ಪುನೀತ್ ನುಡಿ ನಮನಕ್ಕೆ ಬಿಗ್ ಬಿ, ರಣಬೀರ್ ಸೇರಿದಂತೆ ದಿಗ್ಗಜರು ಭಾಗಿ ಸಾಧ್ಯತೆ

Spread the love

ಬೆಂಗಳೂರು, ನ.8- ಆದರ್ಶದ ಪ್ರತಿ ಮೂರ್ತಿಯಂತಿದ್ದ ನಟ ಪುನೀತ್ ರಾಜ್‍ಕುಮಾರ್ ಅಗಲಿಕೆ ಇಡೀ ಭಾರತ ಚಿತ್ರರಂಗವೇ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಈ ಮಹಾನ್ ನಟನ ನುಡಿ ನಮನ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ. ನ.16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿ ರುವ ಪುನೀತ್ ರಾಜ್‍ಕುಮಾರ್ ನುಡಿ ನಮನ ಕಾರ್ಯಕ್ರಮವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿದ್ದು , ಇದರಲ್ಲಿ ಬಾಲಿವುಡ್‍ನ ದಿಗ್ಗಜರು ಸೇರಿದಂತೆ ಹಲವು ಭಾಷೆಗಳ ನಟ-ನಟಿಯರು, ಚಿತ್ರರಂಗದ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ.

ಅಪ್ಪು ಸ್ಮರಣೆಯ ಮಹಾ ಸಂಗಮ ಇದಾಗಲಿದ್ದು, ಭಾರತದ ಇತಿಹಾಸದಲ್ಲೇ ಅಚ್ಚಳಿಯದಂತೆ ಉಳಿಯುವ ಕಾರ್ಯಕ್ರಮ ಇದಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಮಿತಾಬ್ ಬಚ್ಚನ್, ಧರ್ಮೇಂದ್ರ, ಜಾಕಿ ಶ್ರಾಫ್, ಶಾರೂಖ್ ಖಾನ್, ಸಲ್ಮಾನ್ ಖಾನ್, ರಣಬೀರ್ ಕಪೂರ್ ಸೇರಿದಂತೆ ಹಲವು ಖ್ಯಾತ ನಾಮ ದಿಗ್ಗಜರು ಆಗಮಿಸಲಿದ್ದಾರೆ.

ಇದಲ್ಲದೆ ಉತ್ತರ ಹಾಗೂ ದಕ್ಷಿಣ ಭಾರತದ ಚಿತ್ರರಂಗದ ನಟ, ನಟಿಯರ ಕುಟುಂಬವೇ ಇದರಲ್ಲಿ ಪಾಲ್ಗೊಳ್ಳುತ್ತಿದೆ. ಕೇವಲ ಚಿತ್ರರಂಗದ ಗಣ್ಯರಿಗೆ ಮಾತ್ರ ಮೀಸಲಾಗಿರುವ ಈ ಸಮಾರಂಭದಲ್ಲಿ ಅಪ್ಪುಗೆ ಗೀತೆಗಳ ಮೂಲಕ ಮತ್ತು ನುಡಿ ನಮನದ ಅಶ್ರು ತರ್ಪಣ ಸಲ್ಲಿಸಲಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಸಾ.ರಾ.ಗೋವಿಂದು ರಾಜ್ಯ ಸರ್ಕಾರವು ಕೂಡ ನಮ್ಮೊಂದಿಗೆ ಕೈ ಜೋಡಿಸಿದೆ. ಅಪ್ಪು ಅಗಲಿಕೆ ಹಾಗೂ ಅಂತ್ಯಕ್ರಿಯೆ ಸಂದರ್ಭದಲ್ಲಿ ಎಲ್ಲಾ ಅಚ್ಚುಕಟ್ಟಾಗಿ ನಡೆಯಿತು.

ಈಗ ಮತ್ತೊಂದು ಅವಿಸ್ಮರಣೀಯ ಕಾರ್ಯಕ್ರಮ ನಡೆಯುತ್ತಿದ್ದು, ಹಲವಾರು ಖ್ಯಾತ ನಾಮ ಗಣ್ಯರು ಆಗಮಿಸುವುದರಿಂದ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಕರ್ನಾಟಕದ ಇಡೀ ಚಿತ್ರರಂಗಕ್ಕೆ ಇನ್ನೂ ಕೂಡ ಅಪ್ಪು ಅಗಲಿಕೆಯ ಆಘಾತದಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ ಎಂದರು. ಕಾರ್ಯಕ್ರಮದ ರೂಪುರೇಷೆ ಕುರಿತಂತೆ ಸಿಎಂ , ಗೃಹಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ ಎಂದು ಅವರು ಹೇಳಿದರು.