ದೇವರು ಬಲು ಕ್ರೂರಿ : ಧ್ರುವನಾರಯಣ್ ಅಗಲಿಕೆಗೆ ಡಿಕೆಶಿ ಕಂಬನಿ

Social Share

ಬೆಂಗಳೂರು,ಮಾ.11- ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಯಣ್ ಅವರ ನಿಧನದಿಂದ ನಮ್ಮ ಕುಟುಂಬದ ಸದಸ್ಯನನ್ನು ಕಳೆದುಕೊಂಡಂತಾಗಿದೆ, ಇದು ನಮಗೆ ಅನಿರೀಕ್ಷಿತ ಆಘಾತ, ದೇವರು ಬಲು ಕ್ರೂರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಂಬನಿ ಶೋಕ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರು ಇಷ್ಟೊಂದು ಕ್ರೂರಿ ಆಗಬಾರದಿತ್ತು. ದೇವರು ಇದ್ದಾನೋ ಇಲ್ಲವೋ ಅನ್ನುವಷ್ಟು ಅನುಮಾನವನ್ನು ಧ್ರುವನಾರಾಯಣ ಸಾವು ತಂದಿದೆ. ಧ್ರುವ ನಮ್ಮ ಕಾರ್ಯಾಧ್ಯಕ್ಷ ಎಂಬುದಕ್ಕಿಂತ ನಮ್ಮ ಕುಟುಂಬದ ಸದಸ್ಯ, ಸಹೋದರನಂತಿದ್ದರು. ನಮ್ಮ ಹೃದಯಕ್ಕೆ ಹತ್ತಿರವಾಗಿದ್ದರು. ಅವರ ಅಗಲಿಕೆ ಬಗ್ಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ ಎಂದು ದಿಗ್ಭ್ರಾಂತರಾಗಿ ಪ್ರತಿಕ್ರಿಯಿಸಿದರು.

ಹುಟ್ಟು ಸಾವಿನ ನಡುವೆ ಇರುವ ಸಮಯವನ್ನು ಹೇಗೆ ಸದ್ಬಳಕೆ ಮಾಡಬಹುದು ಎನ್ನುವುದಕ್ಕೆ ಧ್ರುವನಾರಾಯಣ್ ಉತ್ತಮ ಸಾಕ್ಷಿ. ಒಳ್ಳೆಯತನಕ್ಕೆ ಅವರು ಮತ್ತೊಂದು ಉದಾಹರಣೆ. ಅವರ ಸಾರ್ಥಕ ಬದುಕು ಆದರ್ಶಪ್ರಾಯ. ಅವರ ಅಗಲಿಕೆ ನಷ್ಟಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ರಾಜಕೀಯ ರಂಗಕ್ಕೆ ಬಹುದೊಡ್ಡ ನಷ್ಟ.

ಜಪಾನ್ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದವರ ಬಂಧನ

ಅವರು ಯಾವುದೇ ಜವಾಬ್ದಾರಿ ತೆಗೆದುಕೊಂಡರೂ ಸಮರ್ಥವಾಗಿ ನಿಭಾಯಿಸುತ್ತಿದ್ದರು. ಬಹಳ ಸಜ್ಜನ ರಾಜಕಾರಣಿ. ಮಾನವೀಯತೆ, ಸ್ನೇಹ, ಬೇರೆಯವರನ್ನು ನೋಯಿಸದ ವ್ಯಕ್ತಿತ್ವ ಹೊಂದಿದ್ದ ವ್ಯಕ್ತಿ. ಎಲ್ಲ ಸಮಾಜ, ಧರ್ಮದವರನ್ನು ಸಮಾನವಾಗಿ ಪ್ರೀತಿಯಿಂದ ಕಾಣುತ್ತಿದ್ದರು. ಎಷ್ಟೇ ಕಷ್ಟವಿದ್ದರೂ ಬಹಳ ತಾಳ್ಮೆಯಿಂದ ಕೆಲಸ ಮಾಡುತ್ತಿದ್ದರು. ಅವರು ಪಕ್ಷದ ದೊಡ್ಡ ಆಸ್ತಿ ಆಗಿದ್ದರು. ರಾಜ್ಯ ರಾಜಕೀಯದ ಇತಿಹಾಸದಲ್ಲಿ ಧ್ರುವನಾರಯಣ್ ಅವರ ಸೇವೆ ಒಂದು ಉತ್ತಮ ಅಧ್ಯಾಯ ಎಂದರು.

ಅವರ ಅಗಲಿಕೆ ಸುದ್ದಿ ತಿಳಿದ ಸೋನಿಯಾ ಗಾಂಧಿ ಅವರು ನನಗೆ ಕರೆ ಮಾಡಿ ನಂಬಲು ಸಾಧ್ಯವಿಲ್ಲ ಎಂದು ಹೇಳಿದರು. ನಮಗೂ ನಂಬಲು ಸಾಧ್ಯವಾಗುತ್ತಿಲ್ಲ. ರಾಹುಲ್‍ಗಾಂಧಿ ವಿದೇಶದಿಂದ ಕರೆ ಮಾಡಿ ಶೋಕ ವ್ಯಕ್ತಪಡಿಸಿದರು. ಇಂದು ನಡೆಯಬೇಕಿದ್ದ ರಾಮನಗರದ ಪ್ರಜಾಧ್ವನಿ ಯಾತ್ರೆ ರದ್ದು ಮಾಡಿದ್ದೇವೆ.

ದಂತ ವೈದ್ಯೆಯನ್ನು ಹತ್ಯೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ

ಈ ನಷ್ಟವನ್ನು ತಡೆಯಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನಮಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಅವರು ಮಾಡಿದ ಸೇವೆ, ಆರೋಗ್ಯ ಹಸ್ತ ಕಾರ್ಯಕ್ರಮದ ಮೂಲಕ ರಾಜ್ಯ ಪ್ರವಾಸ ಮಾಡಿದ್ದರು.

ಚಾಮರಾಜನಗರ ಆಕ್ಸಿಜನ್ ದುರಂತ ಸಂದರ್ಭದಲ್ಲಿ ಅವರ ಸ್ಪಂದನೆ, ಬದ್ಧತೆ ಎಲ್ಲವೂ ಇತಿಹಾಸ ಪುಟ ಸೇರಲಿದೆ ಎಂದು ಶೋಕಿಸಿದ್ದಾರೆ.

ಅವರ ಅಗಲಿಕೆ ನೋವು ನನ್ನನ್ನು ಆವರಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನಮ್ಮೆಲ್ಲರಿಗೂ ಭಗವಂತ ನೀಡಲಿ ಎಂದು ಕಣ್ಣೀರು ಹಾಕಿದ್ದಾರೆ.

R Dhruvanarayana, passes away, KPCC president, DK Shivakumar,

Articles You Might Like

Share This Article