ಪುನೀತ್‍ ರಾಜ್‍ಕುಮಾರ್ ಕೊನೆಯ ಚಿತ್ರ ಜೇಮ್ಸ್ ಟೀಸರ್ ಬಿಡುಗಡೆ

Social Share

ಬೆಂಗಳೂರು, ಫೆ.11- ಇಂದು ಬಿಡುಗಡೆಯಾದ ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಅಭಿನಯದ ಕೊನೆ ಚಿತ್ರವಾದ ಜೇಮ್ಸ್ ಸಿನಿಮಾದ ಟೀಸರ್ ಅಪ್ಪು ಅಭಿಮಾನಿಗಳನ್ನು ಪುಳಕಗೊಳಿಸಿದೆ. ಜನವರಿ 26 ರಂದು ಗಣರಾಜ್ಯೋತ್ಸವದ ಅಂಗವಾಗಿ ಜೇಮ್ಸ್ ಸಿನಿಮಾದ ಮೊದಲ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಸೈನಿಕನ ಗೆಟಪ್‍ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಕ್ರೇಜ್ ಹೆಚ್ಚಿಸಿದ್ದರೆ,ಇಂದು ಜೇಮ್ಸ್ ಚಿತ್ರ ತಂಡವು ಪಿಆರ್‍ಕೆ ಆಡಿಯೋ ಕಂಪೆನಿಯಿಂದ 1 ನಿಮಿಷ 27 ಸೆಕಂಡ್‍ನ ಟೀಸರ್ ಅನ್ನು ಬಿಡುಗಡೆಗೊಳಿಸುವ ಮೂಲಕ ಮತ್ತಷ್ಟು ಪವರ್ ಮೂಡಿಸಿದ್ದು, ಅಪ್ಪುವಿನ ಹುಟ್ಟುಹಬ್ಬವಾದ ಮಾರ್ಚ್ 17ರಂದು ಸಿನಿಮಾ ದೇಶದಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಚೇತನ್‍ಕುಮಾರ್ ಹೇಳಿದ್ದಾರೆ.

ಅಪ್ಪು ಖಡಕ್ ಎಂಟ್ರಿ:
ಜೇಮ್ಸ್ ಚಿತ್ರದ ಟೀಸರ್ ಅನ್ನು ನಿರ್ದೇಶಕ ಚೇತನ್‍ಕುಮಾರ್ ಅವರು ಬಿಡುಗಡೆ ಮಾಡಿದ್ದು, ಸಿನಿಮಾದ ಟೀಸರ್ ನೋಡಿದರೆ ಜೇಮ್ಸ್ ಚಿತ್ರ ಅಪ್ಪುವಿನ ಈ ಹಿಂದಿನ ಚಿತ್ರಗಳಿಗಿಂತ ಬೇರೆ ಲೆವೆಲ್‍ನಲ್ಲಿ ಜೇಮ್ಸ್ ಚಿತ್ರ ಮೂಡಿಬಂದಿದೆ ಎಂದೆನಿಸುತ್ತದೆ. ಟೀಸರ್ ಈಗಾಗಲೇ ಅಪ್ಪು ಅಭಿಮಾನಿಗಳ ಸಂತಸವನ್ನು ಹೆಚ್ಚಿಸಿದ್ದು ಪುನೀತ್‍ರ ಖಡಕ್ ಎಂಟ್ರಿ, ಪವರ್‍ಫುಲ್ಲಾಗಿರುವ ಆ್ಯಕ್ಷನ್ ದೃಶ್ಯಗಳು, ಚೇಸಿಂಗ್, ಗನ್ಸ್, ಅಪ್ಪು ಕುದುರೆಗಳೊಂದಿಗೆ ಪವರ್ ಹಾರ್ಸ್‍ನಂತೆ ಓಡುತ್ತಿರುವ ದೃಶ್ಯಗಳು ಕೂಡ ಥ್ರಿಲ್ಲಿಂಗ್ ಆಗಿದ್ದು ಮಾರ್ಚ್ 17ರವರೆಗೂ ಚಿತ್ರಮಂದಿರ ಹಾಗೂ ಮಲ್ಟಿಫ್ಲೆಕ್ಸ್‍ಗಳಲ್ಲಿ ಈ ಸಿನಿಮಾದ ಟೀಸರ್ ಅನ್ನು ಅಪ್ಪು ಅಭಿಮಾನಿಗಳು ವೀಕ್ಷಿಸಬಹುದಾಗಿದೆ.
ಕೇವಲ ಆ್ಯಕ್ಷನ್, ಸಾಂಗ್ಸ್, ಡ್ಯಾನ್ಸ್ ಅಲ್ಲದೆ ಜೇಮ್ಸ್ ಚಿತ್ರದಲ್ಲಿ ಅಪ್ಪುವಿಗೆ ಪವರ್‍ಫುಲ್ ಡೈಲಾಗ್‍ಗಳಿವೆ ಎಂಬುದು ಟೀಸರ್ ನೋಡಿದರೆ ತಿಳಿಯುತ್ತೆ, ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್ ಅವರ ಎಂಟ್ರಿಯಂತೂ ಅಭಿಮಾನಿಗಳಿಗೆ ಮಸ್ತ್ ಕಿಕ್ ಕೊಡುತ್ತಿದೆ.
# 5 ಭಾಷೆಗಳಲ್ಲಿ ಜೇಮ್ಸ್ ಅಬ್ಬರ:
ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಅಭಿನಯದ ಕೊನೆಯ ಚಿತ್ರವಾದ ಜೇಮ್ಸ್ ಚಿತ್ರ ಮತ್ತೊಂದು ವಿಷಯದಿಂದಲೂ ಸುದ್ದಿಯಾಗಿದೆ, ಯುವರತ್ನ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿದ್ದರೆ, ಜೇಮ್ಸ್ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗುವ ಮೂಲಕ ಅಪ್ಪುವಿನ ಅಭಿಮಾನಿಗಳ ಸಂತಸವನ್ನು ದುಪ್ಪಟ್ಟು ಮಾಡಿದೆ.
# ತ್ರಿಮೂರ್ತಿಗಳ ಸಮಾಗಮ:
ಕನ್ನಡ ಚಿತ್ರರಂಗದ ಮೇರು ನಟ , ಗಾನಗಂಧರ್ವ, ವರನಟ ಡಾ.ರಾಜ್‍ಕುಮಾರ್ ಅವರ ಪುತ್ರರಾದ ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನೀತ್‍ರಾಜ್‍ಕುಮಾರ್‍ರನ್ನು ಒಂದೇ ಚಿತ್ರದಲ್ಲಿ ನೋಡಬೇಕೆಂದು ಅಭಿಮಾನಿಗಳು ಬಯಸಿದ್ದು ಜೇಮ್ಸ್ ಚಿತ್ರವು ಆ ಅವಕಾಶವನ್ನು ಕಲ್ಪಿಸಿದೆ.
ಈ ಸಿನಿಮಾದ ಡಬ್ಬಿಂಗ್ ಕಾರ್ಯಕೈಗೊಳ್ಳುವ ವೇಳೆಗೆ ಪುನೀತ್‍ರಾಜ್‍ಕುಮಾರ್ ನಿಧನರಾಗಿದ್ದರಿಂದ ಅವರ ಪಾತ್ರಕ್ಕೆ ಸೆಂಚುರಿಸ್ಟಾರ್ ಶಿವರಾಜ್‍ಕುಮಾರ್ ಡಬ್ಬಿಂಗ್ ಮಾಡಿರುವುದಲ್ಲದೇ ಶಿವಣ್ಣ ಹಾಗೂ ರಾಘಣ್ಣ ಇಬ್ಬರು ಅಪ್ಪುವಿನೊಂದಿಗೆ ಜೇಮ್ಸ್‍ನಲ್ಲಿ ನಟಿಸಿದ್ದಾರೆ.
ಈಗಾಗಲೇ ಪೋಸ್ಟರ್ ಹಾಗೂ ಟೀಸರ್ ಮೂಲಕ ಗಮನ ಸೆಳೆದಿರುವ ಜೇಮ್ಸ್ ಚಿತ್ರವನ್ನು ನೋಡಲು ಅಭಿಮಾನಿಗಳು ಕಾತರಿಸುತ್ತಿದ್ದರಾದರೂ ಮಾರ್ಚ್ 17ರಂದು ಅಪ್ಪುವಿನ ಜನ್ಮದಿನದವರೆಗೂ ಕಾಯಲೇಬೇಕು.

Articles You Might Like

Share This Article