ಸಕ್ಸಸ್ ಆಗುತ್ತಾ ಸಿಎಂ ಸಂಧಾನ, ಬಗೆಹರಿಯುತ್ತಾ ಅಶೋಕ್‍-ಅಶ್ವತ್ಥನಾರಾಯಣ ನಡುವಿನ ಬಿಕ್ಕಟ್ಟು?

ಬೆಂಗಳೂರು, ಸೆ.16-ನಿರೀಕ್ಷಿತ ಸ್ಥಾನಮಾನ ಸಿಗದೆ ಮುನಿಸಿಕೊಂಡಿರುವ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಮುಂದಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಉಭಯ ನಾಯಕರನ್ನು ತಮ್ಮ ಮನೆಗೆ ಆಹ್ವಾನಿಸಲಿರುವ ಸಿಎಂ ಬಿಎಸ್‍ವೈ, ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅಪಸ್ವರವಿಲ್ಲದಂತೆ ನಡೆದುಕೊಂಡು ಹೋಗುವಂತೆ ಸೂಚಿಸಲಿದ್ದಾರೆ.

ಈಗಾಗಲೇ ಅಶೋಕ್ ಮತ್ತು ಅಶ್ವತ್ಥನಾರಾಯಣ ಅವರಿಗೆ ದೂರವಾಣಿ ಕರೆ ಮಾಡಿರುವ ಸಿಎಂ, ಬುಧವಾರ ತಮ್ಮ ಮನೆಗೆ ಬಂದು ಮಾತುಕತೆ ನಡೆಸಬೇಕು.
ಇನ್ನೆಲ್ಲ ಅಧಿಕೃತ ಕಾರ್ಯಕ್ರಮಗಳನ್ನು ಬದಿಗೊತ್ತಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.  ಅಶೋಕ್ ಮತ್ತು ಅಶ್ವತ್ಥನಾರಾಯಣ ಅವರ ಮುನಿಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಮಾಧ್ಯಮಗಳಲ್ಲೂ ಕೂಡ ಇದು ಅತಿಯಾಗಿ ವೈಭವೀಕರಣಗೊಳ್ಳುತ್ತಿರುವುದರಿಂದ ಸರ್ಕಾರ ಹಾಗೂ ಪಕ್ಷಕ್ಕೆ ಹಾನಿಯಾಗಬಹುದೆಂಬ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಇಬ್ಬರ ನಡುವಿನ ಮುನಿಸನ್ನು ಶಮನಗೊಳಿಸಲು ಪ್ರಯತ್ನಕ್ಕೆ ಖುದ್ದು ಮುಖ್ಯಮಂತ್ರಿಯವರೇ ಕೈ ಹಾಕಿದ್ದಾರೆ. ಅಲ್ಲದೆ ಇದೇ 27 ರಂದು ಪ್ರತಿಷ್ಠಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ ನಡೆಯಲಿದೆ.

ರಾಜ್ಯದಲ್ಲಿ ತಮ್ಮ ಪಕ್ಷವೇ ಅಧಿಕಾರದಲ್ಲಿರುವುದರಿಂದ ಪಾಲಿಕೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಈಗಾಗಲೇ ಮುಖ್ಯಮಂತ್ರಿಯವರು ಸೂಚನೆ ಕೊಟ್ಟಿದ್ದಾರೆ. ಅಶೋಕ್ ಮತ್ತು ಅಶ್ವತ್ಥನಾರಾಯಣ ನಡುವಿನ ವೈಮನಸ್ಯ ನಡೆಯಲಿರುವ ಮೇಯರ್-ಉಪಮೇಯರ್ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಹಿನ್ನೆಲೆಯಲ್ಲಿ ಯಡಿಯೂರಪ್ಪ ಇಬ್ಬರ ನಡುವೆ ಸಂಧಾನ ನಡೆಸಲು ಮುಂದಾಗಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಅಶ್ವತ್ಥನಾರಾಯಣಗೆ ಪ್ರಬಲವಾದ ಉನ್ನತ ಶಿಕ್ಷಣ ಹಾಗೂ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ಇದು ಸಹಜವಾಗಿ ಅಶೋಕ್ ಅವರ ಕಣ್ಣು ಕೆಂಪಾಗಿಸಿತ್ತು. ತಮಗಿಂತಲೂ ಕಿರಿಯರಾದ ಅಶ್ವತ್ಥನಾರಾಯಣಗೆ ಡಿಸಿಎಂ ಪಟ್ಟ ನೀಡಿದ್ದರಿಂದ ಮುನಿಸಿಕೊಂಡಿದ್ದರು.

ಇತ್ತೀಚೆಗೆ ಮುಖ್ಯಮಂತ್ರಿಯವರು ಬೆಂಗಳೂರು ನಗರ ವೀಕ್ಷಣೆಗೆ ಹೊರಟ ವೇಳೆ ಒಂದೇ ಬಸ್‍ನಲ್ಲಿ ತೆರಳಿದರೂ ಅಶ್ವತ್ಥನಾರಾಯಣ ಮತ್ತು ಅಶೋಕ್ ನಾನೊಂದು ತೀರ, ನೀನೊಂದು ತೀರ ಎಂಬಂತಿದ್ದರು. ಜೊತೆಗೆ ಬೆಂಗಳೂರಿಗೆ ಸಂಬಂಧಿಸಿದಂತೆ ಯಾವುದೇ ವಿಷಯದಲ್ಲೂ ಉಭಯ ನಾಯಕರ ನಡುವೆ ಹೊಂದಾಣಿಕೆ ಕಂಡುಬರಲಿಲ್ಲ. ತಮ್ಮ ಪಾಡಿಗೆ ತಾವು ಇಲಾಖೆ ಕೆಲಸವನ್ನು ನಿಭಾಯಿಸುವತ್ತ ಮಗ್ನರಾಗಿದ್ದರು.

ಉಭಯ ನಾಯಕರು ಮುನಿಸಿಕೊಂಡರೆ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿಯ ಲಾಭ ಪಡೆಯಬಹುದೆಂಬ ಕಾರಣದಿಂದಾಗಿ ಇಬ್ಬರನ್ನು ಪರಸ್ಪರ ಮುಖಾಮುಖಿ ಭೇಟಿ ಮಾಡಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನಕ್ಕೆ ಖುದ್ದು ಯಡಿಯೂರಪ್ಪ ಕೈ ಹಾಕಿದ್ದಾರೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾಲವೇ ನಿರ್ಣಯಿಸಬೇಕು.