ಪಿಎಸ್ಐ ನೇಮಕಾತಿ ಅಕ್ರಮ : ಮಧ್ಯವರ್ತಿಗಳಿಂದಲೇ ಹೆಚ್ಚು ಹಣ ವಸೂಲಿ
ಬೆಂಗಳೂರು, ಮೇ 12- ಪಿಎಸ್ಐ ನೇಮಕಾತಿಯಲ್ಲಿ ಒಂದೊಂದು ರೀತಿಯ ಅವ್ಯವಹಾರಕ್ಕೆ ಒಂದೊಂದು ದರ ನಿಗದಿ ಮಾಡಿ, ಮಧ್ಯವರ್ತಿಗಳು ಆಕಾಂಕ್ಷಿಗಳನ್ನು ಸುಲಿಗೆ ಮಾಡಿರುವ ಮಾಹಿತಿ ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೋಟೆಲ್ನಲ್ಲಿ ಆಹಾರ ಪದಾರ್ಥಗಳ ದರ ಪಟ್ಟಿ ಹಾಕಿದಂತೆ ಪಿಎಸ್ಐ ನೇಮಕಾತಿ ಅವ್ಯವಹಾರಗಳಿಗೆ ಬೆಲೆ ನಿಗದಿ ಪಡಿಸಲಾಗಿದೆ. ಈವರೆಗಿನ ತನಿಖೆಯಲ್ಲಿ ಮೂರು ರೀತಿಯ ಅಕ್ರಮ ಬಯಲಾಗಿವೆ.
ಮೊದಲನೆಯ ಮಾದರಿ ಎಂದರೆ ಓಎಂಆರ್ ಶೀಟ್ ಅನ್ನು ತಿದ್ದುಪಡಿ ಮಾಡಿ ರ್ಯಾಂಕ್ ಪಡೆಯುವಂತೆ ಮಾಡುವುದು. ಇದು ಖಚಿತ ಫಲಿತಾಂಶವಾಗಿದ್ದು ಕೆಲಸ ಸಿಗುವುದು ಬಹುತೇಕ ಖಚಿತ ಎಂಬ ವಿಶ್ವಾಸ ಮೂಡಿಸಿ, ಅದಕ್ಕಾಗಿ ಅಕ್ರಮ ನಡೆಸಿದವರ ಕೂಟ 80 ಲಕ್ಷ ರೂಪಾಯಿ ದರ ನಿಗದಿ ಮಾಡಿತ್ತು. ಅಭ್ಯರ್ಥಿಗಳು ಮುಂಗಡವಾಗಿ ಶೇ.50ರಷ್ಟು ಅಂದರೆ 40 ಲಕ್ಷ ರೂಪಾಯಿ ನೀಡುವುದು ಕಡ್ಡಾಯವಾಗಿತ್ತು.
ಎರಡನೇ ಮಾದರಿಯ ಭ್ರಷ್ಟಾಚಾರವೆಂದರೆ ಪರೀಕ್ಷಾ ಕೊಠಡಿಯಲ್ಲಿ ಬ್ಲೂಟೂತ್ ಬಳಕೆ ಮಾಡಿ ಪರೀಕ್ಷೆ ಬರೆಯುವುದಕ್ಕೆ ನೆರವಾಗುವುದು, ಇದಕ್ಕಾಗಿ ಆರೋಪಿಗಳ ಕೂಟ ಬ್ಲೂಟೂತ್ ಸೇರಿದಂತೆ ಅಗತ್ಯ ಸಲಕರಣೆಗಳನ್ನು ಒದಗಿಸುವುದು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಹೊಂದಿತ್ತು. ಈ ಅಕ್ರಮಕ್ಕೆ 60 ಲಕ್ಷ ರೂಪಾಯಿ ದರ ನಿಗದಿ ಮಾಡಿ ಮುಂಗಡವಾಗಿ 30 ಲಕ್ಷ ವಸೂಲಿ ಮಾಡಿದೆ.
ಮೂರನೇ ಮಾದರಿ ಅಕ್ರಮ 50 ಲಕ್ಷ ರೂಪಾಯಿ ನಿಗದಿ ಮಾಡಿ, 25 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ. ಈ ಮಾರ್ಗದಲ್ಲಿ ಪರೀಕ್ಷಾ ಕೇಂದ್ರದಲ್ಲೇ ಕಾಫಿ ಹೊಡೆಸುವುದು, ಪರೀಕ್ಷಾ ಮೇಲ್ವಿಚಾರಕರರ ಹೊಂದಾಣಿಕೆ ಸೇರಿದಂತೆ ಅದಕ್ಕೆ ಬೇಕಾದ ಅಗತ್ಯ ನೆರವುಗಳನ್ನು ಆರೋಪಿಗಳ ಗುಂಪು ಮಾಡುವ ಭರವಸೆಯೊಂದಿಗೆ ಹಣ ವಸೂಲಿ ಮಾಡಿತ್ತು.
ಮಧ್ಯವರ್ತಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಯಾವ ಕೇಂದ್ರದಲ್ಲಿ ಪರೀಕ್ಷೆ ನಡೆಸಬೇಕು ಎಂಬುದನ್ನು ನಿಗದಿ ಮಾಡಿಸುತ್ತಿದ್ದರು. ಅಭ್ಯರ್ಥಿಗೆ ಯಾವ ಶ್ರೇಣಿಯ ಪ್ರಶ್ನೆ ಪತ್ರಿಕೆ ಸಿಗಬೇಕು, ಆತನಿಗೆ ಉತ್ತರ ಹೇಳಿಕೊಡಲು ಅನುಕೂಲವಾಗಬೇಕು ಎಂಬೆಲ್ಲಾ ವಿಷಯಗಳನ್ನು ನಿರ್ಧರಿಸುತ್ತಿದ್ದರು ಎಂದು ಸಿಐಡಿ ತನಿಖೆಯಲ್ಲಿ ಪತ್ತೆ ಹಚ್ಚಿದೆ ಎಂದು ಗೊತ್ತಾಗಿದೆ.
ಅವ್ಯವಹಾರಕ್ಕೆ ಒಪ್ಪಿ ಮುಂಗಡ ಪಾವತಿಸಿ ಅಭ್ಯರ್ಥಿಗಳ ನೋಂದಣಿ ಸಂಖ್ಯೆ ಪಡೆದು ಮಧ್ಯವರ್ತಿಗಳು ಕಾರ್ಯಾಚರಣೆಗೆ ಇಳಿಯುತ್ತಿದ್ದರು. ಈ ಕೂಟ ದೊಡ್ಡ ಮಟ್ಟದಲ್ಲೂ ಡೀಲ್ ಮಾಡಿ ಪರೀಕ್ಷೆ ಬರೆಸುತ್ತಿತ್ತು. ಕೇವಲ ಪಿಎಸ್ಐ ಮಾತ್ರವಲ್ಲದೆ ಈ ಮೊದಲಿನ ಹಲವು ಪರೀಕ್ಷೆಗಳಲ್ಲೂ ಕಾರ್ಯಾಚರಣೆ ನಡೆಸಿರುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ.