ಬೆಂಗಳೂರು,ಫೆ.13- ಮುಖ್ಯಮಂತ್ರಿಯಾಗಲು ಹಣೆಬರಹ ಇರಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಯಲ್ಲಿ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಶಿವಾನಂದ ಎಸ್.ಪಾಟೀಲ್ ಅವರು ಹೊಸ ತಾಲ್ಲೂಕುಗಳಲ್ಲಿ ತಾಲ್ಲೂಕು ಆಡಳಿತ ಸೌಧ ಕಟ್ಟಡ ಕಟ್ಟಲು ಅವಕಾಶ ಮಾಡಿಕೊಡಿ. ನೀವು ಹಿರಿಯ ಸಚಿವರು.
ಮುಂದೆ ಮುಖ್ಯಮಂತ್ರಿಯಾಗುವವರು. 50 ತಾಲ್ಲೂಕುಗಳಿಗೂ ಒಂದೊಂದು ಆಡಳಿತ ಸೌಧ ಮಂಜೂರು ಮಾಡಿ ನಮ್ಮ ಕಳಕಳಿಗೆ ಸ್ಪಂದಿಸಬೇಕು ಎಂದರು. ಆಗ ಪ್ರತಿಕ್ರಿಯಿಸಿದ ಅಶೋಕ್ ಮುಖ್ಯಮಂತ್ರಿಯಾಗಲು ಹಣೆಬರಹ ಇರಬೇಕು. ನಾವು ನೀವು ಮಾತನಾಡಿದರೆ ಆಗುವುದಿಲ್ಲ.ನಿಮ್ಮ ಪ್ರಸ್ತಾಪ ಆರ್ಥಿಕ ಇಲಾಖೆಗೆ ಸಂಬಂಧಿಸಿದೆ. ಹೀಗಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಆಡಳಿತ ಸೌಧ ಕಟ್ಟಡ ನಿರ್ಮಿಸಲು ಅನುದಾನ ಮಂಜೂರು ಮಾಡಿಸುವ ಭರವಸೆ ನೀಡಿದರು.
ಮಧ್ಯಪ್ರವೇಶಿಸಿದ ಸಚಿವ ಮಾಧುಸ್ವಾಮಿ,ಶಿವಾನಂದ ಪಾಟೀಲ್ ಅವರನ್ನು ಉದ್ದೇಶಿಸಿ ನೀವು ಗೊಂದಲ ನೀಡಿ ಮುಖ್ಯಮಂತ್ರಿ ಮಾಡಿದರೆ ಗ್ಯಾರಂಟಿ ಅನುದಾನ ಕೊಡುತ್ತೇವೆ ಎಂದು ಛೇಡಿಸಿದರು. ಇದಕ್ಕೂ ಮುನ್ನ ಉತ್ತರಿಸಿದ ಅಶೋಕ್, ಹೊಸದಾಗಿ ರಚನೆಯಾದ ತಾಲ್ಲೂಕುಗಳಲ್ಲಿ ತಾಲ್ಲೂಕು ಆಡಳಿತ ಸೌಧ ನಿರ್ಮಿಸಲು ಕಟ್ಟಡಕ್ಕೆ ಅಗತ್ಯವಿರುವ ಮೂಲಸೌಕರ್ಯಗಳಾದ ಕುಡಿಯುವ ನೀರು, ಪೀಠೋಪಕರಣ, ಒಳಾಂಗಣ ವಿನ್ಯಾಸ,ವಿದ್ಯುಚ್ಚಕ್ತಿ ಸೌಲಭ್ಯ, ಶೌಚಾಲಯ ಇನ್ನಿತರೆ ಪೂರಕ ಸೌಲಭ್ಯಗಳಿಗೆ 10 ಕೋಟಿ ರೂ. ವೆಚ್ಚದ ಮಿತಿಯಲ್ಲಿ ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ.
ಅದರಂತೆ ಜಿಲ್ಲಾಕಾರಿಗಳಿಂದ ಸ್ಥಳ ಗುರುತಿಸಿ ಕಟ್ಟಡ ನಿರ್ಮಿಸಲು ಸವಿವರವಾದ ಅಂದಾಜು ಪಟ್ಟಿ ಮತ್ತು ನಕ್ಷೆಯೊಂದಿಗೆ ಪ್ರಸ್ತಾವನೆಯನ್ನು ಸ್ವೀಕರಿಸಿ ಆರ್ಥಿಕ ಇಲಾಖೆ ಸಹಮತಿಯೊಂದಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಹೊಸದಾಗಿ ರಚನೆಯಾದ ಕೆಜಿಎಫ್,ಮೂಡಬಿದರೆ, ಕಡಬ, ಮುಲ್ಕಿ, ಬ್ರಹ್ಮಾವರ, ಕಾಪು, ಬೈಂದೂರು, ಹೆಬ್ರಿ , ಕುರುಗೋಡು, ಕಂಪ್ಲಿ, ಬೊಬಲೇಶ್ವರ, ತ್ರಿಕೋಟ, ದಾಂಡೇಲಿ ತಾಲ್ಲೂಕುಗಳಲ್ಲಿ ಆಡಳಿತ ಸೌಧದ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
#RAshok, #CMPost,