ಶಾಲಾ ಪಠ್ಯದಲ್ಲಿ ಅಪ್ಪು ಸಾಧನೆ ಸೇರ್ಪಡೆ : ಸಿಎಂ

Social Share

ಬೆಂಗಳೂರು,ನ.1- ಅಭಿಮಾನಿಗಳ ಕೋರಿಕೆ ಯಂತೆ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜೀವನ ಚರಿತ್ರೆಯನ್ನೊಳಗೊಂಡ ಪಠ್ಯವನ್ನು ಶಾಲಾ ಪಠ್ಯ ಪುಸ್ತಕದಲ್ಲಿ ಸೇರ್ಪಡೆ ಮಾಡುವ ಕುರಿತು ಹಂತ ಹಂತವಾಗಿ ಕ್ರಮ ತೆಗೆದು ಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ರಾಜ್ಕುಮಾರ್ ಅವರ ಜೀವನ ಚರಿತ್ರೆಯನ್ನು ಪಠ್ಯ ಪುಸ್ತಕದಲ್ಲಿ ಸೇರ್ಪಡೆ ಮಾಡಿ ಅವರ ಸಾಧನೆಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂಬುದು ಎಲ್ಲರ ಅಭಿಲಾಷೆಯಾಗಿದೆ.

ಅದಕ್ಕಾಗಿ ಏನೆಲ್ಲ ಸಾಧ್ಯವೋ ಅದೆಲ್ಲವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಆಶ್ವಾಸನೆ ನೀಡಿದರು. ಕನ್ನಡದ ನೆಲದಲ್ಲಿ ಹತ್ತು ಹಲವು ಪರೋಪಕಾರ ಕೆಲಸವನ್ನು ಪುನೀತ್ ಮಾಡಿದ್ದಾರೆ. ಅವರು ತಮ್ಮ ಬದುಕನ್ನೇ ಕನ್ನಡಕ್ಕಾಗಿ ಮೀಸಲಿಟ್ಟವರು.

ಕನ್ನಡದ ಬಗ್ಗೆ, ಕನ್ನಡದ ಅಸ್ಮಿತೆ ಬಗ್ಗೆ ಜಾಗೃತಿ ಮೂಡಿಸಿದವರು. ಎಷ್ಟರ ಮಟ್ಟಿಗೆ ಅಂದರೆ ತಮ್ಮ ಅಂಗಾಂಗಗಳ ದಾನ ಮಾಡಿ ಬೇರೆಯವರಿಗೂ ಮಾದರಿಯಾಗಿದ್ದಾರೆ ಎಂದು ಪ್ರಶಂಸಿಸಿದರು. ಪುನೀತ್ ರಾಜ್ಕುಮಾರ್ ಅವರಿಂದ ಸ್ಪೂರ್ತಿ ಪಡೆದು ಸಾವಿರಾರು ಮಂದಿ ನೇತ್ರ ದಾನ ಮಾಡುತ್ತಿದ್ದಾರೆ. ಅವರು ಸಣ್ಣ ವಯಸ್ಸಲ್ಲೇ ಪ್ರೇರಣಾದಾಯಕ ಸಾಧನೆ ಮಾಡಿದ್ದಾರೆ ಎಂದರು.

ಕರ್ನಾಟಕ ರಾಜ್ಯೋತ್ಸವದ ವಿಶೇಷವೇ ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುತ್ತಿರುವುದು. ನವೆಂಬರ್ 1 ಕನ್ನಡ ರಾಜ್ಯೋತ್ಸವದಂದೇ ಪುನೀತ್ ಅವರಿಗೆ ಕರ್ನಾಟಕ ರತ್ನ ಕೊಡಬೇಕೆಂಬುದು ನಮ್ಮ ಇಚ್ಛೆ ಆಗಿತ್ತು. ಅದರಂತೆ ಇಂದು ಮೇರುನಟನನ್ನು ಗೌರವಿಸುತ್ತಿರುವುದು ಸಂತೋಷದ ವಿಷಯ ಎಂದರು.

ಇಂದು ಕನ್ನಡ ರಾಜ್ಯೋತ್ಸವ ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಇದು ಕೇವಲ ಆಚರಣೆಯಾಗಿ ಉಳಿಯುವುದಿಲ್ಲ, ಬದುಕಿನ ಪ್ರತೀ ಅಂಗಗಳಲ್ಲೂ ಕನ್ನಡದ ಡಿಂಡಿಮ ಬಾರಿಸುತ್ತಿದೆ ಎಂದು ಹೇಳಿ ನಾಡಿನ ಜನತೆಗೆ ರಾಜ್ಯೋತ್ಸವದ ಶುಭಾಶಯ ಕೋರಿದರು.

ಶಿಕ್ಷಣ, ಉದ್ಯೋಗ, ಎಲ್ಲ ರಂಗಗಳಲ್ಲೂ ರಾಜ್ಯ ಮುಂದೆ ಬರಲು ಸರ್ಕಾರ ಹತ್ತು ಹಲವು ಕಾರ್ಯಕ್ರಮ ರೂಪಿಸಲಾಗಿದೆ. ಹಂತಹಂತವಾಗಿ ಎಲ್ಲ ಕ್ರಮ ತೆಗೆದುಕೊಳ್ಳುತ್ತೇವೆ. ಇದಕ್ಕಾಗಿ ಏನೆಲ್ಲ ಸಾಧ್ಯವೋ ಎಲ್ಲವನ್ನೂ ಮಾಡುತ್ತೇವೆ. ಅದರ ಹೆಚ್ಚಿನ ಲಾಭವನ್ನು ಕನ್ನಡಿಗರು ತೆಗೆದುಕೊಳ್ಳಬೇಕು ಎಂದು ಹೇಳಿದರು.

Articles You Might Like

Share This Article