ಬೆಂಗಳೂರು, ಮಾ.4- ಗುಂಡ್ಲುಪೇಟೆ ಬಳಿ ಕಲ್ಲು ಕ್ವಾರಿಯಲ್ಲಿ ಗುಡ್ಡ ಕುಸಿದು ಐವರು ಕಾರ್ಮಿಕರು ಸಿಲುಕಿಕೊಂಡಿದ್ದು, ಒಬ್ಬಾತನನ್ನು ಪೊಲೀಸರು ರಕ್ಷಿಸಿದ್ದಾರೆ. ಉಳಿದವರ ರಕ್ಷಣಾ ಕಾರ್ಯ ಮುಂದುವರಿದಿದೆ.
ಮಧ್ಯಾಹ್ನ 1.30ರಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಮಡಹಳ್ಳಿ ಸಮೀಪ ಬಿಳಕಲ್ ಗುಡ್ಡದ ಬಳಿ ಇಟಾಚಿ ವಾಹನ ಹಾಗೂ ಟಿಪ್ಪರ್ ಲಾರಿಯನ್ನು ನಿಲ್ಲಿಸಿಕೊಂಡು ಕಲ್ಲುಕ್ವಾರಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಗುಡ್ಡ ಕುಸಿದಿದೆ.
ಪರಿಣಾಮವಾಗಿ ಐದು ಮಂದಿ ಸಿಲುಕಿಕೊಂಡಿದ್ದು, ಸುದ್ದಿ ತಿಳಿದ ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಕೈಗೊಂಡು ಇಟಾಚಿ ವಾಹನದ ಚಾಲಕನನ್ನು ರಕ್ಷಿಸಿದ್ದಾರೆ.
ಇನ್ನುಳಿದ ಕಾರ್ಮಿಕರ ರಕ್ಷಣಾಕಾರ್ಯ ಮುಂದುವರಿದಿದ್ದು, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿದ್ದಾರೆ.
