ನವದೆಹಲಿ, ಆ.7- ಕೇಂದ್ರ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ, ಪುಣ್ಯತಿಥಿಯ ನಮನಗಳನ್ನು ಕೂಡ ಬಂಡಾಯದ ಕಾವ್ಯಗಳ ಧಾಟಿಯಲ್ಲೇ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಈವರೆಗೂ ಸೌಮ್ಯ ಸ್ವಭಾವದಂತಿದ್ದ ರಾಹುಲ್‍ಗಾಂಧಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತಮ್ಮ ತಾಯಿ ಸೋನಿಯಾ ಗಾಂಧಿ ವಿಚಾರಣೆ ನಡೆಸಿ, ಹೆರಾಲ್ಡ್ ಹೌಸ್ ಜಪ್ತಿ ಮಾಡಿ, ಕಾಂಗ್ರೆಸ್ ಕಚೇರಿಗೆ ದಿಗ್ಭಂದನ ಹಾಕಲು ಯತ್ನಿಸಿದ ಬಳಿಕ ಸಿಟ್ಟಿಗೆದ್ದಂತೆ ಕಾಣುತ್ತಿದೆ.
ಏನು ಮಾಡುತ್ತೀರೋ ಮಾಡಿ ನಾನು ಹೆದರಲ್ಲ, ಜನ ಪರವಾಗಿ ಧ್ವನಿ ಎತ್ತುವ ನನ್ನ ಕರ್ತವ್ಯಗಳಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿ ನಿರಂತರ ಪ್ರತಿಭಟನೆ ನಡೆಸಿದ್ದಾರೆ. ಸಂಸತ್ ಒಳಗೆ ಹೊರಗೆ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದೆ.
ನೋಬೆಲ್ ಪ್ರಶಸ್ತಿ ಪುರಸ್ಕøತ ದೇಶದ ಖ್ಯಾತ ಸಾಹಿತಿ ರವೀಂದ್ರನಾಥ್ ಠ್ಯಾಗೂರ್ ಅವರ 81ನೆ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಮನ ಸಲ್ಲಿಸಿರುವ ರಾಹುಲ್‍ಗಾಂಧಿ, ಬಂಡಾಯದ ಅಂಶಗಳಿರುವ ಠ್ಯಾಗೂರ್- ಅವರ ಪದ್ಯವೊಂದನ್ನು ಬಳಸಿಕೊಂಡಿದ್ದಾರೆ.
ಎಲ್ಲಿ ಮನಸ್ಸು ಭಯವಿಲ್ಲದೆ ಇರಲಿದೆಯೋ ಅಲ್ಲಿ ತಲೆ ಎತ್ತರದಲ್ಲಿ ಇರಲಿದೆ. ಅಲ್ಲಿ ಸತ್ಯದ ಆಳದಿಂದ ಮಾತುಗಳು ಹೊರ ಬರಲಿವೆ. ಅಂತಹ ಸ್ವಾತಂತ್ರ್ಯದ ಸ್ವರ್ಗಕ್ಕೆ ನನ್ನ ತಂದೆ, ನಮ್ಮ ದೇಶ ಎಚ್ಚರಗೊಳ್ಳಬೇಕಿದೆ ಎಂಬ ರವೀಂದ್ರ ನಾಥ್ ಠಾಗೋರ್ ಅವರ ಪದ್ಯದ ಸಾಲುಗಳ ಮೂಲಕವೇ ಪುಣ್ಯಸ್ಮರಣೆಯ ಅಂಗವಾಗಿ ವಿನಮ್ರ ನಮನಗಳು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವೂ ಇದೇ ಸಾಲುಗಳನ್ನು ಫೋಸ್ಟ್ ಮಾಡಿದ್ದು, ಲೇಖಕ, ಸಾಹಿತಿ, ಸಂಗೀತ ನಿರ್ದೇಶಕ, ಚಿತ್ರಕಲಾವಿದ, ಪತ್ರಕರ್ತ, ತತ್ವಜ್ಞಾನಿ ರವೀಂದ್ರ ನಾಥ್ ಠ್ಯಾಗೂರ್ ಅವರು ದೇಶಕ್ಕೆ ರಾಷ್ಟ್ರಗೀತೆ ನೀಡುವ ಮೂಲಕ, ತಮ್ಮ ಬುದ್ದಿವಂತಿಕೆಯಿಂದ ದೇಶಕ್ಕೆ ಮಾರ್ಗದರ್ಶನ ಮತ್ತು ಸ್ಪೂರ್ತಿ ನೀಡಿದ್ದಾರೆ ಎಂದಿದೆ.