ಬೆಂಗಳೂರು,ಜು.15- ಪಿಎಸ್‍ಐ ಹಗರಣ ಸಮಾಜದ ಮೇಲಿನ ಭಯೋತ್ಪಾದಕ ದಾಳಿ ಇದ್ದಂತೆ ಎಂದು ಟೀಕಿಸಿರುವ ಕಾಂಗ್ರೆಸ್, ತನಿಖೆ ನಡೆಸುತ್ತಿರುವ ಸರ್ಕಾರದ ಪ್ರಾಮಾಣಿಕತೆಯನ್ನು ನ್ಯಾಯಾಲಯ ಪ್ರಶ್ನಿಸಿದೆ. ಅದಕ್ಕೆ ಉತ್ತರ ಕೊಡಿ ಎಂದು ಸರ್ಕಾರಕ್ಕೆ ಸವಾಲು ಹಾಕಿದೆ.
ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಅವರು, ಪಿಎಸ್‍ಐ ಹಗರಣ ಎಂಬ ಪದ ಕಿವಿಗೆ ಬಿದ್ದಾಕ್ಷಣ ಹೌಹಾರುತ್ತಿದ್ದಾರೆ. ಪ್ರಯತ್ನಪೂರ್ವಕವಾಗಿ ನಕಲಿ ಆತ್ಮವಿಶ್ವಾಸ ಪ್ರದರ್ಶಿಸಲು ಹೆಣಗುತ್ತಿದ್ದಾರೆ. ಕಾಲದ ಮುಳ್ಳು ಅವರತ್ತಲೇ ತಿರುಗಿ ನಿಲ್ಲುವ ಸೂಕ್ಷ್ಮತೆ ಸಿಕ್ಕಂತಿದೆ. ಕದ್ದವನು ಮಾತ್ರ ಪ್ರಮಾಣಿಕನ ಸೋಗು ಹಾಕಲು ಯತ್ನಿಸುತ್ತಾನೆ. ಹಾಗೆಯೇ ತಾವು ಯಾಕಿಷ್ಟು ಗಾಬರಿಯಲ್ಲಿದ್ದೀರಿ? ಎಂದು ಪ್ರಶ್ನಿಸಿದೆ.
ಪಾರದರ್ಶಕ ತನಿಖೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿಯವರು ಹಾದಿ ಬೀದಿಯಲ್ಲಿ ಹೇಳಿಕೊಂಡು ತಿರುಗುತ್ತಿದ್ದಾರೆ. 10 ದಿನಗಳಾದರೂ ಎಡಿಜಿಪಿ ಅಮೃತ್ ಪೌಲ್ ಹೇಳಿಕೆಯನ್ನು ನ್ಯಾಯಾಲಯ ಮುಂದೆ ದಾಖಲಿಸಲು ಭಯಪಡುತ್ತಿರುವುದೇಕೆ? ಸರ್ಕಾರದ ಮಿಕಗಳು ಬಲೆಗೆ ಬೀಳುವ ಭಯವೇ? ಹೈಕೋರ್ಟ್ ನಿಮ್ಮ ಪ್ರಾಮಾಣಿಕ ತನಿಖೆಯನ್ನು ಪ್ರಶ್ನಿಸುತ್ತಿದೆ. ಈಗ ಉತ್ತರ ಹೇಳಿ ಮುಖ್ಯಮಂತ್ರಿಗಳೇ ಎಂದು ಕಾಂಗ್ರೆಸ್ ಸವಾಲು ಎಸೆದಿದೆ.
ಪಿಎಸ್‍ಐ ಕೊಲೆಗಿಂತಲೂ ಮಿಗಿಲಾದದ್ದು, ಕೊಲೆಯಾದರೆ ಒಬ್ಬನ ಪ್ರಾಣ ಹೋಗುತ್ತದೆ, ಇಲ್ಲಿ 50,000 ಜನ ತೊಂದರೆಗೆ ಸಿಲುಕಿದ್ದಾರೆ ಎಂದು ನ್ಯಾಯಾೀಶರೇ ಹೇಳಿದ್ದಾರೆ. ಜೀವದ ಕೊಲೆಯಂತೆಯೇ ಜೀವನದ ಕೊಲೆಯೂ ಭೀಕರವಾದುದು.
ಭವಿಷ್ಯ ಕಟ್ಟಿಕೊಳ್ಳಬೇಕಿದ್ದ ರಾಜ್ಯದ 50 ಸಾವಿರ ಯುವಕರ ಜೀವನವನ್ನು ಬಿಜೆಪಿ ಸರ್ಕಾರ ಕೊಲೆ ಮಾಡಿದೆ.ಈ ಕೊಲೆಗೆ ಅಂದಿನ ಗೃಹಸಚಿವರೇ ಹೊಣೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮಾಯಿ ಅವರತ್ತ ಬೊಟ್ಟು ಮಾಡಿದೆ.
ಪಿಎಸ್‍ಐ ಹಗರಣ ಸಮಾಜದ ಮೇಲಿನ ಭಯೋತ್ಪಾದಕ ದಾಳಿ ಇದ್ದಂತೆ. ಹಗರಣದ ಆಳ, ಅಗಲವನ್ನು ಹಾಗೂ ಅದರ ಹಾನಿಯನ್ನು ವಿವರಿಸಲು ಹೈಕೋರ್ಟ್ ನ್ಯಾಯಾೀಶರು ಹೇಳಿರುವ ಮಾತೇ ಸಾಕು. ಇಂತಹ ಭೀಕರ ಹಗರಣ ನಡೆದೇ ಇಲ್ಲ ಎಂದು ಪ್ರತಿಪಾದಿಸಿದ್ದ ಸರ್ಕಾರ ಈಗ ತನಿಖೆಯನ್ನು ಹಳ್ಳ ಹಿಡಿಸಲು ಯತ್ನಿಸುತ್ತಿದೆ. ಬಿಜೆಪಿ ಪ್ರಾಯೋಜಿತ ಭಯೋತ್ಪಾದಕ ದಾಳಿ ಎಂದು ದೂರಿದೆ.