ಚಂಡೀಗಢ,ಫೆ.20- ಪಂಜಾಬ್ ವಿಧಾನಸಭೆಯ 117 ಕ್ಷೇತ್ರಗಳಿಗೆ ಇಂದು ಬಿಗಿ ಭದ್ರತೆಯ ಮತದಾನ ನಡುವೆ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಗೆ ಆರಂಭವಾದ ಮತದಾನ ಕ್ರಮೇಣ ಬಿರುಸಾಯಿತು. 93 ಮಹಿಳೆಯರು ಮತ್ತು ಇಬ್ಬರು ತೃತೀಯ ಲಿಂಗಿಗಳೂ ಸೇರಿದಂತೆ ಒಟ್ಟು 1,304 ಅಭ್ಯರ್ಥಿಗಳು ಪ್ರತಿಷ್ಠಿತವೆನಿಸಿರುವ ಈ ಚುನಾವಣೆಯಲ್ಲಿ ಕಣದಲ್ಲಿದ್ದಾರೆ.
24,740 ಮತಗಟ್ಟೆಗಳಿದ್ದು, ಇವುಗಳಲ್ಲಿ 2,013 ಅನ್ನು ಅತಿ ಸೂಕ್ಷ್ಮ ಮತ್ತು 2,952 ಅನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.
1,02,00,996 ಮಹಿಳೆಯರೂ ಸೇರಿದಂತೆ ಒಟ್ಟು 2,14,99,804 ಮತದಾರರು ಮತದಾನದ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.
ಪಂಜಾಬ್ ಈ ಬಾರಿ ಬಹುಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ. ಕಾಂಗ್ರೆಸ್, ಎಸ್‍ಎಡಿ-ಎಎಪಿ, ಬಿಜೆಪಿ-ಪಿಎಲ್‍ಸಿ- ಎಸ್‍ಎಡಿ (ಸಂಯುಕ್ತ) ಮತ್ತು ಸಂಯುಕ್ತ ಸಮಾಜ್ ಮೋರ್ಚಾ ( ವಿವಿಧ ಮಾಜಿ ಸಂಸ್ಥೆಗಳ ರಾಜಕೀಯ ವೇದಿಕೆ) ಈ ಸಲ ಸ್ಪರ್ಧೆಗಿಳಿಸಿವೆ.
# ಉತ್ತರಪ್ರದೇಶದಲ್ಲೂ ಬಿರುಸಿನ ಮತದಾನ:
ಲಕ್ನೋವರದಿ: ಉತ್ತರ ಪ್ರದೇಶದ 16 ಜಿಲ್ಲೆಗಳಲ್ಲಿ ಹರಡಿಕೊಂಡಿರುವ 59 ವಿಧಾನಸಭಾ ಕ್ಷೇತ್ರಗಳಿಗೂ ಇಂದು ಬಿರುಸಿನ ಮತದಾನ ನಡೆಯಿತು.
ರಾಜ್ಯದಲ್ಲಿ ಇದು ಮೂರನೇ ಹಂತದ ಮತದಾನದವಾಗಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಹೊತ್ತೇರುತ್ತಿದ್ದಂತೆ ಬಿರುಸು ಪಡೆಯಿತು.
2.15 ಕೋಟಿ ಮತದಾರರು ಈ ಹಂತದಲ್ಲಿ 627 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ರಾಜ್ಯದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.
# ಪ್ರಧಾನಿ ಕರೆ:
ಪಂಜಾಬ್ ವಿಧಾನಸಭೆಗೆ ಒಂದು ಹಂತದಲ್ಲಿ ಮತ್ತು ಉತ್ತರ ಪ್ರದೇಶ ವಿಧಾನಸಭೆ ಮೂರನೇ ಹಂತದ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ವ್ಯಾಪಕವಾಗಿ ಮತದಾನ ಮಾಡುವಂತೆ ಮತದಾರರಿಗೆ ಅದರಲ್ಲೂ ಮೊದಲ ಬಾರಿ ಮತ ಚಲಾಯಿಸುವವರಿಗೆ ಕರೆ ನೀಡಿದರು.
# ರಾಹುಲ್ ಮನವಿ:
ಹೆದರದೆ ಉತ್ತರಗಳನ್ನು ನೀಡುವವರಿಗೆ ಮತ ಹಾಕುವಂತೆ ಪಂಜಾಬ್ ಮತದಾರರಿಗೆ ಕಾಂಗ್ರೆಸ್ ಧುರೀಣ ರಾಹುಲ್‍ಗಾಂಧಿ ಮನವಿ ಮಾಡಿದರು. ಮೂರನೇ ಹಂತದ ಮತದಾನ ನಡೆದ ಉತ್ತರ ಪ್ರದೇಶದ ಮತದಾರರೂ ಕೂಡ ಅಭಿವೃದ್ಧಿಗಾಗಿ ಹೊಸ ಸರ್ಕಾರವನ್ನು ಅಧಿಕಾರಕ್ಕೆ ತರುವಂತೆ ಅವರು ವಿನಂತಿಸಿದರು.
