ಸರ್ಕಾರಿ ಭೂ ಮಂಜೂರಾತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Social Share

ಬೆಂಗಳೂರು, ಫೆ.16- ಸರ್ಕಾರಿ ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸುವ ಕಾಲಾವಧಿಯನ್ನು ಒಂದು ವರ್ಷಗಳ ಕಾಲ ವಿಸ್ತರಣೆ ಮಾಡುವ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಹೊಬಳಿ ಶಾಂತಗ್ರಾಮದ ಭೂ ಅಕ್ರಮಗಳನ್ನು ಭ್ರಷ್ಟಾಚಾರ ನಿಗ್ರಹ ದಳದಿಂದ ತನಿಖೆ ನಡೆಸುವ ಮಹತ್ವದ ನಿರ್ಣಯಗಳನ್ನು ಕಂದಾಯ ಸಚಿವ ಆರ್.ಅಶೋಕ್ ವಿಧಾನ ಪರಿಷತ್ ನಲ್ಲಿಂದು ಘೋಷಣೆ ಮಾಡಿದರು.
ಪ್ರತಿಪಕ್ಷಗಳ ಧರಣಿಯ ನಡುವೆಯೇ ಸಭಾಪತಿ ಅವರು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡರು. ಕಾಂಗ್ರೆಸ್ ಸದಸ್ಯರು ಧರಣಿ ನಡೆಸುತ್ತಿದ್ದರಿಂದ ಪ್ರಶ್ನೋತ್ತರದಿಂದ ದೂರ ಉಳಿದು, ಸಚಿವ ಈಶ್ವರಪ್ಪ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಆಡಳಿತ ಪಕ್ಷದ ಸದಸ್ಯ ಹಣುಮಂತ ನಿರಾಣಿ ಅವರ ಪ್ರಶ್ನೆಗೆ ಉತ್ತರ ನೀಡಿದ ಕಂದಾಯ ಸಚಿವ ಆರ್.ಅಶೋಕ್ ಅವರು, ದರ್ಕಾಸ್ತು ಸರ್ಕಾರಿ ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಮತ್ತೆ ಒಂದು ವರ್ಷಗಳ ಕಾಲ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕು ಸೂಲಿಬೆಲೆ ಹೊಬಳಿ ಶಾಂತನಪುರ ಗ್ರಾಮದ ಸರ್ವೇ ನಂಬರ್ 9 ರಲ್ಲಿ ದಲಿತರಿಗೆ ಮಂಜೂರಾಗಿದ್ದ 240 ಎಕರೆಯನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಿ ಅಕ್ರಮ ಎಸಗಲಾಗಿದೆ. ಶಾಸಕರ ಮನವಿಯ ಮೇರೆಗೆ ಪ್ರಕರಣವನ್ನು ಎಸಿಬಿ ತನಿಖೆಗೆ ಒಪ್ಪಿಸಲಾಗುತ್ತದೆ ಎಂದು ಸದಸ್ಯ ರಘುನಾಥ್ ರಾವ್ ಮಲ್ಕಾಪೂರೆ ಅವರ ಪ್ರಶ್ನೆಗೆ ಉತ್ತರಿಸಿದರು.
ಸದಸ್ಯ ಎಸ್.ವಿ.ಸಂಕನೂರ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಅಶೋಕ್, ರಾಜ್ಯದಲ್ಲಿ 31 ಕಂದಾಯ ಜಿಲ್ಲೆಗಳು ಹಾಗೂ 53 ಉಪವಿಭಾಗಗಳಿವೆ. ಕಂದಾಯ ಇಲಾಖೆಗೆ 22 ಸಾವಿರ 33 ಹುದ್ದೆಗಳು ಮಂಜೂರಾಗಿದ್ದು, 16 ಸಾವಿರದ 355 ಮಂದಿ ಕೆಲಸ ಮಾಡುತ್ತಿದ್ದಾರೆ. 5 ಸಾವಿರದ 678 ಹುದ್ದೆಗಳು ಖಾಲಿ ಇವೆ. ಎಸ್ ಡಿ ಎ ಮತ್ತು ಗ್ರಾಮ ಲೆಕ್ಕಿಗರನ್ನು ನೇಮಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.
ಸದಸ್ಯ ಅರುಣ್ ಅವರು ವಸತಿ ಯೋಜನೆಗಳ ಫಲಾನುಭವಿಗಳಿಗೆ ಹಂಚಿಕೆಯಾದ ಮನೆಗಳ ಜಿಪಿಎಸ್ ಅಳವಡಿಕೆಯಲ್ಲಿ ತಾಂತ್ರಿಕ ತೊಂದರೆಯಾಗುತ್ತಿರುವುದನ್ನು ಪ್ರಸ್ತಾಪಿಸಿದರು. ಸುಮಾರು ವರ್ಷಗಳ ಹಿಂದೆ ನಿರ್ಮಿಸಿರುವ ಹಳೆ ಮನೆಗಳನ್ನು ಜಿಪಿಎಸ್ ಅಳವಡಿಸಿರುವ ಕಾರಣ ಅಂತಹ ಮನೆಗಳನ್ನು ಹಂತವಾರು ಪೋಟೋ ಇರದ ಮನೆಗಳೆಂದು ಪರಿಗಣಿಸಿ ತಾತ್ಕಾಲಿಕವಾಗಿ ಅನುದಾವನ್ನು ತಡೆ ಹಿಡಿಯಲಾಗಿದೆ. ರಾಜ್ಯದಲ್ಲಿ ಇಂತಹ 37 ಸಾವಿರದ 252 ಮನೆಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಗದ್ದಲದ ನಡುವೆ ಸಚಿವರು ಸದಸ್ಯರು ಕೇಳಿದ ಪ್ರಶ್ನೆಗೆ ಬದಲಿ ಉತ್ತರ ನೀಡಿದರು. ಸದಸ್ಯ ಸಿ.ಎನ್.ಮಂಜೇಗೌಡ ಮಳೆ ಹಾನಿ ಪರಿಹಾರಕ್ಕೆ ಚಾಮರಾಜನಗರ, ಮೈಸೂರು ಜಿಲ್ಲೆಯಲ್ಲಿ ಬಾಕಿ ಇರುವ ಅರ್ಜಿಗಳ ಸಂಖ್ಯೆ ಎಷ್ಟು ಎಂದು ಉಪಪ್ರಶ್ನೆ ಕೇಳಿದಾಗ, ಕಂದಾಯ ಸಚಿವರು ರಾಜ್ಯದಲ್ಲಿ ಸರ್ವೆ ಕಾರ್ಯಕ್ಕೆ ಸುಮಾರು 2 ಲಕ್ಷ ಅರ್ಜಿಗಳು ಬಾಕಿ ಇವೆ. ಖಾಸಗಿ ಸರ್ವೆಯರ್ ಗಳ ಮೂಲಕ ಸಮೀಕ್ಷಾ ಕಾರ್ಯವನ್ನು ಚುರುಕುಗೊಳಿಸಲಾಗುತ್ತದೆ. ಸರ್ವೆಗೆ ನಿಗದಿ ಪಡಿಸಲಾದ ಶುಲ್ಕವನ್ನು ಕಡಿಮೆ ಮಾಡಲಾಗಿದೆ ಎಂದು ಹೇಳಿದರು.
ಆದರೆ ಉತ್ತರ ಬದಲಾಗಿದ್ದರಿಂದ ಸದಸ್ಯರು ಗೊಂದಲಕ್ಕೆ ಒಳಗಾದರು, ಆಡಳಿತ ಪಕ್ಷದ ಸದಸ್ಯರು ಬಂದು ಸಚಿವರನ್ನು ಎಚ್ಚರಿಸಿದರು. ಗಲಾಟೆಯಲ್ಲಿ ಏನು ಸರಿಯಾಗಿ ಕೇಳುತ್ತಿಲ್ಲ ಎಂದು ಹೇಳಿ ಸಚಿವರು ಸರಿ ಉತ್ತರವನ್ನು ನೀಡಿದರು. ಪ್ರಶ್ನೋತ್ತರದ ಬಳಿಕ ಶೂನ್ಯವೇಳೆಯ ಪ್ರಸ್ತಾವನೆಗಳು ಮಂಡನೆಯಾಗಿವೆ ಎಂದು ಸಭಾಪತಿ ಘೊಷಿಸಿ, ಕಲಾಪವನ್ನು ನಾಳೆಗೆ ಮುಂದೂಡಿದರು.

Articles You Might Like

Share This Article