ಸರ್ಕಾರಿ ಶಾಲೆಗಳ ಮಕ್ಕಳು ಅಭಿವೃದ್ಧಿಪಡಿಸಿದ ಉಪಗ್ರಹಕ್ಕೆ ಪುನೀತ್ ರಾಜಕುಮಾರ್ ಹೆಸರು

Social Share

ಬೆಂಗಳೂರು,ಫೆ.28- ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರಿ ಶಾಲೆಗಳ ಮಕ್ಕಳೇ ಉಪಗ್ರಹ ಅಭಿವೃದ್ಧಿ ಮಾಡಲಿದ್ದು, ಇದಕ್ಕೆ ಯುವಕರ ಕಣ್ಮಣಿ ನಟ ಪುನೀತ್ ರಾಜಕುಮಾರ್ ಅವರ ಹೆಸರನ್ನೇ ಇಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಮಲ್ಲೇಶ್ವರಂನ 18ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೊತ್ಸಾಹಕ ಸೊಸೈಟಿ (ಕೆಸ್ಟೆಪ್ಸ್) ಮತ್ತು ಭಾರತೀಯ ತಂತ್ರಜ್ಞಾನ ಸಮಾವೇಶ ಒಕ್ಕೂಟ (ಐಟಿಸಿಎ) ಮಾಡಿಕೊಂಡ ಒಡಂಬಡಿಕೆಯನ್ನು ಇದೇ ಸಂದರ್ಭದಲ್ಲಿ ವಿನಿಮಯ ಮಾಡಿಕೊಳ್ಳಲಾಯಿತು.
ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅಂಗವಾಗಿ ಐಟಿಸಿಎ 75 ಉಪಗ್ರಹಗಳನ್ನು ಉಡಾಯಿಸುತ್ತಿದೆ. ಈ ಪೈಕಿ ಒಂದು ಉಪಗ್ರಹವನ್ನು ರಾಜ್ಯ ಸರ್ಕಾರ ಸಹಕಾರದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳು ನಿರ್ಮಿಸುತ್ತಿದ್ದು, ಇದಕ್ಕೆ 1.90 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಉದ್ದೇಶಿತ ಉಪಗ್ರಹವು 1.50 ಕೆ.ಜಿ. ತೂಕವಿರಲಿದ್ದು, ಯೋಜನೆಯ ಗ್ರೌಂಡ್ ಸ್ಟೇಷನ್ ಕೂಡ ಮಲ್ಲೇಶ್ವರದ ಇದೇ ಕಾಲೇಜಿನ ಆವರಣದಲ್ಲಿ ಇರಲಿದೆ. ಎಲ್ಲ ನಿರ್ವಹಣೆಯೂ ಇಲ್ಲಿಂದಲೇ ಆಗಲಿದೆ. ಯೋಜನೆಗೆ 20 ಸರ್ಕಾರಿ ಶಾಲೆಗಳ 100 ಪ್ರತಿಭಾವಂತ ಮಕ್ಕಳನ್ನು ನಾನಾ ಸ್ಪರ್ಧೆ ಮತ್ತು ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.
ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಮಾಜದ ಸಬಲೀಕರಣಕ್ಕೆ ವಿಜ್ಞಾನದ ಆವಿಷ್ಕಾರಗಳಲ್ಲಿ ಪರಿಹಾರೋಪಾಯಗಳಿವೆ. ಆದ್ದರಿಂದ ಯುವಜನರಲ್ಲಿ ಮೊದಲಿನಿಂದಲೇ ವೈಜ್ಞಾನಿಕ ಕುತೂಹಲ ಬೆಳೆಸಬೇಕು ಎಂದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಸ್. ಅಯ್ಯಪ್ಪನ್ , ರಾಜ್ಯ ಸರಕಾರದ ನ್ಯಾನೋ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷ ಡಾ.ನವಕಾಂತ ಭಟ್, ಪ್ರೊ.ಎಚ್.ಎಸ್. ನಾಗರಾಜು, ಡಾ.ಹೇಮಂತಕುಮಾರ್, ಅಶೋಕ್ ರಾಯಚೂರು, ಸೌಮ್ಯಾ ವೈದ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕ ಬಸವರಾಜ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಜ್ಞಾನ ಕಿಟ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

Articles You Might Like

Share This Article