ಪುನೀತ್ ಪ್ರಥಮ ಪುಣ್ಯಸ್ಮರಣೆಗೆ ಹರಿದುಬಂದ ಅಭಿಮಾನಿ ಸಾಗರ

Social Share

ಬೆಂಗಳೂರು, ಅ.29- ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್ ನಮ್ಮನ್ನೆಲ್ಲ ಆಗಲಿ ಇಂದಿಗೆ ಒಂದು ವರ್ಷ ಕಳೆದೇ ಹೋಯ್ತು. ಆದರೆ ಅವರ ನೆನಪುಗಳು ಪ್ರತಿಯೊಬ್ಬರ ಮನಗಳಲ್ಲಿ ಅಚ್ಚಳಿಯದೆ ಹಾಗೆ ಉಳಿದುಕೊಂಡಿವೆ.

ಕಳೆದ ವರ್ಷ ಇದೇ ತಿಂಗಳು ಇದೇ ದಿನ ಅಚಾನಕ್ಕಾಗಿ ಯಾರಿಗೂ ಹೇಳದೆ ಬಾರದ ಲೋಕಕ್ಕೆ ಪಯಣ ಬೆಳೆಸಿದ ರಾಜಕುಮಾರನಿಗೆ ಮಿಡಿದ ಹೃದಯಗಳು ಅಗಣಿತ. ತಮ್ಮ ಮನೆಯಲ್ಲಿ ಒಬ್ಬ ಸದಸ್ಯರನ್ನು ಕಳೆದುಕೊಂಡಿದ್ದಕ್ಕಿಂತ ಹೆಚ್ಚು ಶೋಕ ವ್ಯಕ್ತಪಡಿಸಿದರು.

ಯಾರೇ ಒಬ್ಬ ಗಣ್ಯ ವ್ಯಕ್ತಿ ಇಹಲೋಕ ತ್ಯಜಿಸಿದಾಗ ಒಂದು ಅಥವಾ ಎರಡು ಮೂರು ತಿಂಗಳೊಳಗೆ ಜನ ಮರೆತು ಹೋಗುತ್ತಾರೆ. ಆದರೆ, ಅಪ್ಪು ವಿಷಯದಲ್ಲಿ ಹಾಗಾಗಲಿಲ್ಲ. ಒಂದು ವರ್ಷ ಕಳೆದರೂ ಮರೆಯಲು ಇಚ್ಛೆ ಪಡದ ಅಭಿಮಾನಿಗಳು, ಪ್ರತಿದಿನ ಪ್ರತಿಕ್ಷಣ ನೆನೆಯುತ್ತಾ ದೊಡ್ಮನೆ ಹುಡುಗನಿಗೆ ಈ ರೀತಿಯ ಸಾವು ನ್ಯಾಯವಲ್ಲ ಎಂದು ಇಂದಿಗೂ ದೇವರನ್ನು ಶಪಿಸುತ್ತಾರೆ.

ಮತ್ತೊಂದು ಮೈಲಿಗಲ್ಲು ಸಾಧಿಸಲು ಇಸ್ರೋ ಸಿದ್ಧತೆ

ಕೆಲ ಅಭಿಮಾನಿಗಳಂತೂ ಜೊತೆಯಲ್ಲಿಯೇ ಪಯಣ ಬೆಳೆಸಿದ್ದು ಉಂಟು. ಅಪ್ಪು ಈಗ ಕೇವಲ ಮಾನವನಲ್ಲ ದೇವಮಾನವ. ಲಕ್ಷಾಂತರ ದೇವರ ಮನೆಗಳಲ್ಲಿ ಪರಮಾತ್ಮನಾಗಿದ್ದಾನೆ. ತನಗಾಗಿ ಗುಡಿ ಗೋಪುರ ಕಟ್ಟಿಸಿಕೊಂಡಿದ್ದಾನೆ. ಪ್ರತಿಯೊಂದು ಊರು, ಬೀದಿ, ಜಾತ್ರೆಗಳಲ್ಲಿ ಕಟೌಟ್‍ಗಳ ಮೂಲಕ ರಾರಾಜಿಸುತ್ತಿದ್ದಾರೆ.

ಕೆಲವು ಜಾತ್ರೆ ತೇರುಗಳಲ್ಲಿ ದೇವರೊಂದಿಗೆ ಅಪ್ಪು ಫೋಟೋ ಇಟ್ಟು ಪೂಜಿಸಿದ್ದೂ ಉಂಟು. ಅಷ್ಟರ ಮಟ್ಟಿಗೆ ಪುನೀತ್ ರಾಜಕುಮಾರ್ ಅಜರಾಮರವಾಗಿ ಕನ್ನಡಿಗರ ಎದೆಯಲ್ಲಿ ಆರದ ಜ್ಯೋತಿಯಾಗಿ ಮಿನುಗುತ್ತಿದ್ದಾರೆ.

ಇಂದು ಮೊದಲ ಪುಣ್ಯಸ್ಮರಣೆಯ ದಿನ. ಕಂಠೀರವ ಸ್ಟುಡಿಯೋದಲ್ಲಿನ ಅವರ ಸ್ಮಾರಕಕ್ಕೆ ಬಗೆಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಡಾ.ರಾಜ್‍ಕುಮಾರ್ ಕುಟುಂಬ ಭಾರವಾದ ಮನಸ್ಸಿನಲ್ಲಿ ಮನೆ ಮಗನ ಮೊದಲ ವರ್ಷದ ಪುಣ್ಯ ಸ್ಮರಣೆ ಪೂಜಾ ವಿಧಾನಗಳನ್ನು ನೆರವೇರಿಸಿತು. ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಇಬ್ಬರು ಪುತ್ರಿಯರು ಅಪ್ಪನನ್ನು ನೆನೆದು ದುಃಖಿಸುತ್ತಾ ಪೂಜಾ ಕಾರ್ಯದಲ್ಲಿ ತೊಡಗಿದ್ದು ಕರಳು ಕಿವಿಚುವಂತಿತ್ತು.

ರಾಘವೇಂದ್ರ ರಾಜ್‍ಕುಮಾರ್, ಶಿವಣ್ಣ, ಗೀತಕ್ಕ ಹೀಗೆ ಕುಟುಂಬದ ಎಲ್ಲಾ ಸದಸ್ಯರು ಪೂಜೆಯಲ್ಲಿ ಭಾಗವಹಿಸಿದ್ದರು. ಲಕ್ಷಾಂತರ ಅಭಿಮಾನಿಗಳು ಸಾಲು ಸಾಲಾಗಿ ಬಂದು ನಮಿಸಿ ಗೋಳಾಡುತ್ತಿದ್ದ ದೃಶ್ಯಗಳು ಕಂಡುಬಂದವು.

ಅಪ್ಪು ಹೆಸರಲ್ಲಿ ಕಳೆದ ಮಧ್ಯರಾತ್ರಿ 12 ರಿಂದ ಇಂದು ರಾತ್ರಿ 12ರ ತನಕ 24 ಗಂಟೆ ಕಾಲ ಗಾಯನ ನಮನ ಕಾರ್ಯಕ್ರಮವನ್ನು ಕಂಠೀರವ ಸ್ಟುಡಿಯೋದಲ್ಲಿ ನಟ ಮತ್ತು ಸಂಗೀತ ನಿರ್ದೇಶಕ ಸಾಧುಕೋಕಿಲ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು, ಸುಗಮ ಸಂಗೀತ, ಅಪ್ಪು ಮತ್ತು ಡಾ.ರಾಜ್‍ಕುಮಾರ್ ಹಾಡುಗಳನ್ನು ಸುಮಾರು ನೂರು ಗಾಯಕರೊಂದಿಗೆ ಹಾಡಿಸಲಾಗುತ್ತಿದೆ. ಅನೇಕ ಚಲನಚಿತ್ರ ನಟರು, ತಂತ್ರಜ್ಞರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿz್ದÁರೆ.

ಕಳೆದ ರಾತ್ರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಶ್ವಿನಿ ಪುನೀತ್ ರಾಜ್‍ಕುಮಾರ್ ಪತಿಯ ಸಮಾಗೆ ನಮಿಸಿ ಬಂದಿದ್ದರು. ಸಮಾಧಿ ಬಳಿ ಲಕ್ಷಾಂತರ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ನಡೆಯುತ್ತಿರುವುದಲ್ಲದೆ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದೆ.

ಬೆಂಗಳೂರು ನಗರವಷ್ಟೇ ಅಲ್ಲದೆ ಪ್ರತಿಯೊಂದು ಊರು ಗಲ್ಲಿಗಳಲ್ಲಿ ಇಂದು ಅಪ್ಪು ಸ್ಮರಣೆ ನಡೆಯುತ್ತಿದೆ. ಅಭಿಮಾನಿಗಳು ಅನ್ನಸಂತರ್ಪಣೆ ಜೊತೆಗೆ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಬಡ ಶಾಲಾ ಮಕ್ಕಳಿಗೆ ಆರ್ಥಿಕ ನೆರವು, ಪುಸ್ತಕಗಳ ವಿತರಣೆಯಂತಹ ನೂರಾರು ಸಮಾಜಸೇವಾ ಕಾರ್ಯಗಳು ಪುನೀತ್ ಅವರ ಹೆಸರಿನಲ್ಲಿ ನಡೆಯುತ್ತಿವೆ.

ಪುನೀತ್ ರಾಜ್‍ಕುಮಾರ್ ಬದುಕಿದ್ದಾಗ ಸಮಾಜಕ್ಕಾಗಿ ಅವರ ಜೀವ ಸದಾ ಮಿಡಿಯುತ್ತಿತ್ತು. ಅದು ಅಂದು ಯಾರಿಗೂ ಗೊತ್ತಾಗಿರಲಿಲ್ಲ. ಸ್ವಂತ ಮನೆಯವರಿಗೂ ಹೇಳಿಕೊಂಡಿರಲಿಲ್ಲ ಅಂದರೆ ಒಂದು ಕೈಯಲ್ಲಿ ಕೊಟ್ಟಿದ್ದು ಮತ್ತೊಂದು ಕೈಗೆ ಗೊತ್ತಾಗಬಾರದು ಎಂದು ನಂಬಿದವರು. ಕೊನೆಯವರೆಗೂ ಹಾಗೆಯೇ ಬದುಕಿದ್ದರು. ಅವರು ಮಾಡಿದ ದಾನ-ಧರ್ಮಕ್ಕೆ ಇಡೀ ಭಾರತ ಶಿರಬಾಗಿ ನಮಿಸಿತ್ತು. ತೆರೆ ಮೇಲೆ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ಪುನೀತ್ ರಾಜ್‍ಕುಮಾರ್ ನಿಜ ಜೀವನದಲ್ಲೂ ಕೊಡಗೈ ದಾನಿಯಾಗಿ, ಕಲಿಯುಗದ ಕರ್ಣನಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಇವರ ಆಸೆ-ಆಶಯ ನಿಲ್ಲಬಾರದೆಂದು ನಟ ಯಶ್, ಪ್ರಕಾಶ್ ರೈ ಮತ್ತು ದಕ್ಷಿಣ ಭಾರತದ ಅನೇಕ ನಟರು ಸಮಾಜ ಕಾರ್ಯಗಳಲ್ಲಿ ಕೈಜೋಡಿಸಿದ್ದಾರೆ. ಅಪ್ಪು ಅಭಿನಯದ ಕೊನೆಯ ಚಿತ್ರ ಗಂಧದಗುಡಿಯಲ್ಲೂ ಸಾಮಾಜಿಕ ಚಿಂತನೆ ಮೆರೆದಿದ್ದಾರೆ. ಗಿಡ ಬೆಳೆಸಿ ಕಾಡನ್ನು ಉಳಿಸಿ ಮುಂದಿನ ಪೀಳಿಗೆ ಸುಖವಾಗಿ ಬದುಕಲು ವನ್ಯ ಸಂಪತ್ತು ಮುಖ್ಯ. ನಾವೆಲ್ಲರೂ ಕೈಜೋಡಿಸಬೇಕು.

ಗರೀಬ್ ಕಲ್ಯಾಣ್ ಯೋಜನೆಗೆ ಬೇಕು 108 ಮಿಲಿಯನ್ ಟನ್ ಆಹಾರ

ಪ್ರಕೃತಿಯೊಂದಿಗೆ ಕಾಲ ಕಳೆದಾಗ ನಮ್ಮನ್ನು ನಾವು ಅರಿತುಕೊಳ್ಳಬಹುದು ಎಂಬ ಮಹತ್ತರ ಸಂದೇಶವನ್ನು ನಮ್ಮನ್ನಗಲಿ ಹೋಗುವಾಗ ಸಾರಿದ್ದಾರೆ. ಈಗ ಅಭಿಮಾನಿಗಳು ಅಪ್ಪು ಹೇಳಿದಂತೆ ಗಿಡಗಳನ್ನು ಹಂಚುವ ಕಾರ್ಯದಲ್ಲಿ ತೊಡಗುತ್ತಾ ನೀಡುವ ಪ್ರಕ್ರಿಯೆಯನ್ನು ಶುರುಮಾಡಿಕೊಂಡಿದ್ದಾರೆ.

ಚಿತ್ರದಲ್ಲಿ ಹಾವಿನ ಸಂದರ್ಭ ಬಂದಾಗ ಮನೆಯಲ್ಲಿ ಹೆಂಡ್ತಿ-ಮಕ್ಕಳಿದ್ದಾರೆ ಎಂದು ಹೇಳುವ ಸಂಭಾಷಣೆ ಪ್ರತಿಯೊಬ್ಬರ ಎದೆಯನ್ನೂ ಕಿವುಚಿ ಕಣ್ಣಾಲೆಗಳನ್ನು ಒದ್ದ ಮಾಡುತ್ತದೆ. ಇದು ಹೋಗುವ ಮುನ್ಸೂಚನೆಯೇ ಎಂದೆನಿಸಿಬಿಡುತ್ತದೆ.

ಯುವರತ್ನನ ಅಗಲಿಕೆ ಇರುವ ತನಕ ಸಂತೋಷದಿಂದ, ಸಾಮರಸ್ಯದಿಂದ ಬದುಕಿ, ಅಬಲರಿಗೆ ನೆರವಾಗುತ್ತಾ ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂಬ ದೊಡ್ಡ ಪಾಠ ಕಲಿಸಿದೆ. ಈಗ ಎಲ್ಲಾ ಕಡೆ ಅಪ್ಪು ಅಂತಹ ದೊಡ್ಡ ಮನುಷ್ಯನೇ ಎಲ್ಲವನ್ನೂ ಬಿಟ್ಟು ಹೋದ. ನಾವು ಅವರ ಧೂಳು ಸಮಾನ. ಯಾವಾಗ ಬೇಕಾದರೂ ಉಸಿರು ನಿಲ್ಲಬಹುದು. ಜೀವನ ನಶ್ವರ ಎಂದು ಹೇಳುತ್ತಾ ತಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಕೊಂಡಿದ್ದಾರೆ.

Articles You Might Like

Share This Article