ಬೆಂಗಳೂರು, ಫೆ.18- ಗಾಂಜಾ ಸೇದುವುದು ನಮ್ಮ ಹಕ್ಕು. ಅದು ಹಿಂದೂಗಳ ಸಂಪ್ರದಾಯ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಪುನೀತ್ ಕೆರೆಹಳ್ಳಿ ಎಂಬುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಹೇಳಿಕೆ ಸಂಬಂಧದ ವಿಡಿಯೋವನ್ನು ನಗರ ಪೊಲೀಸ್ ಆಯುಕ್ತರಾದ ಕಮಲ್‍ಪಂತ್ ಅವರಿಗೆ ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಕಳುಹಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಯುವಕರಿಗೆ ಗಾಂಜಾ ಸೇವನೆ ಮಾಡುವಂತೆ ಪ್ರಚೋದಿಸುವ ಹೇಳಿಕೆ ಇದಾಗಿದ್ದು, ಈ ಸಂಬಂಧದ ವಿಡಿಯೋ ಸಂದೇಶವನ್ನು ಪೊಲೀಸ್ ಆಯುಕ್ತರಿಗೆ ನಾನು ಫಾರ್ವರ್ಡ್ ಮಾಡಿದ್ದೇನೆ ಎಂದು ರಮೇಶ್ ತಿಳಿಸಿದ್ದಾರೆ.
ಯುವಜನ ಮಾದಕ ವಸ್ತು ಉಪಯೋಗಿಸಿ ಅವರ ಜೀವನ ದಿಕ್ಕೆಟ್ಟುಹೋಗುತ್ತಿದೆ. ಇಂತಹ ವಿಡಿಯೋಗಳಿಂದ ಗಾಂಜಾ ಸೇವನೆ ಪ್ರಚೋದಿಸುವಂತೆ ಮಾಡುತ್ತಿದೆ ಎಂದು ಹೇಳಿರುವ ಅವರು, ಈ ವ್ಯಕ್ತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
