ಚಂಡೀಗಢ, ಜ.6- ಪಂಜಾಬ್ ಸರ್ಕಾರವು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಭೇಟಿ ನೀಡಿದ ಸಂದರ್ಭದಲ್ಲಿ ಭದ್ರತಾ ಲೋಪಗಳಾಗಿವೆಯೇ ಎಂಬ ಬಗ್ಗೆ ತನಿಖೆ ನಡೆಸಲು ಇಂದು ಉನ್ನತಾಧಿಕಾರ ಸಮಿತಿಯನ್ನು ನೇಮಿಸಿದೆ ಎಂದು ಓರ್ವ ಅಧಿಕೃತವಕ್ತಾರ ತಿಳಿಸಿದ್ದಾರೆ.
ಒಂದು ಬಾರಿ ಭದ್ರತಾ ಲೋಪವಾಗಿ ಪ್ರಧಾನಿಯವರ ಬೆಂಗಾವಲು ವಾಹನಗಳು ಫಿರೋಜ್‍ಪುರರದಲ್ಲಿ ನಡೆಸಿದ ರಸ್ತೆ ತಡೆಯಿಂದಾಗಿ ಫ್ಲೈ ಓವರ್ ಒಂದರ ಮೇಲೆಯೇ ಸಿಲುಕಿಕೊಳ್ಳುವಂತಾಗಿ ಬಳಿಕ ಮೋದಿ ಅವರು ಚುನಾವಣೆ ನಡೆಯಬೇಕಿರುವ ಪಂಜಾಬ್‍ನಲ್ಲಿನ ರ್ಯಾಲಿ ಸೇರಿದಂತೆ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ವಾಪಸಾಗಬೇಕಾಯಿತು.
ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ತತ್‍ಕ್ಷಣವೇ ಒಂದು ವರದಿ ಸಲ್ಲಿಸಲು ಸೂಚಿಸಿದೆ. ಅಗತ್ಯವಿರುವಷ್ಟು ಭದ್ರತಾ ಸಿಬ್ಬಂದಿ ನಿಯೋಜಿಸಿರಲಿಲ್ಲ ಎಂದು ಅದು ಹೇಳಿದೆ.
ಇಂಥ ಕರ್ತವ್ಯಲೋಪವು ಪ್ರಧಾನಿಯವರ ಭೇಟಿಯ ಸಂದರ್ಭದಲ್ಲಿ ನಡೆದರೆ ಅದು ಖಂಡಿತವಾಗಿಯೂ ಅಂಗೀಕಾರಾರ್ಹವಲ್ಲ ಮತ್ತು ಇದಕ್ಕೆ ಉತ್ತರ ಕೇಳಬೇಕಾಗುತ್ತದೆ ಎಂದು ಗೃಹ ಸಚಿವ ಅಮಿತ್ ಷಾ ಅವರು ಹೇಳಿದ್ದಾರೆ.
ಆದಾಗ್ಯೂ ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಅವರು ಯಾವುದೇ ರ್ಕವ್ಯಲೋಪ ಆಗಿಲ್ಲ ಮತ್ತು ಇದರ ಹಿಂದೆ ಯಾವುದೇ ರಾಜಕೀಯ ದುರುದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಸರ್ಕಾರ ಯಾವುದೇ ತನಿಖೆ-ವಿಚಾರಣೆಗೆ ಸಿದ್ಧವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
