸ್ ಅಧಿಕಾರಿಗಳೇ ಹಗರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿದ್ದಾರೆ. ಅನೇಕರ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದೆ. ಹೀಗಾಗಿ ನಿಯಮ 60ರಡಿ ಚರ್ಚೆಗೆ ಅವಕಾಶ ಕೊಡಬೇಕೆಂದು ನಿಲುವಳಿ ಮಂಡಿಸಿದರು.

ಪಿಎಸ್ಐ ಹಗರಣ ಸಾಮಾನ್ಯ ವಿಷಯಲ್ಲ. 545 ಹುದ್ದೆಗಳಿಗೆ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು, ಅನೇಕರು ನೇಮಕಾತಿ ಹೊಂದಿದ್ದರು. ಆದರೆ ಏಕಾಏಕಿ ಹಗರಣ ನಡೆದಿದೆ ಎಂಬ ಒಂದೇ ಕಾರಣಕ್ಕೆ ಇಡೀ ನೇಮಕಾತಿ ಪ್ರಕ್ರಿಯೆ ರದ್ದುಪಡಿಸಲಾಗಿದೆ ಹೀಗಾಗಿ ಚರ್ಚೆಗೆ ಅವಕಾಶ ಕೊಡಿ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು.

ಇದನ್ನೂ ಓದಿ : “ರೈತರಿಗೆ 7 ಗಂಟೆ ವಿದ್ಯುತ್ ಪೂರೈಕೆ ಮಾಡಲು ಸರ್ಕಾರ ಬದ್ಧ”

ಈ ಹಿಂದೆ ಬೇರೆ ಬೇರೆ ಪ್ರಕರಣಗಳಿಗೆ ಸದನದಲ್ಲಿ ಚರ್ಚೆಗೆ ಅವಕಾಶ ಕೊಟ್ಟಿರುವ ನಿದರ್ಶನಗಳಿವೆ. ಐಎಎಸ್ ಅಧಿಕಾರಿ ಡಿ.ಕೆ.ರವಿ, ಡಿವೈಎಸ್ಪಿ ಗಣಪತಿ ಭಟ್ ಸೇರಿದಂತೆ ಅನೇಕ ಪ್ರಕರಣಗಳನ್ನು ಸದನದಲ್ಲಿ ಚರ್ಚೆ ಮಾಡಲಾಗಿದೆ. ತನಿಖೆ ನಡೆಯುತ್ತಿದೆ ಎಂಬ ಒಂದೇ ಕಾರಣಕ್ಕೆ ಚರ್ಚೆಗೆ ಅವಕಾಶ ಕೊಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕಾನೂನು ಸಚಿವ ಮಧುಸ್ವಾಮಿ, ಕೆಲವು ನಿಯಮಗಳನ್ನು ಓದಿ, ತನಿಖೆ ನಡೆಯುತ್ತಿರುವ ಈ ಹಂತದಲ್ಲಿ ಸದನದಲ್ಲಿ ಚರ್ಚೆಗೆ ಕೊಡುವುದು ಸಮಂಜಸವಲ್ಲ. ನಿಯಮ 60ರಡಿ ಚರ್ಚೆ ಮಾಡಬೇಕಾದರೆ ಕೆಲವು ನೀತಿ ನಿಯಮಗಳಿರುತ್ತವೆ. ಪಟ್ಟು ಹಿಡಿಯುವುದು ಸದನಕ್ಕೆ ಶೋಭೆ ತರುವುದಿಲ್ಲ ಎಂದರು.

ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಚರ್ಚೆ ನಡೆದರೆ ಕೆಲವರು ಸಿಟ್ಟುಗೇಳಬಹುದೆಂಬ ಆತಂಕದಿಂದ ಸರ್ಕಾರ ಪಲಾಯನ ಮಾಡುತ್ತಿದೆ ಎಂದು ಪ್ರತಿಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ವಿಧಾನಸಭೆ ಕಲಾಪಕ್ಕೆ ಸಚಿವರು ಚಕ್ಕರ್, ಸ್ಪೀಕರ್ ತರಾಟೆ

ಇದಕ್ಕೆ ಬಿಜೆಪಿ ಸದಸ್ಯರು ಕೂಡ ಆಕ್ಷೇಪಿಸಿ ಹಗರಣವನ್ನು ಹೊರತಂದಿದ್ದೇ ನಮ್ಮ ಸರ್ಕಾರ. ನೀವು ಎಲ್ಲವನ್ನು ಮುಚ್ಚಿ ಹಾಕಿದ್ದೀರಿ ಇದರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು. ಈ ಹಂತದಲ್ಲಿ ಸದನದಲ್ಲಿ ಕೋಲಾಹಲ, ಗದ್ದಲ, ಆರೋಪ-ಪ್ರತ್ಯಾರೋಪಗಳು ನಡೆದು, ಸದನದಲ್ಲಿ ಯಾರು ಏನು ಹೇಳುತ್ತಿದ್ದಾರೆ ಎಂಬುದೇ ತಿಳಿಯಲಿಲ್ಲ. ಮಾತು ಮುಂದುವರೆಸಿದ ಸಿದ್ದರಾಮಯ್ಯ ಕೆಲವು ನಿಯಮಗಳನ್ನು ಮತ್ತೆ ಉಲ್ಲಂಘಿಸಿ ಚರ್ಚೆಗೆ ಅವಕಾಶ ಕೊಡಲೇಬೇಕು ಎಂದು ಪಟ್ಟು ಹಿಡಿದರು.

ಅನೇಕ ಮಾಧ್ಯಮಗಳಲ್ಲಿ ಸರಣಿ ವರದಿ ಮಾಡಿವೆ. ಕುಂಟು ನೆಪ ಇಟ್ಟುಕೊಂಡು ಪಲಾಯನ ಮಾಡಬೇಡಿ. ಮೊದಲು ಚರ್ಚೆಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿಕೊಂಡರು. ಆಗ ಮಾಧುಸ್ವಾಮಿ, ನಿಯಮ 60ರಡಿ ಚರ್ಚೆ ಮಾಡಬೇಕಾದರೆ ಇತ್ತೀಚಿನ ಘಟನೆಯಾಗಿರಬೇಕು. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕರು ಬಂಧನಕ್ಕೊಳಪಟ್ಟಿದ್ದಾರೆ. ಜಾಮೀನು ಅರ್ಜಿಗಳು ತಿರಸ್ಕøತಗೊಂಡಿವೆ. ಸಿಐಡಿ ತನಿಖೆ ನಡೆಸುತ್ತಿರುವಾಗ ಚರ್ಚೆಗೆ ಅವಕಾಶ ಕೊಡುವುದು ಸೂಕ್ತವೇ ಎಂದು ಸಭಾಧ್ಯಕ್ಷರನ್ನು ಪ್ರಶ್ನಿಸಿದರು.

ಇತಿಹಾಸದಲ್ಲೇ ಮೊದಲ ಬಾರಿಗೆ ನಮ್ಮ ಸರ್ಕಾರ ಎಡಿಜಿಪಿ ದರ್ಜೆಯ ಅಧಿಕಾರಿಗಳನ್ನು ಬಂಧಿಸಿ ಜೈಲಿಗೆ ಹಾಕಿದೆ. ಸಿಐಡಿ ತನಿಖಾ ತಂಡಕ್ಕೆ ಮುಕ್ತವಾಗಿ ತನಿಖೆ ನಡೆಸಲು ಬಿಟ್ಟಿದ್ದೇವೆ. ಈ ಹಗರಣ ಹೊರಬಂದಿದ್ದೇ ನಮ್ಮ ಸರ್ಕಾರದಿಂದಾಗಿ ಇದರಲ್ಲಿ ಇವರೇನು ಶಹಭಾಷ್ಗಿರಿ ಪಡೆಯುವುದು ಎಂದು ತಿರುಗೇಟು ಕೊಟ್ಟರು.

ಈ ವೇಳೆ ಕಾಂಗ್ರೆಸ್ನ ದೇಶಪಾಂಡೆ ಅವರು ಎದ್ದುನಿಂತು ಮಾತನಾಡಲು ಮುಂದಾದರು. ಇದಕ್ಕೆ ಸಿಡಿಮಿಡಿಗೊಂಡ ಮಾಧುಸ್ವಾಮಿ, ಹಿರಿಯ ಸದಸ್ಯರಾಗಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ನಾವೇನು ಇಲ್ಲಿ ಕತ್ತೆ ಕಾಯಲು ಬಂದಿದ್ದೇವಾ? ಸರ್ಕಾರ ನಡೆಸುವರು ನಾವು, ಕೂಗಾಟ, ಹಾರಾಟ ನಡೆಸಿದರೆ ಸಮಸ್ಯೆ ಬಗೆಹರಿಯುತ್ತದೆಯೇ ಎಂದು ಆಕ್ರೋಶ ಹೊರಹಾಕಿದರು.

ಈ ವೇಳೆ ಕಾಂಗ್ರೆಸ್ನ ಎಂ.ಬಿ.ಪಾಟೀಲ್ ಮತ್ತು ಜಮೀರ್ ಮಾತನಾಡಲು ಮುಂದಾಗುತ್ತಿದ್ದಂತೆ ಮತ್ತಷ್ಟು ಆಕ್ರೋಶಗೊಂಡ ಮಾಧುಸ್ವಾಮಿ, ನಿಮಗೆ ಸದನದ ನಿಯಮಗಳು ಅರ್ಥವಾಗುತ್ತವೆಯೇ? ಸುಮ್ಮನೆ ಕೂಗಾಡಿದರೆ ಪ್ರಯೋಜನವಿಲ್ಲ. ಜಮೀರ್ ನಿಮಗೆ ವಿಧಾನಸಭೆಯ ಕಾರ್ಯಕಲಾಪಗಳ ನಿಯಮ ತಿಳಿಯುತ್ತದೆಯೇ ಎಂದು ತರಾಟೆಗೆ ತೆಗೆದುಕೊಂಡರು.

ಎಂ.ಬಿ.ಪಾಟೀಲ್ ವಿರುದ್ಧ ಗುಡುಗಿದ ಮಾಧುಸ್ವಾಮಿ, ನಾನು ನಿಮ್ಮ ಅೀಧಿನದಲ್ಲಿಲ್ಲ. ಸಭಾಧ್ಯಕ್ಷರು ನನಗೆ ಮಾತನಾಡಲು ಅವಕಾಶ ಕೊಟ್ಟಿದ್ದಾರೆ. ನೀವು ಮಾತನಾಡುವಾಗ ಬಾಯಿ ಮುಚ್ಚಿಕೊಂಡಿದ್ದೆ. ಈಗ ನೀವೇಕೆ ಮಾತನಾಡುತ್ತಿದ್ದೀರಿ. ಹಿರಿಯ ಸದಸ್ಯರಾಗಿ ನಿಮಗೆ ಇದು ಶೋಭೆ ತರುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಮತ್ತೆ ಸದನದಲ್ಲಿ ಗದ್ದಲ ಉಂಟಾಯಿತು. ಮಾತು ಮುಂದುವರೆಸಿದ ಮಾಧುಸ್ವಾಮಿ, ಇದು ವ್ಯಾಪಕವಾಗಿ ಚರ್ಚೆಯಾಗಬೇಕು, ಯಾರ್ಯಾರು ಭಾಗಿಯಾಗಿದ್ದಾರೋ ಅವರೆಲ್ಲರಿಗೂ ಶಿಕ್ಷೆಯಾಗಬೇಕು. 2006ರಿಂದ ಏನೇನು ಆಗಿದೆಯೋ ಎಲ್ಲವೂ ಬಯಲಾಗಿದೆ ಎಂದರು.

ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಇದಕ್ಕೆ ನಾವು ಹೆದರುವುದಿಲ್ಲ. 40 ವರ್ಷದಿಂದ ಈ ಸದನದಲ್ಲಿ ನಾನೂ ಇದ್ದೇನೆ. ರಾಜಕೀಯ ಭಾಷಣ ಮಾಡಲು ನನಗೂ ಬರುತ್ತದೆ 2006ರಿಂದ ಹಿಡಿದು ಇಲ್ಲಿಯವರೆಗೆ ಯಾವ್ಯಾವ ಇಲಾಖೆಯಲ್ಲಿ ಏನೇನು ಆಗಿದೆಯೋ ಎಲ್ಲವೂ ತನಿಖೆ ನಡೆಸಿ ಅಗತ್ಯವಿದ್ದರೆ ಹೈಕೋರ್ಟ್ ಹಾಲಿ ನ್ಯಾಯಾೀಧಿಶರಿಂದ ತನಿಖೆ ನಡೆಸಿ ನಾವು ಹೆದರುವುದಿಲ್ಲ ಎಂದು ಗುಡುಗಿದರು.

ಅಂತಿಮವಾಗಿ ವಾದ-ವಿವಾದ ಆಲಿಸಿದ ಸಭಾಧ್ಯಕ್ಷರು ನಿಯಮ 60ರ ಬದಲು 69ರಡಿ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ ಎಂದಾಗ ಕಾವೇರಿದ ಚರ್ಚೆಗೆ ತೆರೆಬಿದ್ದಿತ್ತು

Articles You Might Like

Share This Article