ಮಂಗಳೂರು, ಜು.1- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮೂರು ಸರಣಿ ಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ವ್ಯಕ್ತಿ, ಸಂಘಟನೆ, ಸಿದ್ದಾಂತವಿರಲಿ ಅವರನ್ನು ಬಿಡುವುದಿಲ್ಲ ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್‍ಸೂದ್ ಹೇಳಿದರು.
ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ ಇಲ್ಲಿಗೆ ಭೇಟಿ ನೀಡಿರುವ ಅವರು, ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು ಮೂರು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ, ಈ ಮೂರು ಪ್ರಕರಣಗಳ ಅಪರಾಧಿಗಳನ್ನು ಪತ್ತೆ ಮಾಡುತ್ತೇವೆ, ಯಾರೇ ಭಾಗಿಯಾಗಿದ್ದರೂ ಸರಿ, ಸಂಸ್ಥೆ, ವ್ಯಕ್ತಿ, ಸಿದ್ದಾಂತವೆಂದು ನೋಡದೇ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಸೂದ್ ಪ್ರಕರಣದಲ್ಲಿ ಈಗಾಗಲೇ ಎಂಟು ಮಂದಿಯನ್ನು ಬಂಧಿಸಲಾಗಿದೆ. ಪ್ರವೀಣ್ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದು, ಫಾಜಿಲ್ ಪ್ರಕರಣದಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಫಾಜಿಲ್ ಕೊಲೆ ಪ್ರಕರಣದಲ್ಲಿ ಕಾರನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ಆ ಮೂಲಕ ಇತರೆ ಆರೋಪಿಗಳು ಸಿಗುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ನಾವು ಈಗಾಗಲೇ ಆಪರೇಷನ್ ಮಾಡುತ್ತಿದ್ದೇವೆ. ತನಿಖೆಯ ಬಗ್ಗೆ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ ಎಂದರು.
ಬಂದೋಬಸ್ತ್:
ಕೇರಳ ಗಡಿಯಲ್ಲಿ ಹೆಚ್ಚು ಬಂದೋಬಸ್ತ್ ಮಾಡುತ್ತಿದ್ದೇವೆ. ಗಸ್ತು ಜಾಸ್ತಿ ಮಾಡುತ್ತೇವೆ. ಚೆಕ್ಕಿಂಗ್ ಜಾಸ್ತಿ ಮಾಡಲಾಗಿದೆ.
ಚೆಕ್‍ಪೋಸ್ಟ್‍ಗಳಲ್ಲಿ ಕಠಿಣ ನಿರ್ಧಾರ ಕೈಗೊಳ್ಳುತ್ತೇವೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಳ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಶಾಂತಿ-ಸುವ್ಯವಸ್ಥೆ ಮುಖ್ಯ:
ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಬಹಳ ಮುಖ್ಯ. ಅದಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ. ಯಾವುದೇ ಜನಾಂಗದವರಾದರೂ ಶಾಂತಿ-ಸೌಹಾರ್ದಯುತವಾಗಿ ಬಾಳ್ವೆ ನಡೆಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಪೊಲೀಸರೊಂದಿಗೆ ಸಹಕರಿಸಿ:
ಅಪರಾಧ ನಡೆದ ಸಂದರ್ಭದಲ್ಲಿ ಸಾರ್ವಜನಿಕರು ಸಹ ಪೊಲೀಸರಿಗ ಸಹಕರಿಸಬೇಕು. ಆಗ ಮಾತ್ರ ನಮ್ಮ ತನಿಖೆಗೆ ಸಹಕಾರಿಯಾಗುತ್ತದೆ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲ ಸಹಾಯವಾಗುತ್ತದೆ. ಅಲ್ಲದೆ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬಹುದು ಎಂದರು.
ಸಮಾಜದಲ್ಲಿ ಅಪರಾಧ ನೋಡಿದವರು ಆರೋಪಿಗಳ ಬಗ್ಗೆ ಮಾಹಿತಿ ಇದ್ದವರು ಇರುತ್ತಾರೆ. ಅಂತಹ ನಾಗರಿಕರು ಪೊಲೀಸರಿಗೆ ಮಾಹಿತಿ ಕೊಟ್ಟರೆ ಆರೋಪಿಗಳನ್ನು ಶೀಘ್ರ ಬಂಧಿಸಲು ಸಹಾಯವಾಗುತ್ತದೆ ಎಂದರು.
ಅಪರಾಧದ ಬಗ್ಗೆ ಮಾಹಿತಿ ಗೊತ್ತಿದ್ದರೂ ಪೊಲೀಸರಿಗೆ ಮಾಹಿತಿ ಕೊಡಲಿಲ್ಲವೆಂದರೆ ಅವರೂ ಸಹ ಭಾಗಿಯಾಗಿದ್ದಾರೆಂದು ನಿರ್ಧರಿಸಬೇಕಾಗುತ್ತದೆ ಎಂದು ಪ್ರವೀಣ್‍ಸೂದ್ ಇದೇ ವೇಳೆ ಎಚ್ಚರಿಕೆ ನೀಡಿದರು.
ಇದಕ್ಕೂ ಮೊದಲು ಸರ್ಕಿಟ್‍ಹೌಸ್‍ನಲ್ಲಿ ಡಿಜಿಪಿ ಪ್ರವೀಣ್‍ಸೂದ್ ಅವರು ಐಜಿಪಿ, ಎಸ್‍ಪಿ, ಕಮೀಷನರ್ ಹಾಗೂ ಡಿಸಿ ಜೊತೆ ಚರ್ಚಿಸಿ ಆರೋಪಿಗಳ ಪತ್ತೆಗೆ ಸಂಬಂಧಿಸಿದಂತೆ ನಡೆಸಬೇಕಾದ ಕಾರ್ಯಾಚರಣೆಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡರು.
ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಬಗ್ಗೆ ಡಿಜಿಪಿಯವರು ಅಧಿಕಾರಿಗಳಿಗೆ ಕೆಲವು ಸಲಹೆ ಸೂಚನೆ ಗಳನ್ನು ನೀಡಿದ್ದಾರೆ.