ಪುರಿ, ಫೆ.21- ಒಡಿಶಾದ ಪುರಿಯಲ್ಲಿರುವ ಜಗನ್ನಾಥ ಮಂದಿರಕ್ಕೆ ಈಗ ಎರಡು ಬಾರಿ ಲಸಿಕೆ ಹಾಕಿಸಿಕೊಂಡ ಸರ್ಟಿಫಿಕೆಟ್ ಮತ್ತು ಆರ್ಟಿಪಿಸಿಆರ್ ಕೋವಿಡ್ ನೆಗೆಟಿವ್ ವರದಿ ಇಲ್ಲದೆಯೂ ಭಕ್ತಾದಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ ಎಂದು ಆಡಳಿತವು ಇಂದು ಪ್ರಕಟಿಸಿದೆ.
ಕೋವಿಡ್ ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.
ಈ ಮುನ್ನ ಭಕ್ತಾದಿಗಳು ಡಬಲ್ ಲಸಿಕೆ ಪ್ರಮಾಣ ಪತ್ರಗಳು ಅಥವಾ ಆರ್ಟಿಪಿಸಿಆರ್ ನೆಗೆಟಿವ್ ವರದಿಗಳನ್ನು ದೇವಾಲಯ ಪ್ರವೇಶಿಸುವ 72 ಗಂಟೆಗಳ ಒಳಗೆ ಪಡೆದುಕೊಳ್ಳಬೇಕಾಗಿತ್ತು.
ಭಕ್ತಾದಿಗಳಿಗೆ ವಾರದ ಎಲ್ಲ ದಿನಗಳು ಭಾನುವಾರ ಹೊರತುಪಡಿಸಿ ಬೆಳಗ್ಗೆ 6 ರಿಂದ ರಾತ್ರಿ 9 ಗಂಟೆ ತನಕ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಭಾನುವಾರದ ದಿನ ಸ್ಯಾನಿಟೈಸೇಷನ್ಗೆ ದೇವಾಲಯವನ್ನು ಮುಚ್ಚಲಾಗುವುದು ಎಂದು ಶ್ರೀ ಜಗನ್ನಾಥ ದೇವಾಲಯ ಆಡಳಿತ ನೀಡಿರುವ ನೂತನ ಆದೇಶದಲ್ಲಿ ತಿಳಿಸಿದೆ.
ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಲಿದೆ ಎಂದು ಅದು ಹೇಳಿದೆ. ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗುವುದು. ಕ್ಯೂನಲ್ಲಿ ಕಾದು ನಿಂತ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸನ್ನಿವೇಶವನ್ನು ಆಧರಿಸಿ ಕಾಲದಿಂದ ಕಾಲಕ್ಕೆ ಪರಿಷ್ಕøತ ಸೂಚನಗಳನ್ನು ನೀಡಲಾಗುವುದು ಎಂದು ಎಸ್ಜೆಟಿಎ ಮುಖ್ಯ ಆಡಳಿತಾಕಾರಿ ಕೃಷ್ಣಕುಮಾರ್ ವಿವರಿಸಿದ್ದಾರೆ.
