ಬೆಂಗಳೂರು,ಅ.11-ಅತಿವೇಗ, ಅಜಾಗರೂಕತೆ ಯಿಂದ ಕಾರು ಚಾಲನೆ ಮಾಡಿಕೊಂಡು ಪುಟ್ ಪಾತ್ ಮೇಲೆ ನುಗ್ಗಿ ಐದು ಮಂದಿಗೆ ಡಿಕ್ಕಿ ಹೊಡೆದ ಪರಿಣಾಮ ಸೆಕ್ಯುರಿಟಿ ಗಾರ್ಡ್ ಮೃತಪಟ್ಟಿರುವ ಘಟನೆ ಹೆಬ್ಬಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ಸಂಭವಿಸಿದೆ. ತಿಂಡ್ಲುವಿನ ನಿವಾಸಿ ರವಿಶಂಕರ್ ರಾವ್(59) ಮೃತಪಟ್ಟ ಸೆಕ್ಯುರಿಟಿ ಗಾರ್ಡ್.
ಅಪಘಾತದಲ್ಲಿ ಕಾರು ಚಾಲಕ ಸೇರಿದಂತೆ ಐದು ಮಂದಿ ಗಾಯಗೊಂಡಿದ್ದಾರೆ, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ರಾತ್ರಿ 11.45ರ ಸುಮಾರಿನಲ್ಲಿ ಕೊಡಿಗೆಹಳ್ಳಿ ಮುಖ್ಯರಸ್ತೆಯಲ್ಲಿರುವ ದಮ್ ಬಿರಿಯಾನಿ ಹೋಟೆಲ್ ಬಳಿಯ ಫುಟ್ಪಾತ್ನಲ್ಲಿ ಮೂವರು ನಿಂತುಕೊಂಡು ಮಾತನಾಡುತ್ತಿದ್ದರು.
ಆ ಸಂದರ್ಭದಲ್ಲಿ ಅತಿವೇಗ, ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿಕೊಂಡು ಈ ಮಾರ್ಗದಲ್ಲಿ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪುಟ್ ಪಾತ್ ಮೇಲೆ ಹತ್ತಿ ಅಲ್ಲಿದ್ದವರಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಘಟನೆಯಿಂದಾಗಿ ತೀವ್ರವಾಗಿ ಗಾಯಗೊಂಡ ಸೆಕ್ಯೂರಿಟಿ ಗಾರ್ಡ್ ರವಿಶಂಕರ್ ರಾವ್ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನೆಯಲ್ಲಿ ಪುಟ್ಪಾತ್ನಲ್ಲಿ ನಿಂತಿದ್ದ ಮಂಜುನಾಥ, ನವೀನ್ಕುಮಾರ್ ತೀವ್ರ ಗಾಯಗೊಂಡಿದ್ದು, ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ರಘು, ಪ್ರಕಾಶ್ ಹಾಗೂ ಕಾರು ಚಾಲಕ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅತಿ ವೇಗ, ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ವೆಂದು ಸ್ಥಳೀಯರು ದೂರಿದ್ದಾರೆ. ಚಾಲಕ ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿಕೊಂಡು ಬಂದು ಅಪಘಾತವೆಸಗಿದ್ದಾನೆಯೇ ಎಂಬ ಶಂಕೆ ಹಿನ್ನೆಲೆಯಲ್ಲಿ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.