Saturday, September 23, 2023
Homeಇದೀಗ ಬಂದ ಸುದ್ದಿಸಾರ್ವಜನಿಕರೇ ಸೈಬರ್ ಕ್ರೈಂ ಬಗ್ಗೆ ಎಚ್ಚರವಹಿಸಿ

ಸಾರ್ವಜನಿಕರೇ ಸೈಬರ್ ಕ್ರೈಂ ಬಗ್ಗೆ ಎಚ್ಚರವಹಿಸಿ

- Advertisement -

ಬೆಂಗಳೂರು,ಸೆ.16- ಭಾರತದಲ್ಲಿ ಮೂವರಲ್ಲಿ ಒಬ್ಬ ವ್ಯಕ್ತಿ ಸೈಬರ್ ವಂಚನೆಗೆ ಒಳಗಾಗುತ್ತಿದ್ದಾರೆ. ಸೈಬರ್ ಕ್ರೈಂ ತಡೆಯಲು ಸಾರ್ವಜನಿಕರು ಎಚ್ಚರಗೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಲು ಆನ್‌ಲೈನ್ ಸಂವಾದದಲ್ಲಿ ಮಾತನಾಡಿದ ಅವರು, ಇಂಟರ್ನೆಟ್ ಸೇವೆ ಬಳಸುವಾಗ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ವಂಚನೆಯಾಗುವ ಮೊದಲು ಸಾಮಾನ್ಯಜ್ಞಾನ ಬಳಸಿದರೆ ವಂಚನೆಯಿಂದ ಪಾರಾಗಬಹುದು ಎಂದು ಸಲಹೆ ನೀಡಿದರು.

ಸೈಬರ್ ಕ್ರೈಂ ವಂಚನೆಗೆ ಒಳಗಾದ ವ್ಯಕ್ತಿ ತಕ್ಷಣ ಆನ್ಲೈನ್ನಲ್ಲಿ ದೂರು ದಾಖಲಿಸಿ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ಎಫ್ಐಆರ್ ದಾಖಲಿಸಿದರೆ ಪೊಲೀಸರು ಸಹಾಯ ಮಾಡುತ್ತಾರೆ ಎಂದರು. ವಿಶ್ವದಲ್ಲೇ ಸೈಬರ್ ಕ್ರೈಮ್ ದೊಡ್ಡ ಸಮಸ್ಯೆಯಾಗಿದ್ದು, ನಿರ್ಮೂಲನೆ ಮಾಡಲು ತುಂಬ ಕಷ್ಟವಾಗುತ್ತಿದೆ. ಅದಕ್ಕಾಗಿ ನಾವು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ದಿನಕ್ಕೊಂದು ಸೈಬರ್ ಟಿಪ್ಸ್ ನೀಡುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳು ಮತ್ತು ಆಕಾಶವಾಣಿಯಲ್ಲಿ ಇದು ಪ್ರಸಾರವಾಗುತ್ತದೆ.

- Advertisement -

ನಗರದ ಸಂಚಾರ ಸಮಸ್ಯೆ ಕುರಿತು ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಗರದ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಸಂಚಾರ ದಟ್ಟಣೆ ಆಗದಂತೆ ನಮ್ಮ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ತಮ್ಮ ಪ್ರದೇಶಗಳಲ್ಲಿ ಟ್ರಾಫಿಕ್ ಸಮಸ್ಯೆ ಇದ್ದಲ್ಲಿ ಆನ್ಲೈನ್ ಮುಖಾಂತರ ಪೊಲೀಸರಿಗೆ ಮಾಹಿತಿ ನೀಡಿದರೆ ಅದನ್ನು ಬಗೆಹರಿಸಲು ಕ್ರಮ ಕೈಗೊಳ್ಳುತ್ತಾರೆ ಎಂದರು.

7.83 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, 14 ಮಂದಿ ಬಂಧನ

ರಸ್ತೆಗಳಲ್ಲಿ ಬೈಕ್ ವೀಲ್ಹಿಂಗ್ ಪುಂಡರ ಬಗ್ಗೆ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದಾಗ, ಇತ್ತೀಚಿನ ದಿನಗಳಲ್ಲಿ ವೀಲ್ಹೀಂಗ್ ಪ್ರಕರಣಗಳು ಕಡಿಮೆಯಾಗುತ್ತಿದೆ. ಅಂತಹ ಪ್ರಕರಣಗಳು ಕಂಡುಬಂದರೆ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.ನ್ಯಾಯಾಲಯದ ನಿರ್ದೇಶನದಂತೆ ನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿ 5ರಿಂದ 6 ಕ್ಯಾಮೆರಾಗಳನ್ನು ಅಳವಡಿಸಿದ್ದು, ಪೊಲೀಸರು ಪಕ್ಷಪಾತ ಮಾಡದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ.

ಸಾರ್ವಜನಿಕರು ಕೇಳಿದ ಪೊಲೀಸರ ರಾತ್ರಿ ಗಸ್ತು ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ನಗರದಲ್ಲಿ 2000 ಕಾನ್ಸ್ಟೆಬಲ್, 500 ಹಿರಿಯ ಅಧಿಕಾರಿಗಳು ನೈಟ್ ಬೀಟ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇ-ಬೀಟ್ ಸಿಸ್ಟಮ್ ಅಳವಡಿಸಲಾಗಿದೆ. ನಗರದ ಸುತ್ತ 12ರಿಂದ 13 ಕಿ.ಮೀ ನಮ್ಮ ಪೊಲೀಸರು ಬೀಟ್ ನಡೆಸಲಿದ್ದಾರೆ. ಹಿರಿಯ ಅಧಿಕಾರಿಗಳ ಕಾರುಗಳಿಗೂ ಜಿಪಿಎಸ್ ಅಳವಡಿಸಿದ್ದು, ಇದರ ಸಂಪೂರ್ಣ ಮಾಹಿತಿ ದಿನನಿತ್ಯ ಪರಿಶೀಲಿಸಲಾಗುವುದು.

ಹಿರಿಯ ನಾಗರಿಕರು ಮತ್ತು ಸಾರ್ವಜನಿಕರಿಗೆ ತೊಂದರೆಯಾದಲ್ಲಿ 112 ಸಂಖ್ಯೆಗೆ ಕರೆ ಮಾಡಿದರೆ ನಮ್ಮ ಹೊಯ್ಸಳ ತಂಡವು ಏಳು ನಿಮಿಷಗಳಿಗೆ ಅವರನ್ನು ತಲುಪುತ್ತದೆ. 243 ಹೊಯ್ಸಳ ಬೀಟ್ ವಾಹನಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
ಈ ಆನ್ಲೈನ್ ಸಂವಾದದ ಕುರಿತು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದು, ಬೆಂಗಳುರು ವಿಶ್ವದ ಐಟಿ ನಗರವಾಗಿದ್ದು, ನಾವು ಸಹ ತಂತ್ರಜ್ಞಾನ ಬಳಸಿಕೊಂಡು ಅಪರಾಧ ಚಟುವಟಿಕೆಗಳನ್ನು ತಡೆಯಲು ಕಾರ್ಯ ನಿರ್ವಹಿಸುತ್ತಿದ್ದೇವೆ. ಸಾರ್ವಜನಿಕರು ತಮ್ಮ ಯಾವುದೇ ಸಮಸ್ಯೆಗಳನ್ನು ಸಾಮಾಜಿಕ ಮಾಧ್ಯಮ ಮತ್ತು ನಮ್ಮ ಆನ್ಲೈನ್ ಪೊರ್ಟಲ್ಗಳಲ್ಲಿ ದೂರು ಸಲ್ಲಿಸುವ ಮೂಲಕ ಸಹಾಯ ಪಡೆಯಬಹುದು ಎಂದರು.

#Public, #BeAware, #Cybercrime,

- Advertisement -
RELATED ARTICLES
- Advertisment -

Most Popular