ಮೈಸೂರು,ಆ.24- ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದಿಂದ ದೊಡ್ಡಕೆರೆ ಮೈದಾನದ ಆವರಣದಲ್ಲಿ ಸೆ.26ರಿಂದ ಡಿ.24ರವರೆಗೆ ದಸರಾ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ ಕೂಡ ಮಾಹಿತಿ ನೀಡಿ ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನೆನಪಿಗಾಗಿ ಸ್ಯಾಂಡ್ ಮ್ಯೂಸಿಮ್ ಮತ್ತು ಯೋಗಾ ತ್ರಿಡಿ ವಿಡಿಯೋ ಮ್ಯಾಪಿಂಗ್ ನಿರ್ಮಿಸಲಾಗುತ್ತಿದೆ.
ಅಲ್ಲದೆ ದಸರಾ ಮಹೋತ್ಸವ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳು ಮತ್ತು ಸಚಿವರಿಂದ ಉದ್ಘಾಟನೆಯಾಗುವುದರಿಂದ ಕಾವೇರಿ ಬಹುಮಾಧ್ಯಮ ಕಲಾ ಗ್ಯಾಲರಿಯನ್ನು ಸಚಿವರಿಂದ ನೆರವೇರಿಸಲಾಗುವುದು ಎಂದರು.
ವಸ್ತು ಪ್ರದರ್ಶನ ಮುಂಭಾಗದಲ್ಲಿ ಡಿಜಿಟಲ್ ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಂಡು ವಸ್ತುಪ್ರದರ್ಶನದ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅರಣ್ಯ ಹಾಗೂ ಕೃಷಿ ಇಲಾಖೆಯಿಂದ ಸಸಿಗಳು ಹಾಗೂ ಕೃಷಿ ಪರಿಕರಗಳನ್ನು ಪ್ರದರ್ಶನ ಮಾಡಲು ಪ್ರಾಧಿಕಾರ ಸಬ್ಸಿಡಿ ದರದಲ್ಲಿ ಮಳಿಗೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ.
ವಸ್ತು ಪ್ರದರ್ಶನ ನಡೆಯುವ ಆವರಣವನ್ನು ಪ್ಲಾಸ್ಟಿಕ್ ಮುಕ್ತ ಎಂದು ಘೋಷಿಸಿದ್ದು, ಆರ್‍ಓ ಪ್ಲಾಂಟ್ ನಿರ್ಮಿಸಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ.
ಸ್ವಚ್ಛತೆಗೆ ಹೆಚ್ಚಿನ ಕ್ರಮ ವಹಿಸಲಾಗಿದ್ದು, ಮಾಹಿತಿ ಕೇಂದ್ರ, ಪೊಲೀಸ್ ಉಪಠಾಣೆ, ಅಗ್ನಿಶಾಮಕ ವಾಹನಗಳು, ಪ್ರಥಮ ಚಿಕಿತ್ಸಾ ಘಟಕವನ್ನು ತೆರೆಯಲು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಎಂದರು.
ಕೋವಿಡ್‍ನಿಂದ ಕಳೆದ ಎರಡು ವರ್ಷಗಳಿಂದ ವಸ್ತುಪ್ರದರ್ಶನ ನಡೆಯದೆ ಇರುವುದರಿಂದ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುವ ನಿರೀಕ್ಷೆಯಿದೆ. ಆದುದರಿಂದ ಮೈಸೂರು ಜನತೆಯಲ್ಲಿ ತಾವು ಇದುವರೆಗೂ ನೋಡಿರದ ವಸ್ತು ಪ್ರದರ್ಶನದಲ್ಲಿ ಏನಾದರೂ ಬದಲಾವಣೆ ಹಾಗೂ ಸಲಹೆಗಳಿದ್ದಲ್ಲಿ ಆ.30ರೊಳಗೆ ಪತ್ರ ಹಾಗೂ ಇಮೇಲ್ ಮೂಲಕ ತಲುಪಿಸಲು ಮನವಿ ಮಾಡಲಾಗಿದೆ ಎಂದರು.