ಪ್ರಧಾನಿ ಭದ್ರತಾ ಲೋಪ : ಕೇಂದ್ರಕ್ಕೆ ವರದಿ ಕೊಟ್ಟ ಪಂಜಾಬ್, ತನಿಖೆಗೆ ಸಮಿತಿ ರಚನೆ

Social Share

ನವದೆಹಲಿ,ಜ.7- ಪ್ರಧಾನಿ ನರೇಂದ್ರಮೋದಿ ಅವರ ಸುರಕ್ಷತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ಮಹತ್ವದ ಬೆಳವಣಿಗೆಗಳಾಗಿದ್ದು, ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಯಾಗಿದೆ, ಪಂಜಾಬ್ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಸಮಗ್ರ ವರದಿ ನೀಡಿದೆ. ಜೊತೆಗೆ ಕೇಂದ್ರ ಸರ್ಕಾರವು ಮೂವರು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಿದೆ.
ಇದೆಲ್ಲದರ ಹೊರತಾಗಿ ದೇಶಾದ್ಯಂತ ಬಿಜೆಪಿ ಘಟಕಗಳು ಪ್ರಧಾನಿಯವರ ಕ್ಷೇಮಾಭಿವೃದ್ಧಿ ಮತ್ತು ಸುರಕ್ಷತೆಗಾಗಿ ಮಹಾಮೃತ್ಯುಂಜಯ ಜಪ ಸೇರಿದಂತೆ ಹಲವು ಹೋಮಹವನಾದಿಗಳನ್ನು ಹಮ್ಮಿಕೊಂಡಿವೆ. ಲಾಯರ್ ವಾಯ್ಸ್ ಎಂಬ ಸ್ವಯಂಸೇವಾ ಸಂಸ್ಥೆ ಯ ಮಹೇಂದ್ರ ಸಿಂಗ್ ಎಂಬುವರು, ಸುಪ್ರೀಂಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಪ್ರಧಾನಿಯವರ ಸುರಕ್ಷತೆಯಲ್ಲಾಗಿರುವ ಲೋಪಗಳ ಬಗ್ಗೆ ವಿಚಾರಣೆಗೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡಿದೆ.
ಈ ಅರ್ಜಿಯನ್ನು ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನೊಳಗೊಂಡ ವಿಭಾಗೀಯ ಪೀಠ ವಿಚಾರಣೆ ಕೈಗೆತ್ತಿಕೊಂಡಿದೆ. ಪಂಜಾಬ್ ಸರ್ಕಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್‍ಐಆರ್ ದಾಖಲಿಸಿದೆ. ವಿಧಾನಸಭೆ ಚುನಾವಣೆ ಹಿನ್ನೆಯಲ್ಲಿ ಜ.5ರಂದು ಬಿಜೆಪಿ ಘಟಕ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಭಾಗವಹಿಸಲು ಪ್ರಧಾನಿ ಪಂಜಾಬ್‍ಗೆ ಆಗಮಿಸಿದ್ದರು.
ಆದರೆ ರೈತರ ಪ್ರತಿಭಟನೆಯಿಂದಾಗಿ ಫಿರೋಜಾಪುರ್ ಫ್ಲೈಓವರ್ ಮೇಲೆ 20 ನಿಮಿಷಗಳ ಕಾಲ ಪ್ರಧಾನಿ ಅವರು ಸಿಲುಕಿಕೊಂಡಿದ್ದರು. ಅವರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಖಾಸಗಿ ವಾಹನಗಳು ಕೂಡ ಅವರ ಸಮೀಪ ಧಾವಿಸಿದವು. ಕೊನೆಗೆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದೆ ವಾಪಸ್ಸಾದ ನರೇಂದ್ರ ಮೋದಿ ಅವರು, ತಾವು ಜೀವಂತವಾಗಿ ಮರಳಿದ್ದಕ್ಕಾಗಿ ನಿಮ್ಮ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿ ಎಂದು ಪಂಜಾಬ್ ಅಧಿಕಾರಿಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದರು. ಈ ಘಟನೆ ದೇಶಾದ್ಯಂತ ಬಾರೀ ವಿವಾದ ಹುಟ್ಟು ಹಾಕಿದೆ.
ಹೆಲಿಕಾಪ್ಟರ್‍ನಲ್ಲಿ ಪ್ರಯಾಣಿಸುವುದಾಗಿ ಹೇಳಿದ್ದ ಪ್ರಧಾನಿಯವರು ಕೊನೆ ಕ್ಷಣದಲ್ಲಿ ರಸ್ತೆ ಮಾರ್ಗವಾಗಿ ಆಗಮಿಸಿದ್ದಾರೆ. ರೈತರು ಏಕಾಏಕಿ ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ತೆರವುಗೊಳಿಸುವುದು ಕಷ್ಟವಾಗಿದೆ ಎಂದು ಪಂಜಾಬ್ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ.
ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗಿಲ್ಲ. ಮಾರ್ಗ ಬದಲಾವಣೆಯಿಂದಾಗಿ ಗೊಂದಲ ಉಂಟಾಗಿದೆ ಎಂದು ಪಂಜಾಬ್‍ನ ಮುಖ್ಯ ಕಾರ್ಯದರ್ಶಿ ಅನಿರುದ್ಧ್ ತಿವಾರಿ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಪಂಜಾಬ್ ಸರ್ಕಾರ ಘಟನೆಯ ತನಿಖೆಗಾಗಿ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಮಹೆತಾಬ್ ಸಿಂಗ್ ಗಿಲ್ ನೇತೃತ್ವದಲ್ಲಿ ಗೃಹ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಅನುರಾಗ್ ವರ್ಮ ನೇತೃತ್ವದಲ್ಲಿ ಉನ್ನತ ಸಮಿತಿಯೊಂದನ್ನು ರಚಿಸಲಾಗಿದೆ. ಘಟನೆ ಸಂಬಂಧ ಇಂದು ಹೊಸದಾಗಿ ಸಂಬಂಧಪಟ್ಟಂತೆ ಎಫ್‍ಐಆರ್ ಕೂಡ ದಾಖಲಾಗಿದೆ.
ಕೇಂದ್ರ ಗೃಹ ಸಚಿವಾಲಯ ಘಟನೆಯ ತನಿಖೆಗೆ ಮೂವರು ಹಿರಿಯ ಅಕಾರಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ. ಸಮಿತಿಯಲ್ಲಿ ಸಂಪುಟ ಹಾಗೂ ಭದ್ರತಾ ವಿಭಾಗದ ಕಾರ್ಯದರ್ಶಿ ಸುೀರ್‍ಕುಮಾರ್ ಸಕ್ಸೇನ, ಗುಪ್ತದಳದ ಜಂಟಿ ನಿರ್ದೇಶಕ ಬಲಬೀರ್ ಸಿಂಗ್, ಎಸ್‍ಪಿಜಿಯ ಐಜಿ ಎಸ್.ಸುರೇಶ್ ಅವರು ತನಿಖಾ ಸಮಿತಿಯಲ್ಲಿದ್ದಾರೆ.
ಇದು ಅತಿಗಣ್ಯರ ಸುರಕ್ಷತಾ ಸಮಸ್ಯೆಗಳ ಕುರಿತು ಪುನರ್ ಪರಿಶೀಲನೆ ನಡೆಸಲಿದೆ. ಈ ನಡುವೆ ದೇಶಾದ್ಯಂತ ಪ್ರಧಾನಿಗಳ ಸುರಕ್ಷತೆಗಾಗಿ ಹೋಮವನಗಳು ನಡೆದಿವೆ. ಹರಿಯಾಣದ ಮುಖ್ಯಮಂತ್ರಿ ಮನೋಹರ್‍ಲಾಲ್ ಕಟ್ಟರ್, ಪಂಚಕುಲದಲ್ಲಿನ ಮಾತಾ ಮಾನಸ ದೇವಿ ದೇವಾಲಯದಲ್ಲಿ ಪ್ರಧಾನಿಗಾಗಿ ಮೃತ್ಯುಂಜಯ ಜಪ ಮಾಡಿದ್ದಾರೆ.
ಚೆನ್ನೈನಲ್ಲಿ ಬಿಜೆಪಿ ಮಹಿಳಾ ಘಟಕ ಕಪಿಲೇಶ್ವರ ದೇವಸ್ಥಾನದಲ್ಲಿ ನಿನ್ನೆ ರಾತ್ರಿಯೇ ವಿಶೇಷ ಪೂಜೆ ಸಲ್ಲಿಸಿದೆ. ದೆಹಲಿ ಬಿಜೆಪಿ ಘಟಕ ಕೂಡ ಮೃತ್ಯುಂಜಯ ಹೋಮ ನಡೆಸಿದೆ.

Articles You Might Like

Share This Article