ಅಭಿಮಾನಿಗಳಿಗೆ ಗಿಡ ನೀಡುವ ಮೂಲಕ ಅಪ್ಪುಗೆ ನಮನ

Social Share

ಬೆಂಗಳೂರು, ಜ.29- ಪುನೀತ್‍ರಾಜ್‍ಕುಮಾರ್ ಅವರ ಅಭಿಮಾನಿಗಳ ದಿನದಿಂದ ದಿನಕ್ಕೆ ಭಕ್ತರಾಗುತ್ತಿದ್ದು ಅಪ್ಪು ನಮ್ಮನ್ನಗಲಿದಾಗಿನಿಂದಲೂ ಪ್ರತಿದಿನವೂ ಸಮಾ ಬಳಿಗೆ ಬಂದು ಪೂಜೆ ಮಾಡಿಕೊಂಡು ಹೋಗುತ್ತಿದ್ದು, ಅವರಿಗೆ ಗಿಡ ನೀಡುವ ಮೂಲಕ ನಮನ ಸಲ್ಲಿಸುತ್ತಿದ್ದೇವೆ ಎಂದು ನಟ ರಾಘವೇಂದ್ರರಾಜ್‍ಕುಮಾರ್ ಅವರು ಹೇಳಿದರು.
ಮೂರನೆ ತಿಂಗಳ ಪುಣ್ಯಸ್ಮರಣೆ ಅಂಗವಾಗಿ ಕಂಠೀರವ ಸ್ಟುಡಿಯೋ ಬಳಿ ಪುನೀತ್ ಪುಣ್ಯಭೂಮಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಘವೇಂದ್ರ ರಾಜ್‍ಕುಮಾರ್, ಅಪ್ಪಾಜಿ ಅವರು ಯಾವಾಗಲೂ ಒಂದು ಮಾತು ಹೇಳುತ್ತಿದ್ದರೂ ಯಾರಿಗಾದರೂ ಏನಾದರೂ ಹೇಳುವ ಮುನ್ನ ನಾವು ಅದನ್ನು ಪಾಲಿಸಬೇಕೆಂದು ಅದರಂತೆ ಇಂದು ನಾವು ಅಭಿಮಾನಿಗಳಿಗೆ ಸಸಿಗಳನ್ನು ನೀಡುವ ಮುನ್ನ ನಾವು ಗಿಡ ನೆಟ್ಟು ಆ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಎಂದು ಹೇಳಿದರು.
ಅಪ್ಪುವಿಗೆ ಕಾಡು ಹಸಿರಾಗಿರುವುದನ್ನು ನೋಡುವುದೆಂದರೆ ತುಂಬಾ ಇಷ್ಟ. ಅವರ ಅಗಲಿಕೆಯ ಮುನ್ನ ಅವರು ಕಾಡು ಹಾಗೂ ಪ್ರಾಣಿಗಳ ಪ್ರೇಮವನ್ನು ಬಿಂಬಿಸುವ ಗಂಧದ ಗುಡಿ ಚಿತ್ರದಲ್ಲಿ ನಟಿಸಿದ್ದರು, ಪುನೀತ್ ಅವರ ಆಶಯವನ್ನು ನನಸು ಮಾಡುವ ಕಾರ್ಯಕ್ಕೆ ಮುಂದಾಗಿದ್ದು, ಅವರ ಹುಟ್ಟುಹಬ್ಬದ ವೇಳೆಗೆ 1 ಲಕ್ಷ ಗಿಡ ನೆಡುವ ಗುರಿ ಹೊಂದಿದ್ದೇವೆ ಎಂದು ರಾಘಣ್ಣ ತಿಳಿಸಿದರು.
ಕನ್ನಡದ ಕಣ್ಮಣಿ, ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ ಮೂರು ತಿಂಗಳಾಗಿರುವ ಸಂದರ್ಭದಲ್ಲಿ ಅವರ ಹೆಸರಿನಲ್ಲಿ ಅಣ್ಣಾವ್ರ ಕುಟುಂಬದವರು ಅಭಿಮಾನಿಗಳಿಗೆ 500 ಸಸಿಗಳನ್ನು ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಪುನೀತ್‍ರಾಜ್‍ಕುಮಾರ್ ಅವರ ಸಮಾಗೆ ಡಾ.ರಾಜ್‍ಕುಮಾರ್ ಕುಟುಂಬದವರು ಇಂದು ಕಂಠೀರವ ಸ್ಟುಡಿಯೋಗೆ ಹೋಗಿ ಪುಣ್ಯಭೂಮಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಪ್ಪುವಿನ ಅಭಿಮಾನಿಗಳು ಕೂಡ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅಪ್ಪುವಿನ ಆಸೆಯಂತೆ ನಮ್ಮ ನಾಡನ್ನು ಗಂಧದ ಗುಡಿ ಮಾಡುವ ಸಲುವಾಗಿ ಪುನೀತ್‍ರಾಜ್‍ಕುಮಾರ್‍ರ ಪತ್ನಿ ಅಶ್ವಿನಿ ಅವರು ಅಭಿಮಾನಿಗಳಿಗೆ 500 ಸಸಿಗಳನ್ನು ನೀಡಿದ್ದಾರೆ.
ಅಪ್ಪುವಿನ ಮೂರು ತಿಂಗಳ ಕಾರ್ಯದ ಸಲುವಾಗಿ ಡಾ.ರಾಜ್ ಕುಟುಂಬದವರು ಕಂಠೀರವ ಸ್ಟುಡಿಯೋ ಬಳಿ ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಇಂದು ಸಂಜೆ 6 ಗಂಟೆಗೆ ಅಪ್ಪು ಪುಣ್ಯಭೂಮಿ ಬಳಿ ಸ್ಕಿಲ್ ಡಿಪಾರ್ಟ್‍ಮೆಂಟ್ ಬಳಗದಿಂದ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ನಟ ರಾಘವೇಂದ್ರರಾಜ್‍ಕುಮಾರ್, ಅಶ್ವಿನಿ ಪುನೀತ್‍ರಾಜ್‍ಕುಮಾರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

Articles You Might Like

Share This Article