ನಾಯಂಡಹಳ್ಳಿ ವೃತ್ತದಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ರಾಜ್‍ಕುಮಾರ್ ಹೆಸರು

Social Share

ಬೆಂಗಳೂರು,ಫೆ.17-ಮೈಸೂರು ರಸ್ತೆಯ ನಾಯಂಡಹಳ್ಳಿ ವೃತ್ತದಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್‍ವರೆಗಿನ 12 ಕಿ.ಮೀ ಉದ್ದದ ವರ್ತುಲ ರಸ್ತೆಗೆ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಹೆಸರಿಡುವುದು ಖಾತರಿಯಾಗಿದೆ. ಎರಡು ಲೋಕಸಭಾ ಕ್ಷೇತ್ರಗಳು, ಆರು ವಿಧಾನಸಭಾ ಕ್ಷೇತ್ರಗಳು ಹಾಗೂ 14 ಬಿಬಿಎಂಪಿ ವಾರ್ಡ್‍ಗಳಲ್ಲಿ ಹಾದು ಹೋಗುವ ನಾಯಂಡಹಳ್ಳಿ ಜಂಕ್ಷನ್-ಹೊಸಕೆರೆಹಳ್ಳಿ -ದೇವೇಗೌಡ ಪೆಟ್ರೋಲ್ ಬಂಕ್-ಕದಿರೇನಹಳ್ಳಿ ಪಾರ್ಕ್-ಸಾರಕ್ಕಿ ಸಿಗ್ನಲ್ -ಜೆ.ಪಿ.ನಗರದ ಮೂಲಕ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ವೃತ್ತದವರಿಗಿನ ವರ್ತುಲ ರಸ್ತೆ ಇನ್ನು ಮುಂದೆ ಪವರ್‍ ಸ್ಟಾರ್ ಪುನೀತ್ ರಾಜ್‍ಕುಮಾರ್ ರಸ್ತೆಯಾಗಿ ಪರಿವರ್ತನೆಯಾಗಲಿದೆ.
ವರನಟ ಡಾ.ರಾಜ್‍ಕುಮಾರ್ ಅವರ ಸಮಾ ಸ್ಥಳವಿರುವ ಕಂಠೀರವ ಸ್ಟುಡಿಯೋದಿಂದ ನಾಯಂಡಹಳ್ಳಿ ವೃತ್ತದವರೆಗಿನ ವರ್ತುಲ ರಸ್ತೆಗೆ ಡಾ.ರಾಜ್‍ಕುಮಾರ್ ಪುಣ್ಯಭೂಮಿ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಈ ರಸ್ತೆಯ ಮುಂದುವರೆದ ಭಾಗವಾದ ನಾಯಂಡಹಳ್ಳಿಯಿಂದ ಬನ್ನೇರುಘಟ್ಟ ರಸ್ತೆವರೆಗಿನ ವರ್ತುಲ ರಸ್ತೆಗೆ ಪುನೀತ್‍ರಾಜ್‍ಕುಮಾರ್ ಅವರ ಹೆಸರಿಡುವಂತೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಹಾಗೂ ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು.
ರಮೇಶ್ ಅವರ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಬಿಬಿಎಂಪಿ ಅಧಿಕಾರಿಗಳು ನಾಯಂಡಹಳ್ಳಿಯಿಂದ ಬನ್ನೇರುಘಟ್ಟ ರಸ್ತೆವರೆಗಿನ ವರ್ತುಲ ರಸ್ತೆಗೆ ಪುನೀತ್ ಹೆಸರಿಡಲು ತೀರ್ಮಾನಿಸಿದ್ದಾರೆ. ನಿಯಮಾನುಸಾರ ಕಂದಾಯ ಇಲಾಖೆಯ ಜಂಟಿ ಆಯುಕ್ತರು, ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕೂಡಲೆ ಕ್ರಮ ವಹಿಸುವಂತೆ ಮುಖ್ಯ ಆಯುಕ್ತ ಗೌರವ್‍ಗುಪ್ತಾ ಸೂಚನೆ ನೀಡಿದ್ದರು.
ಆಯುಕ್ತರ ಸೂಚನೆಯಂತೆ ಅಧಿಕಾರಿಗಳು ಸದರಿ ರಸ್ತೆಯ ನಕ್ಷೆ ತಯಾರಿಸಿ ಆ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ಆಕ್ಷೇಪಣೆಗಳ ಮಹಜರು ನಡೆಸಿ 9 ಬಡಾವಣೆಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದಾಗ ಯಾರಿಂದಲೂ ಆಕ್ಷೇಪಣೆ ವ್ಯಕ್ತವಾಗದ ಹಿನ್ನಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಈ ಕುರಿತಂತೆ ಮುಖ್ಯ ಆಯುಕ್ತರು ಮಂಡಿಸಿದ್ದ ಟಿಪ್ಪಣಿಗೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‍ಸಿಂಗ್ ಅವರು ಅನುಮೋದನೆ ನೀಡಿರುವುದರಿಂದ ಶೀಘ್ರದಲ್ಲೇ ನಾಯಂಡಹಳ್ಳಿ ವೃತ್ತದಿಂದ ಬನ್ನೇರುಘಟ್ಟ ರಸ್ತೆವರೆಗಿನ 12 ಕಿ.ಮೀ ಉದ್ದದ ವರ್ತುಲ ರಸ್ತೆ ಪುನೀತ್ ರಾಜ್‍ಕುಮಾರ್ ರಸ್ತೆಯಾಗಿ ಶೀಘ್ರದಲ್ಲೇ ನಾಮಕರಣಗೊಳ್ಳಲಿದೆ.
ಡಾ.ರಾಜ್‍ಕುಮಾರ್ ಕುಟುಂಬ ವರ್ಗದವರನ್ನು ಸಂಪರ್ಕಿಸಿ, ಮುಖ್ಯಮಂತ್ರಿಗಳ ದಿನಾಂಕ ನಿಗಪಡಿಸಿಕೊಂಡು ಆದಷ್ಟು ಶೀಘ್ರ ರಸ್ತೆ ನಾಮಕರಣ ಕಾರ್ಯಕ್ರಮ ನೆರವೇರಿಸಲಾಗುವುದು ಎಂದು ಎನ್.ಆರ್.ರಮೇಶ್ ತಿಳಿಸಿದ್ದಾರೆ.

Articles You Might Like

Share This Article