ಸುತ್ತೂರು ಶ್ರೀಗಳ ಸಮ್ಮುಖದಲ್ಲೇ ಸೋಮಣ್ಣ-ಅಶೋಕ್ ಕಿತ್ತಾಟ..!
ಬೆಂಗಳೂರು,ಮಾ.17- ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸಮ್ಮುಖದಲ್ಲೇ ಬಿಜೆಪಿಯ ಇಬ್ಬರು ನಾಯಕರು ಪರಸ್ಪರ ಕಾಲೆಳೆದುಕೊಂಡು ಮುಜುಗರಕ್ಕೀಡಾದ ಪ್ರಸಂಗ ಇಂದು ಜರುಗಿತು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ತೇಜಸ್ವಿನಿ ಅನಂತಕುಮಾರ್ ಅವರ ಜೊತೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆಯಲು ತೆರಳಿದ್ದರು.
ಈ ವೇಳೆ ಬಿಜೆಪಿ ಮುಖಂಡರಾದ ಆರ್.ಅಶೋಕ್ ಮತ್ತು ವಿ.ಸೋಮಣ್ಣ ಸೇರಿದಂತೆ ಮತ್ತಿತರ ಧುರೀಣರು ತೆರಳಿದ್ದರು. ಶ್ರೀಗಳಿಂದ ಆಶೀರ್ವಾದ ಪಡೆದ ನಂತರ ಕುಶಲೋಪರಿ ವಿಚಾರಿಸುತ್ತಿದ್ದ ವೇಳೆ ವಿ.ಸೋಮಣ್ಣ , ಅಶೋಕ್ ಅವರ ಕಾಲೆಳೆಯಲು ಮುಂದಾದರು. ಲೋಕಸಭೆ ಚುನಾವಣೆಯನ್ನು ನಾವು ಚಕ್ರವರ್ತಿ ನೇತೃತ್ವದಲ್ಲೇ ಎದುರಿಸುತ್ತಿದ್ದೇವೆ. ಎಲ್ಲವೂ ಅವರ ಮಾರ್ಗದರ್ಶನದಲ್ಲೇ ನಡೆಯುತ್ತದೆ ಎಂದು ಕಿಚಾಯಿಸಿದರು.
ಚಕ್ರವರ್ತಿಗೆ ಎಲ್ಲವೂ ಇದೆ. ಆದರೆ ಮುನ್ನುಗ್ಗುವ ಧೈರ್ಯ ಇಲ್ಲ. ಧೈರ್ಯದಿಂದ ಮುನ್ನುಗ್ಗಿದ್ದರೆ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಿದ್ದರು ಎಂದು ಟಾಂಗ್ ನೀಡಿದರು. ಇದಕ್ಕೆ ಅಷ್ಟೇ ಸೌಮ್ಯವಾಗಿ ತಿರುಗೇಟು ನೀಡಿದ ಅಶೋಕ್ ಹಾಗೇನಿಲ್ಲ ಸ್ವಾಮೀಜಿ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಪಕ್ಷದಲ್ಲಿ ನನಗೆ ಸಿಗಬೇಕಾದ ಸ್ಥಾನಮಾನ ಸಿಕ್ಕಿದೆ.
ಒಳ್ಳೆಯದಾದರೆ ಎಲ್ಲರೂ ನನಗೆ ಜೈ ಜೈ ಎನ್ನುತ್ತಾರೆ. ಒಂದು ವೇಳೆ ಹೆಚ್ಚು ಕಮ್ಮಿಯಾದರೆ ನನ್ನ ತಲೆಗೆ ಕಟ್ಟುತ್ತಾರೆ. ಪಕ್ಷ ವಹಿಸುವ ಜವಾಬ್ದಾರಿಯನ್ನು ಶಿರಸಾ ವಹಿಸಿ ಕೆಲಸ ಮಾಡುತ್ತೇವೆ.ನಾನು ಯಾವ ಚಕ್ರವರ್ತಿಯೂ ಅಲ್ಲ ಮಹಾರಾಜನು ಅಲ್ಲ ಎಂದು ಶ್ರೀಗಳ ಸಮ್ಮುಖದಲ್ಲೇ ಸೋಮಣ್ಣಗೆ ಟಾಂಗ್ ನೀಡಿದರು.